Tuesday, 8 October 2013

ನನ್ನ ಅಡಿಕೆ ಲೆಕ್ಕಾಚಾರ

ಶಾಲೆಯ ನಾಲ್ಕು ಗೋಡೆಯ ಸೀಮಿತ, ರಚನಾತ್ಮಕ ವಿಷಯ ಬೋಧನೆಗಿಂತ ಮಿಗಿಲಾಗಿ ಶಾಲೆಯ ಹೊರಗಿನ ವಾತಾವರಣದಲ್ಲಿ ಕಲಿಕೆ ಹೆಚ್ಚಾಗುತ್ತದೆ. ಇದಕ್ಕೆ ಪುಷ್ಠಿ ಕೊಡುವ ಹಲವು ನಿದರ್ಶನಗಳು ಪ್ರತಿಯೊಬ್ಬರ ಜೀವನದಲ್ಲೂ ಇರಬಹುದು. 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಕೂಡ ಸತ್ವ ಪಡೆದುಕೊಳ್ಳುವುದು ಈ ವಿಚಾರ ಸಾರದಿಂದಲೆ. ಈ ಹಿನ್ನೆಲೆಯಿಂದ ಗಣಿತ ವಿಷಯಕ್ಕೆ ಸಂಬಂಧಿಸಿದ ನನ್ನ ಶಾಲಾ ಜೀವನವನ್ನು ಅವಲೋಕಿಸಿದರೆ, ಶಾಲೆಯ ನಾಲ್ಕು ಗೋಡೆಯ ಒಳಗೆ ಕಲಿಸಿದ ಗಣಿತ ನನ್ನ ತಲೆಯೊಳಗೆ ಹೊಗದಿದ್ದುದಕ್ಕೆ ನನ್ನಲ್ಲಿ ಕಾರಣಗಳಿಲ್ಲ. ಆದರೆ ಶಾಲೆಯ ಹೊರಗಿನ ವಾತಾವರಣದಲ್ಲಿ ಕಲಿತ ಲೆಕ್ಕಾಚಾರ ಅಥವಾ ಗಣಿತ ನನ್ನ ಜೀವನವನ್ನು ರೂಪಿಸುವಲ್ಲಿ ನನ್ನನ್ನು ಔದ್ಯೋಗಿಕವಾಗಿ ಬಲಗೊಳಿಸುವಲ್ಲಿ ಸಹಾಯಕವಾಯಿತು.

ಅಪ್ರಸ್ತುತವಾದರೂ ಸಾಂದರ್ಭಿಕ ನೆಲೆಗಟ್ಟಿನಿಂದ ಹೇಳುವುದಾದರೆ, ನನ್ನ ತಂದೆ ಒಂದು ಅಡಿಕೆ ಮಂಡಿಯಲ್ಲಿ (ವಕಾರಿ) ದಿನಗೂಲಿ ನೌಕರ. ಮಂಡಿಗೆ ಅಡಿಕೆ ವಿಲೇವಾರಿಗೆ ಬರುವ ರೈತರು, ವ್ಯಾಪಾರಸ್ತರು ಅಪ್ಪನ ಕವಳದ ಚಂಚಿಗೆ (ಎಲೆ ಅಡಿಕೆ ಚೀಲ) ಕೈಹಾಕುತ್ತಿದ್ದುದು ಸಾಮಾನ್ಯ. ತಾಂಬೂಲದ ರಸಸ್ವಾದದ ಜೊತೆ ನಡೆದ ಮಾತುಕತೆಯ ನಂತರ ತಾವು ತಂದ ಅಡಿಕೆ ಚೀಲದಿಂದ ಒಂದಷ್ಟು ಅಡಿಕೆಗಳನ್ನು ತಂದೆಯವರ ಕೈಗೆ ಕೊಟ್ಟು ಋಣಮುಕ್ತರಾಗುವುದು ಅವರ ವಾಡಿಕೆ. ಬರುವ ತಿಂಗಳ ಸಂಬಳದಲ್ಲಿ ನಾಲ್ಕು ಜನ ಮಕ್ಕಳ ಜೊತೆ ಇಡೀ ಸಂಸಾರ ನಿಭಾಯಿಸಲು ಸಾದ್ಯವಾಗದ, ಬಲು ಕಷ್ಟದ ಸಂದರ್ಭವದು. ಹೀಗೆ ಪ್ರತಿದಿನ ಮಂಡಿಗೆ ಬರುವ ವ್ಯಾಪಾರಸ್ತರು ನೀಡಿದ ಅಡಿಕೆಯ ಮೊತ್ತವನ್ನು ವಾರದ ಕೊನೆ, ಅಂದರೆ ಭಾನುವಾರದಂದು ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರÀ ತೂಗಿಸುವುದು ತಂದೆಯ ಉಪವೃತ್ತಿಯಾಗಿತ್ತು.

ಈ ಮೇಲಿನ ಪೀಠಿಕೆಯ ಉದ್ದೇಶ ಅಡಿಕೆ ಮಂಡಿಗೂ ಹಾಗೂ ನನ್ನ ಲೆಕ್ಕಾಚಾರಕ್ಕೂ ಇರುವ ಸಂಬಂಧವನ್ನು ನಿರೂಪಿಸುವುದು. ಪ್ರತಿ ಶನಿವಾರ ಶಾಲೆಗೆ ಒಪ್ಪತ್ತು (ಅರ್ಧದಿನ), ಇನ್ನುಳಿದ ಅರ್ಧದಿನ ನಾನಿರುತ್ತಿದ್ದುದು ಅಪ್ಪ ಕೆಲಸ ಮಾಡುವ ಅಡಿಕೆ ಮಂಡಿಯಲ್ಲಿ. ಮಂಡಿಯಲ್ಲಿ ಅಪ್ಪನ ಕೆಲಸ ವ್ಯಾಪಾರಸ್ತರು ತಂದ ಅಡಿಕೆ ಚೀಲಗಳನ್ನು ಕಾಟದ (ತಕ್ಕಡಿ) ಮೇಲಿಟ್ಟು ಅದರ ತೂಕವನ್ನು ಬರೆದುಕೊಳ್ಳುವುದು ಮತ್ತು ಬೆಲೆಯನ್ನು ನಿಗದಿಪಡಿಸುವುದು. ಅಪ್ಪನ ಜೊತೆಯಲ್ಲಿ ನಾನೂ ಕೂಡ ತೂಕ ಸರಿಪಡಿಸುವುದಕ್ಕಾಗಿ ಚೀಲಕ್ಕೆ ಅಡಿಕೆಯನ್ನು ಸೇರಿಸುವ ಹಾಗೂ ತೆಗೆಯುವ (ಸಂಕಲನ ಮತ್ತು ವ್ಯವಕಲನ) ಕೆಲಸವನ್ನು ನಿಭಾಯಿಸುತ್ತಿದ್ದೆ. ಮಂಡಿಯಲ್ಲಿ ಅಡಿಕೆಗಳೊಂದಿಗೆ ಆಡುವುದೆಂದರೆ ನನಗೆ ಬಲು ಮೋಜು. ಅಡಿಕೆಗಳನ್ನು ಎಣಿಸುವುದು, ಎಷ್ಟು ಅಡಿಕೆಗಳನ್ನು ಸೇರಿಸಿದರೆ 10 ಗ್ರಾಂ ಅಗುತ್ತದೆ, ಎಷ್ಟು ಅಡಿಕೆಗಳನ್ನು ಸೇರಿಸಿದರೆ 1 ಕಿಲೋ ಆಗುತ್ತದೆ ಎಂದು ಬರೆದುಕೊಳ್ಳುವುದು, ಇವೆಲ್ಲವೂ ಆ ಅಟಗಳಲ್ಲಿ ನನಗೆ ಗೊತ್ತಿಲ್ಲದೆ ಸೇರಿಕೊಂಡಿದ್ದ ಗಣಿತ ಕ್ರಿಯೆಗಳಾಗಿದ್ದವು. ನನಗೆ ಗ್ರಾಂ, ಕಿಲೊ ಗ್ರಾಂ, ಕ್ವಿಂಟಾಲು ಹಾಗೂ ಟನ್‍ಗಳ ಪರಿಚಯವಾದದ್ದು ಆ ಅಡಿಕೆ ಮಂಡಿಯಲ್ಲಿ.

ಅಲ್ಲದೆ ಅಪ್ಪನ ಜೊತೆಯಲ್ಲಿ ಭಾನುವಾರ ಅಡಿಕೆ ಮಾರಲು ಹೋಗುವಾಗ ನಾನೂ ಹೋಗುತ್ತಿದ್ದೆ. ಅಪ್ಪನಿಗೆ ಮಂಡಿಯಲ್ಲಿ ತೂಕ ಹಾಗೂ ಬೆಲೆಯ ಜ್ಞಾನ ಇದ್ದುದರಿಂದ ಪೇಟೆಯ ಅಡಿಕೆ ಮಂಡಿಗಳಲ್ಲಿ ಸರಿಯಾದ ಚೌಕಾಶಿ ಮಾಡಿ ಸಮ ಪ್ರಮಾಣದ ಲಾಭ ಪಡೆಯುತ್ತಿದ್ದರು. ಇದು ನನಗೆ ವ್ಯವಹಾರ ಜ್ಞಾನ ಅರ್ಥ ಮಾಡಿಕೊಳ್ಳಲು ಸಾದ್ಯವಾಯಿತು. ಶಾಲೆಯನ್ನೇ ಕಲಿಯದೆ ಬರಿ ವ್ಯವಹಾರ ಜ್ಞಾನ ಹಾಗೂ ಅನುಭವದಿಂದ ವ್ಯಾಪಾರದಲ್ಲಿ ಪರಿಣಿತಿ ಪಡೆದ ತಂದೆಯ ಪ್ರವೃತ್ತಿ ನನ್ನಲ್ಲಿ ಬೆಳೆದದ್ದು ಆಶ್ಚರ್ಯವಲ್ಲ. ಬಹುಶಹ ಈ ಕಾರಣದಿಂದಲೆ ಶಾಲೆಯಲ್ಲಿ ಕಲಿಸುವ ಯಾವುದೇ ಗಣಿತದ ನಿಯಮಗಳು ನನಗೆ ಆಸಕ್ತಿ ಮೂಡಿಸುತ್ತಿರಲಿಲ್ಲ. ಹಾಗಾಗಿ ನಾನು ಶಾಲೆಯ ಗಣಿತ ಪರೀಕ್ಷೆಯಲ್ಲಿ 15ಕ್ಕಿಂತ (ಒಟ್ಟು ಅಂಕ 25) ಹೆಚ್ಚು ಅಂಕ ಗಳಿಸಿದ ದಾಖಲೆಯೂ ಇಲ್ಲ. ಗಣಿತ ಶಿಕ್ಷಕರ ಹೊಡೆತಕ್ಕೆ ಮೈಮೇಲೆ ಬರೆಗಳೆದ್ದರೂ ಈ ಚರ್ಮಕ್ಕೆ ಆ ವಿಷಯಕ್ಕೆ ಮರ್ಯಾದೆ ಕೊಡುವ ಸಂವೇದನೆ ಇರಲಿಲ್ಲ. ಆದರೆ ಅಪ್ಪ ಪ್ರತಿ ದಿನ ತರುವ ಚಿಲ್ಲರೆಗಳನ್ನು ಎಣಿಸುವ, ಅಮ್ಮ ಕೊಡಿಸಿದ್ದ ಮಡಿಕೆ ಹುಂಡಿಯಲ್ಲಿ ನಾಕಾಣೆ, ಎಂಟಾಣೆ ನಾಣ್ಯ ಕೂಡಿಡುವ ವ್ಯವಹಾರ ಅಚ್ಚುಕಟ್ಟಾಗಿತ್ತು. ಹಾಗೂ ಹೀಗೂ ಅಂಬೆಗಾಲಿಡುತ್ತ ಎಸ್.ಎಸ್.ಎಲ್.ಸಿ ಪಾಸಾದಾಗ ಬಹಳ ಸಂತೋಷ ಪಟ್ಟಿದ್ದೆ. ಇನ್ನು ಮುಂದೆ ಗಣಿತ ವಿಷಯ ನನ್ನ ಜೀವನದಲ್ಲೇ ಬರಲಿಕ್ಕಿಲ್ಲ ಎಂದು ಕಲಾ ವಿಭಾಗವನ್ನು ಆಯ್ದುಕೊಂಡೆ.

ಅಲ್ಲೊಂದು ಆಶ್ಚರ್ಯ!! ಇತರ ವಿಷಯಗಳೊಂದಿಗೆ ಕಲಾ ವಿಭಾಗದಲ್ಲಿ ನಾನು ಆಯ್ದುಕೊಂಡ ಮತ್ತೊಂದು ವಿಷಯ ಅರ್ಥಶಾಸ್ತ್ರ. ಈ ವಿಷಯ ತನ್ನನ್ನು ಅನಾವರಣಗೊಳಿಸಕೊಳ್ಳುತ್ತಾ ಹೋಗುವಾಗ ನನಗೆ ಅರ್ಥವಾದದ್ದು, ಅರ್ಥಶಾಸ್ತ್ರಕ್ಕೆ ಕೊಡುಗೆಯನ್ನು ನೀಡಿದ ಎಲ್ಲಾ ಅರ್ಥಶಾಸ್ತ್ರಜ್ಞರೂ ಪ್ರಸಿದ್ಧ ಗಣಿತ ಶಾಸ್ತ್ರಜ್ಞರು ಎಂದು. ಇಲ್ಲಿ ಸಿದ್ಧಾಂತಗಳ ಜೊತೆಯಲ್ಲಿ ಸಂಖ್ಯಾಶಾಸ್ತ್ರದ ಕೆಲವು ಲೆಕ್ಕಾಚಾರ ಮಾಡಬೇಕಿತ್ತು. ಆದರೆ ಇಲ್ಲಿ ನನ್ನ ಜೀವನವನ್ನು ಸುಲಭಗೊಳಿಸಿದ್ದು ನಾನು ಈ ಹಿಂದೆ ತಂದೆಯೊಂದಿಗೆ ಕಳೆದ ಅಡಿಕೆ ಮಂಡಿಯ ಹಾಗೂ ಮಾರುಕಟ್ಟೆ ಸುತ್ತಿ ಪಡೆದ ವ್ಯವಹಾರ ಅನುಭವಗಳು. ಬೇಡಿಕೆ-ಪೂರೈಕೆ, ಏಕಸ್ವಾಮ್ಯ-ದ್ವೀಸ್ವಾಮ್ಯ ಮಾರುಕಟ್ಟೆ, ಮುಕ್ತ ಮಾರುಕಟ್ಟೆ, ಬೆಲೆ ನಿರ್ಧಾರ, ಅಂತರರಾಷ್ಟ್ರೀಯ ವ್ಯಾಪಾರ ಹೀಗೆ ಅರ್ಥಶಾಸ್ತ್ರದ ಈ ಎಲ್ಲಾ ಸಿದ್ಧಾಂತಗಳ ಹಿಂದಿನ ಸಾಮಾನ್ಯ ಜ್ಞಾನ ನಾನು ಶಾಲೆಯ ಹೊರಗೆ ಮಂಡಿಯಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಕಲಿತ ಅನುಭವಗಳೆ ಆಗಿದ್ದವು.

ಒಂದು ಅರ್ಥದಲ್ಲಿ ನನಗೆ ಗಣಿತದಲ್ಲಿ ಸ್ವಲ್ಪ ಆಸಕ್ತಿ ಮೂಡಿಸಿದ್ದು ಅರ್ಥಶಾಸ್ತ್ರ. ಅಭಿವೃದ್ಧಿ ಅರ್ಥಶಾಸ್ತ್ರದ ಅಭಿವೃದ್ಧಿ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ ಹಾಗು ಬಡತನ ಸೂಚ್ಯಂಕಗಳನ್ನು ಮಾಪನ ಮಾಡುವಾಗ ಸಮೀಕರಣಗಳನ್ನು ಬಳಸಿ ತುಲನಾತ್ಮಕವಾಗಿ ವಿಶ್ಲೇಷಿಸುವ ವಿಧಾನ ನನ್ನನ್ನು ಹೆಚ್ಚು ಆಕರ್ಷಿಸಿತು. ಇಲ್ಲಿ ಜೀವನಕ್ಕೆ ಹತ್ತಿರವಾದ ಬಡತನದ ಸತ್ಯತೆ ಮತ್ತು ಕಾರಣ, ವ್ಯವಹಾರದ ರೂಪ ರೇಶೆಗಳು, ಆಸೆ, ಸಂಪನ್ಮೂಲ ಇವೆಲ್ಲವುಗಳನ್ನೂ ಸಂಖ್ಯೆಗಳ ಮೂಲಕ ನಿರೂಪಿಸುವ ವಿಧಾನ ಮುಂದಿನ ದಿಕ್ಕನ್ನು ಬದಲಾಯಿಸಿತು. ಇವೆಲ್ಲವೂ ನಾನು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಅತ್ಯಂತ ಕ್ಷಿಷ್ಟ ವಿಷಯಗಳಾದ ಇಕನಾಮಿಟ್ರಿಕ್ಸ್ ಹಾಗೂ ಟೈಮ್ ಸೀರಿಸ್ ಅನ್ನು ಪಾಸುಮಾಡಲು ಸಹಾಯಕವಾದವು.

ಹೀಗೆ ನನ್ನ ಲೆಕ್ಕಾಚಾರ ತಲೆಕೆಳಗಾಗಿ ಕೊನೆಯಲ್ಲಿ ಕೆಲಸಮಾಡಬೇಕಾಗಿ ಬಂದದ್ದು ಒಂದು ಸಂಶೋಧನಾ ಸಂಸ್ಥೆಯಲ್ಲಿ. ಇಲ್ಲಿಯೂ ಕೂಡ ನನಗೆ ಸಿಕ್ಕಿದ್ದು ಅಂಕಿಗಳನ್ನು ಸಂಗ್ರಹಿಸುವ ಮತ್ತು ಅದನ್ನು ವಿಶ್ಲೇಷಿಸುವ ಕೆಲವೇ. ದಾರಿಯುದ್ದಕ್ಕೂ ಬೇಡ ಎಂದು ಬಂದ ಈ ಲೆಕ್ಕಾಚಾರವೇ ಕೊನೆಗೆ ನನ್ನ ಕೈ ಹಿಡಿದದ್ದು, ಬದುಕನ್ನು ರೂಪಿಸಿದ್ದು. ಶಾಲೆಯಲ್ಲಿ ಗಣಿತ ಕಲಿಯದಿದ್ದರೂ ನನ್ನ ಜೀವನಾನುಭವ ಹಾಗೂ ಅರ್ಥಶಾಸ್ತ್ರ ನನಗೆ ಮುಂದೆ ಅದರ ಮೇಲೆ ಪ್ರೀತಿ ಬರಲು ಮತ್ತು ಕಲಿಯಲು ಪ್ರೇರೇಪಿಸಿದ್ದು.

ಈ ನನ್ನ ಅನುಭವದಂತೆಯೇ ಇಂದಿನ ನಮ್ಮ ಶಾಲೆಗಳಲ್ಲಿನ ಮಕ್ಕಳಿಗೂ ಆಗಿರಬಹುದು. ಅವರ ಇಂದಿನ ಶಾಲೆಯಾಚೆಗಿನ ಅನುಭವಗಳು ಮುಂದೊಂದು ದಿನ ಬದುಕಿಗೆ ದಾರಿತೋರಿಸಬಹುದಲ್ಲವೆ???

ಪಾತಿ-ಸಂಕು

ಸಾಯಂಕಾಲ 8ರ ಸಮಯ, ಸಣ್ಣ ಪುಶ್ಯ ಮಳೆ ಜೋರಾಗಿ ಸುರಿತಾ ಇದೆ. ಮನೆಯ ಸೋಗೆ ಹೊದಿಸಲು ಪುಶ್ಯನ ರಭಸಕ್ಕೆ ಈಡಾಗಿ ಜಿನಿ ಜಿನಿ ಸೋರುತ್ತಿದೆ. ಬೀಸೊ ಗಾಳಿ ಸುತ್ತಲೂ ಕಟ್ಟಿದ ಗೋಣಿ ತಾಟನ್ನು ಸೀಳಿಕೊಂಡು ಒಳಗೆ ನುಗ್ಗುತ್ತಿದೆ, ಗೋಣಿ ತಾಟು ಪಟ ಪಟನೆ ಬಡಿದುಕೊಳ್ಳತ್ತಿದೆ. ಮನೆಯ ಒಂದು ಮೂಲೆಯಲ್ಲಿ, ಗೊಬ್ಬರದ ಚೀಲದೊಳಗಿನ, ಗೋಣಿ ತಾಟಿನ ಬೆಚ್ಚನೆ ಹೊದಿಕೆಯೊಳಗಿಂದ ಆರು ಕಣ್ಣುಗಳು ಪಿಳಿ ಪಿಳಿ ನೋಡುತ್ತಿವೆ. ಮಿಂಚು ಬಂದು ಹೊಳೆದಾಗೆಲ್ಲಾ ಆ ಕಣ್ಣುಗಳು ದಾರಿಯತ್ತ ತಿರುಗುತ್ತವೆ....ಯಾರೋ ಬರಬಹುದು....ಅಮ್ಮ ಅಥವಾ ಅಪ್ಪ....ಗುಡುಗಿನ ಸದ್ದಿಗೆ ಆಗಾಗ ಎದೆಯಲ್ಲಿ ಸಣ್ಣ ಕಂಪನ...ಕಣ್ಣುಗಳು ಕಾಯುತ್ತಿವೆ....ಮೂಗು ಅರಳಿದೆ, ಎರಡು ತಟ್ಟೆ ಚೌ ಚೌ ಬಾತಿನ ವಾಸನೆಗಾಗಿ.

ಈ ಜೋರು ಮಳೆಯಲ್ಲಿ ಸಂಕು, ತನ್ನ ಕಾಲಿನ ನೋವನ್ನ ಮರೆಯೋದಿಕ್ಕಾಗಿ ಸಾರಾಯಿ ಅಂಗಡಿಯ ಬೆಂಚಿನ ಮೇಲೆ ಕೂತು ಎರಡು ಪೆಗ್ಗು ಸಾರಾಯಿ ಸುರಿದುಕೊಂಡು ಹಲಬುತ್ತಿದ್ದಾನೆ. ಆಗಾಗ ತನ್ನ ಟಾವೆಲಿನಲ್ಲಿ ಕಟ್ಟಿಕೊಂಡ ಚೌ ಚೌ ಬಾತಿನ ಪ್ಯಾಕೇಟನ್ನು ಮುಟ್ಟಿ ನೋಡುತ್ತಾನೆ ಮತ್ತು ತನ್ನ ಕೈಯನ್ನು ತನ್ನೆರಡು ಮೋಣಕಾಲಿನ ಮೇಲಿಟ್ಟು ಸವÀರುತ್ತಾನೆ. ಆ ಎರಡೂ ಕಾಲುಗಳೂ ಅಡಿಕೆ ಮಂಡಿಯ ಜೀತದಾಳುಗಳು, ಸುಮಾರು 20 ವರ್ಷಗಳ ಕಾಲ ಈ ಎರಡೂ ಕಾಲುಗಳು ಕ್ವಿಂಟಲ್‍ಗಳಷ್ಟು ಭಾರವನ್ನು ಹೊತ್ತು ನಡೆದಾಡಿವೆ. ಆ ಭಾರಕ್ಕೆ ಮಂಡಿಯ ನಡುವಿನ ದ್ರವ ಬತ್ತಿ ಹೋಗಿ ಈಗ ಯಮ ಯಾತನೆ ಕೊಡುತ್ತಿದೆ. ಎದ್ದು ನಿಂತು ನಡೆಯುವುದೇ ಭಾರವಾಗಿರುವಾಗ ಇನ್ನು ಈ ದೇಹದ ಮೇಲೆ ಭಾರ ಹೊತ್ತು ನಡೆಯುವುದನ್ನು ನೆನೆದಾಗ ಅವನ ಕಣ್ಣು ನೀರಾಗುತ್ತದೆ. ಪುಶ್ಯನಿಗೆ ಸುರಿಯುವುದೊಂದೇ ಗೊತ್ತು, ಸಂಕುವಿನ ಕಣ್ಣಿರು ಪುಶ್ಯನೆದೆಯ ಅಳವನ್ನು ತಲುಪುವುದೇ ಇಲ್ಲ. ಸರ್ವ ರೋಗಕ್ಕೆ ಸಾರಾಯಿ ಮದ್ದು ಎಂದು ನಂಬಿದ್ದ ಸಂಕು ಪ್ರತಿ ದಿನ ಸಾರಾಯಿ ಕುಡಿದು ತನ್ನ ನೋವನ್ನ ಮರೆಯುತ್ತಿದ್ದ. ಎನೋ ನೆನೆಸಿಕೊಂಡವನಂತೆ ಮೆಲ್ಲಗೆ ಎದ್ದ ಸಂಕು, ಟಾವೆಲನ್ನು ಹೆಗಲಿಗೇರಿಸಿ, ತನ್ನ ಉದ್ದನೇ ಚತ್ರಿಯನ್ನು ಬಿಡಿಸಿ, ಮೆಲ್ಲಗೆ ಕುಂಟು ಹಜ್ಜೆ ಇಡುತ್ತ, ಸುರಿವ ಮಳೆಯಲ್ಲಿ ಸಾರಾಯಿ ಅಂಗಡಿಯಿಂದ ಹೊರ ಬಿದ್ದ.

ಪಾತಿ, ಗಂಡನ ದುಡಿಮೆ ಮನೆಯ ಕರ್ಚಿಗೆ ಸಾಕಾಗದಿದ್ದುದರಿಂದ, ಮೂರು ಮಕ್ಕಳ ಪಾಲನೆ ಕಷ್ಟವಾದುದರಿಂದ, ದೂರದ ವಕಾರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಬೆಳಿಗ್ಗೆ 8ಕ್ಕೆ ಮನೆಯಿಂದ ಹೊರಬಿದ್ದರೆ ಆಕೆ ಮನೆ ಸೇರುತ್ತಿದ್ದುದು ಸಂಜೆ 8ಕ್ಕೆ. ಅಡಿಕೆಯ ಮೇಲಿನ ಚರ್ಮವನ್ನು ಸುಲಿವ ಆಕೆಯ ಕೈಗಳು ಮಳೆಯ ರಭಸಕ್ಕೆ ಮತ್ತು ಚಳಿಗೆ ಬಿಳುಚಿಕೊಂಡಿದ್ದವು. ಸ್ವಲ್ಪ ಶಾಖ ಸಿಕ್ಕರೆ ಸಾಕು ಈ ಕೈಗಳಿಗೆ ಮತ್ತೆ ನಾಳಿನ ಕೆಲಸಕ್ಕೆ ಬಿಡುವೆಲ್ಲಿ! ಬೆಳಿಗ್ಗೆ ಮನೆ ಬಿಟ್ಟ ಆಕೆ ಇನ್ನೂ ಮಕ್ಕಳ ಮುಖ ನೋಡಿಲ್ಲ, ಬೇಗ ಮನೆ ಸೇರೋಣ ಅಂದರೆ ಮಳೆ ಜೋರಾಗಿ ಸುರಿತಾ ಇದೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟರೆ ಮತ್ತಾರು ಇಲ್ಲ, ಸುರಿವ ಮಳೆಗೆ ಎಲ್ಲಿ ಮನೆ ಉದುರಿ ಬಿದ್ದೀತೋ ಎಂಬ ಭಯ, ಚಡಪಡಿಸುತ್ತಿದೆ ಆಕೆಯ ಮನಸ್ಸು.

ಅಮಲು ಸ್ವಲ್ಪ ಜಾಸ್ತಿಯಾದ ಕಾರಣ ಸಂಕು ಎಲ್ಲೋ ಎಡವಿ ಬಿದ್ದು ಮೊಣಕಾಲಿನಿಂದ ರಕ್ತ ಸುರಿಯುತ್ತಿತ್ತು. ಗಾಯದ ಮೇಲೆ ಬರೆ ಎಳೆದಂತಾಗಿತ್ತು ಆತನ ಸ್ಥಿತಿ. ಅಂತೂ ತೂರಾಡುತ್ತ ಮನೆಯ ಬಾಗಿಲನ್ನ ತಲುಪಿದ್ದ ಸಂಕು. ಇತ್ತ ದಾರಿ ಕಾಯುತ್ತ ಕುಳಿತಿದ್ದ ಮಕ್ಕಳಿಗೆ ಗೇಟಿನ ದೊಣಪೆ ಸರಿದಾಡಿದ ಸದ್ದು ಕೇಳಿ ಸ್ವಲ್ಪ ಧೈರ್ಯ ಬಂತು. ಮಕ್ಕಳಿಗೆ ತಂದೆ ಅಂದರೆ ತುಂಬಾ ಪ್ರೀತಿ ಆದರೆ ಆತನ ಕುಡಿತ ಮಕ್ಕಳ ಧೈರ್ಯವನ್ನು ಸೋಲಿಸುತ್ತಿತ್ತು. ಸಂಕುವಿಗೂ ಮಕ್ಕಳೆಂದರೆ ಪ್ರೀತಿ ಆದರೆ ದಿನವಿಡೀ ದುಡಿದು ದಣಿದ ದೇಹ, ಕಾಲಿನ ನೋವು ಮತ್ತು ಕುಡಿತದ ಅಮಲು ಮಕ್ಕಳ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡಿತ್ತು. ಕತ್ತಲೆಯಲ್ಲೇ ತಡವಿಕೊಂಡು, ಬಾಗಿಲಿಗೆ ಇಳಿಬಿಟ್ಟಿದ್ದ ಗೋಣಿ ತಾಟಿನ ತುದಿಯನ್ನ ಎತ್ತಿ ಒಳಗೆ ಅಡಿಯಿಟ್ಟ....ಒಳಗೂ ಕತ್ತಲು, ಬಹುಷಹ ಅವನಿಗೂ ಬೆಳಕು ಬೇಕಿರಲಿಲ್ಲ. ಕೈ ಊರಿ, ಪಕ್ಕದಲ್ಲಿ ಅರ್ಧಕ್ಕೆ ಕಟ್ಟಿದ್ದ ಮಣ್ಣಿನ ಗೋಡೆಯ ಮೇಲೆ ಕೂತು ಬೀಡಿಗಾಗಿ ತಡಕಾಡಿದ. ಅರ್ಧ ಸೇದಿ ಉಳಿದ ಮುರುಕು ಬೀಡಿಯನ್ನು ಬಾಯಿಗಿಟ್ಟು ಕಡ್ಡಿ ಕೀರಿದ; ಮೂಲೆಯಲಿದ್ದ್ಲ ಆರು ಕಣ್ಣುಗಳು ಒಮ್ಮಿಗೆ ಹೊಳೆದವು. ಬೀಡಿಗಂಟಿಸಿದ ಬೇಳಕಲ್ಲಿ ಕಂಡ ಟಾವೆಲಿನ ತುದಿಯಲ್ಲಿ ಕಟ್ಟಿರುವ ಪೊಟ್ಟಣ ಚೌ ಚೌ ಬಾತಿನದೇ ಎಂದು ಮಕ್ಕಳಿಗೆ ಖಾತ್ರಿಯಾಯಿತು. ಮಧ್ಯಾನ್ನ ಗಂಜಿ ಕುಡಿದ ನಂತರ ಹೊಟ್ಟೆಗೆ ಏನೂ ಸಿಕ್ಕಿರಲಿಲ್ಲ, ಆದರೆ ಅಪ್ಪನ ಎದುರು ಹೋಗಿ ಕೇಳಿ ಪಡೆಯುವ ಧ್ಯರ್ಯ ಅವರಿಗಿರಲಿಲ್ಲ. ಸಂಕುವಿನ ಬೀಡಿಯ ಹೊಗೆ ಸುರುಳಿ ಸುರುಳಿಯಾಗಿ ಸೋಗೆ ಮಾಡನ್ನು ಸೇರುತ್ತಿತ್ತು.

ಇತ್ತ ಪಾತಿ ಬಿಡದೇ ಸುರಿಯುತ್ತಿದ್ದ ಮಳೆಗೆ ಹಿಡಿ ಶಾಪ ಹಾಕುತ್ತ, ಇನ್ನೂ ಕಾಯುತ್ತ ಕೂತರೆ ಮನೆಯ ಒಲೆಯಲ್ಲಿ ಬೆಂಕಿ ಉರಿಯಲಿಕ್ಕಿಲ್ಲ ಅಂದುಕೊಂಡವಳೇ ಕೈಯಲ್ಲಿದ್ದ ನಾಲ್ಕು ಅಡಿಕೆ ಮತ್ತು ಚಾಕುವನ್ನು ಸೀರೆಯ ಗಂಟಿಗೆ ಸೇರಿಸಿ ಮಳೆಯಲ್ಲಿ ಮನೆಯ ಕಡೆ ಓಡತೊಡಗಿದಳು. ಸುಮಾರು ಅರ್ಧ ಗಂಟೆಯ ದಾರಿ, ಅಲ್ಲಲ್ಲಿ ಮರದಡಿಯಲ್ಲಿ ನಿಲ್ಲುತ್ತಾ ಅಂತೂ ಮನೆ ಸೇರಿದಾಗ 9 ಗಂಟೆ. ಒಳಗೆ ಬಂದು ಒಲೆಯ ಒಳಗೆ ಹುದುಗಿಸಿಟ್ಟಿದ್ದ ಚಿಮುಣಿ ಬುಡ್ಡಿಯನ್ನು ಹೊತ್ತಿಸಿದವಳೆ ಮೊದಲು ನೋಡಿದ್ದು ಮಕ್ಕಳನ್ನು...ಹಿರಿಯ ಮಗಳು ಗೀತ ಅಮ್ಮ ಬಂದ ಧೈರ್ಯಕ್ಕೆ ಗೋಣಿ ತಾಟಿನ ಹೊದಿಕೆಯಿಂದ ಹೊರ ಬಂದು ಮನೆಯ ವಸ್ತುಗಳನೆಲ್ಲ ಜೋಡಿಸಿಟ್ಟು ಅಮ್ಮನಿಗೆ ನೆರವಾದಳು....ಸಂಕು ಮಾತ್ರ ಬಳಿಯಲ್ಲಿದ್ದ ಕಂಬಳಿಯನ್ನು ಮೈಮೇಲೆ ಎಳೆದುಕೊಂಡು  ಗೊರಕೆ ಹೊಡೆಯಲು ಆರಂಭಿಸಿದ. ಪಾತಿ ಗಂಡನ ಟಾವೆಲಿನೊಳಗಿದ್ದ ಪೊಟ್ಟಣವನ್ನು ಬಿಡಿಸಿ ಅದರಲ್ಲಿದ್ದ ಚೌ ಚೌ ಬಾತನ್ನು ಮಕ್ಕಳಿಗೆ ಹಂಚುತ್ತಿದ್ದಳು, ಇದ್ದಕ್ಕಿದ್ದಂತೆ ಅವಳಿಗೆ ದುಖಃ ಉಮ್ಮಳಿಸಿ ಬಂತು. 

ಇದು ಪಾತಿ ಮತ್ತು ಸಂಕುವಿನ ನಿತ್ಯದ ಕಥೆ. ಅವರ ಎದೆಯಲ್ಲಿ ನೂರು ಕನಸಿತ್ತು, ಚಿಕ್ಕ ಜೋಪಡಿ ಒಂದು ಸುಂದರ ವಾಸಯೋಗ್ಯ ಮನೆಯಾಗಬೇಕು, ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕು, ಮುಂದೊಂದು ದಿನ ಮಕ್ಕಳ ದುಡಿಮೆಯಲ್ಲಿ ಆರಾಮಾಗಿ ಕೂತು ಜೀವನ ಕಳೆಯಬೇಕು, ಯಾರ ಹಂಗು ಇಲ್ಲದೆ ಸ್ವಾಭಿಮಾನದಿಂದ ಬದುಕಬೇಕು...ಹೀಗೆ ಅವರ ಕನಸುಗಳ ಸಾಲು. ಅವರಲ್ಲಿ ಆತ್ಮ ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಅವರು ಬೀಸುವ ಗಾಳಿ, ಮಳೆಗೆ ಹೆದರಲಿಲ್ಲ, ಜನರ ನಿಂದನೆಗೆ ಜಗ್ಗಲಿಲ್ಲ. ಎಷ್ಟೋ ಅವಮಾನಗಳನ್ನ ಸಹಿಸಿಕೊಂಡು ಬದುಕಿನ ಒಂದೊಂದೇ ಮೆಟ್ಟಿಲನ್ನ ಹತ್ತಿದವರು. ಹಗಲಿರುಳು ದುಡಿದು, ಕೂಡಿಟ್ಟು ತಮ್ಮೆಲ್ಲ ಕನಸುಗಳನ್ನು ಸಾಕಾರಗೊಳಿಸಿಕೊಂಡವರು.

ಆದರೆ ಎಲ್ಲವೂ ಅಂದಕೊಂಡಂತೆಯೇ ಆಗಬೇಕಲ್ಲ! ಒಂದು ದಿನ, ಇಡೀ ಸಂಸಾರದ ಬೆನ್ನೆಲುಬಾದ ಸಂಕು ಅಡಿಕೆ ಮಂಡಿಯಲ್ಲಿ ಹೆಣವಾಗಿ ಬಿದ್ದಿದ್ದ. ದಣಿದಿದ್ದ ಆತನ ಕಾಲುಗಳು ಅವನ ನಂಬಿಕೆಗೆ ಮೋಸ ಮಾಡಿದವು; ಭಾರವಾದ ಅಡಿಕೆ ಚೀಲದಡಿಯಲ್ಲಿ ಸಿಕ್ಕು ಸಂಕು ಕೊನೆಯುಸಿರೆಳೆದಿದ್ದ. ಇಡೀ ಸಂಸಾರಕ್ಕೆ ಈ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ತನ್ನ ಪಾಲಿನ ಕರ್ತವ್ಯವನ್ನು ಮುಗಿಸಿದ್ದ ಸಂಕು ಸಂಸಾರದ ಪೂರ್ಣ ಜವಾಬ್ಧಾರಿಯನ್ನು ಪಾತಿಗೆ ಬಿಟ್ಟುಹೋಗಿದ್ದ.

ಪಾತಿ ಧೈರ್ಯವಂತೆ, ಗಂಡ ಸತ್ತ ನಂತರ ಇಡೀ ಸಂಸಾರವನ್ನು ಮತ್ತೆ ತೆಕ್ಕೆಗೆಳೆದುಕೊಂಡು ಸಲಹಲು ಸಿಧ್ಧಳಾದಳು. ಆಕೆ ಗಂಡನಿಂದ ಕಲಿತ ಆದರ್ಶವನ್ನು ಬಿಡಲಿಲ್ಲ, ಆಕೆ ಯಾವತ್ತೂ ನಂಬಿದ್ದು ‘ದುಡಿಯುವವರು ದಣಿವಿಗೆ ಹೆದರುವುದಿಲ್ಲ, ಅವರು ಹೆದರುವುದು ಸುಮ್ಮನೆ ಕೂತಿರುವುದಕ್ಕೆ’ ಎಂಬ ನೀತಿಯನ್ನು.

ಈಗ ಪಾತಿ ಮತ್ತು ಸಂಕುವಿನ ಶ್ರಮ ಫಲಿಸಿದೆ. ಅವರ ನಾಲ್ಕು ಮಕ್ಕಳು ವಿದ್ಯಾವಂತರಾಗಿದ್ದಾರೆ, ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಪಾತಿಯ ಎಲ್ಲಾ ಕನಸುಗಳೂ ಈಡೇರಿವೆ. ಆದರೆ ದುಡಿಮೆಯನ್ನು ನಂಬಿದ್ದ ಪಾತಿ ಈಗಲೂ ಮನೆಯ ಎಲ್ಲಾ ಕೆಲಸಗಳನ್ನೂ ನಿರ್ವಹಿಸುತ್ತಾಳೆ. ಅವಳ ಈ ದುಡಿಮೆಯೇ ಮನೆಯ ಮಕ್ಕಳಿಗೆಲ್ಲ ಆದರ್ಶ ಹಾಗೂ ಸಂಸ್ಕಾರ ಭಲ.

ಜೋರಾಗಿ ಸುರಿದ ಪುಶ್ಯ ಮಳೆ ಈಗ ಹನಿ ಹನಿ ತೊಟ್ಟಿಕುತ್ತಿದೆ. ತಂಪು ಗಾಳಿ ಸುಯ್ಯನೆ ಬೀಸಿ ಮೈ ಮನಗಳನ್ನು ಮುಟ್ಟುತ್ತಿದೆ. ಪಾತಿಯ ಮನಸ್ಸು ಹಗುರಾಗಿದೆ!