Saturday 13 August 2016

ಕಣ್ಣು


ಕಳೆದು ಹೋಯಿತು
ಕಾಣದಾಯಿತು
ಕತ್ತಲಾಯಿತು

ಹೆಜ್ಜೆಗೆ ಹೆಜ್ಜೆ
ಇನ್ನಿಲ್ಲ ಗೆಜ್ಜೆ
ಮೌನವಾಯಿತು

ತುರುಬಿನ ಮಲ್ಲಿಗೆ
ಬಾಡಿದೆ, ಚೆಲ್ಲಿದೆ
ವಾಸನೆಯಾಯಿತು

ಹಾರಿದೆ ಚಿಟ್ಟೆ
ಮುರಿದಿದೆ ರೆಕ್ಕೆ
ಲೀನವಾಯಿತು

ಕೈತುತ್ತು ನೀಡಿದ್ದು
ಹೆಸರಿಟ್ಟು ಹಾಡಿದ್ದು
ಕನಸಾಯಿತು

ಸೋತದ್ದು, ಅತ್ತದ್ದು
ನನ್ನಾತ್ಮ ನಕ್ಕಿದ್ದು
ಸತ್ಯವಾಯಿತು

ಮೌನದ ಹಿಂದೆ.....?

ನಾಚಿಕೆ
ಕೆಂಪಾದ ಕೆನ್ನೆ, ಹೊಳಪಿಡುವ ಕಣ್ಣು
ಉಗುರು ಕೆರೆದ ನೆಲದ ಒಡಲಲಿ
ಚಿಗುರುತಿದೆ ಪ್ರೀತಿ ಮೌನದಲಿ

ಭಯ
ಜಗವು ತಮದಲಿ, ನುಡಿ ತೊದಲಲಿ
ನಡುಗುತಿರುವ ಹೃದಯದಲಿ
ಕರಗುತಿದೆ ಕನಸು ಮೌನದಲಿ

ಸಾವು
ಉಸಿರಿಲ್ಲ, ಭಾವನೆಗಳಿಲ್ಲ
ನೀರ ಮೇಲೆ ಗುಳ್ಳೆ ತೇಲಿದಂತೆ
ಸೇರುತಿದೆ ಜೀವ ಮೌನದಲಿ

ಬುದ್ಧ
ಬೋಧಿ ವೃಕ್ಷದಡಿ ಜ್ಞಾನ ಪಡೆದಿರಲು
ನಿರ್ವಾಣ ಹಾದಿಯಲಿ ಸರ್ವಸಂಗ ಪರಿತ್ಯಾಗಿಯಾಗಿ
ಸಾರುತಿಹ ಶಾಂತಿ ಮೌನದಲಿ

ಎಲ್ಲವೂ
ಬದುಕಿನ ಎಲ್ಲ ಅನುಭವಗಳ
ಸಾರಾಮೃತ ಭಿತ್ತರಿಸುವ ಹಾದಿಯಲಿ
ತತ್ವವಾಗುತಿದೆ ಮಾತು ಮೌನದಲಿ

ಬಂಧ ಮುಕ್ತೆ!

ಮತ್ತೆ ನಿನಗೆ ನಾನು ತೊಂದರೆ ಕೊಡುವುದಿಲ್ಲ
ನನ್ನ ಪ್ರೀತಿ ಪಂಜರದಲ್ಲಿ ಬಂಧಿಸುವ ಪ್ರಯತ್ನ
ನಾನೆಂದೂ ಮಾಡುವುದಿಲ್ಲ
ಹಾರಬಯಸಿದ್ದೆಯಲ್ಲ, ದಿವ್ಯ ದಿಗಂತದೆಡೆಗೆ !
ರೆಕ್ಕೆಬಿಚ್ಚಿ ಹಾರು, ಜೀವಿಸಿಕೊ ನಿನ್ನ ಜೀವನ

ನಿನಗಿನ್ನು ನನ್ನ ನೋಡಿ ಹೆದರುವ ಅಗತ್ಯವಿಲ್ಲ
ನೀನು ಬಂಧಮುಕ್ತೆ, ನನ್ನ ಎದೆಗೂಡಿನಿಂದ,
ನನ್ನ ನೆನಪುಗಳಿಂದ, ನನ್ನ ಕನಸುಗಳಿಂದ
ಆ ದಿನಮಣಿಯ ಕಿರಣ ನೀ ಹಾರುವ ದಿಕ್ಕನು
ಬೆಳಗುತಿಹುದು, ಹೊರಡು ಬೇಗ

ನಿನ್ನ ಜೀವನ ನಂದಾದೀಪವಾಗಲೆಂದೇ
ಹಣತೆಯಲಿ ನನ್ನುಸಿರ ಸುರಿಯುತಿಹೆ
ಬಸಿದುಕೊ ಸಾದ್ಯವಾದಷ್ಟು,
ಆದಷ್ಟು ಬೇಗ ಬರಿದಾಗಿಸು
ಆಗಲೇ ನಾನು ನಿನ್ನ ನೆನಪುಗಳಿಂದ ಮುಕ್ತ

ಇದುವರೆಗಿನೆಲ್ಲ ಕನಸುಗಳ ಹೂಮಾಲೆಯಾಗಿಸಿ
ನಿನ್ನ ಪಾದದಡಿ ಇಡುವೆ,
ಹಾರುವ ಕಾಲುಗಳಿಗದೇ ಚೈತನ್ಯವಂತೆ
ಒಮ್ಮೆ ತುಳಿದು ಹಾಗೆಯೇ ನೆಗೆದು ಬಿಡು
ನಭ ನೀಲಿಯೆಡೆಗೆ

ಮತ್ತೆ ನನ್ನ ಕಣ್ಣ ನೋಡಬೇಡ, ಕಳೆದುಕೊಂಡಿದ್ದೇನೆ
ಅವುಗಳಲ್ಲಿ ಅಶ್ರುಧಾರೆ ಹರಿದೀತೆಂದು
ಮತ್ತೆ ಮಿಡುಕಬೇಡ, ಕೈ ಚಾಚಬೇಡ
ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ
ಹಾರಿ ಬಿಡು, ಪ್ರಾಣ ಪಕ್ಷಿ ಹಾರಿದಂತೆ !!

ನಾನು ಯಾರು?

ನಾನು ಎಂದಷ್ಟು
ನನಗೆ ನಿಗೂಢವೇ ಹೆಚ್ಚು
ಪ್ರಶ್ನಿಸಿಕೊಳ್ಳಬೇಕು ನಾನು
ಇದು ನಿಜವೇ ಎಂದು

ನಾನು ಇನ್ನೊಬ್ಬರಿಗಿಂತ
ಹೇಗೆ ಭಿನ್ನ?
ಎಲ್ಲರ, ಎಲ್ಲ ಅಂಶಗಳು
ನನ್ನೊಳಗೂ ಇವೆ...!!

ಒಳ್ಳೆಯವನೆಂದರೆ ಒಳ್ಳೆಯವನು
ಕೆಟ್ಟವನೆಂದರೆ ಕೆಟ್ಟವನು, ನಿಜ
ನನ್ನೆದುರಿಗಿರುವವನ
ಪ್ರತಿಬಿಂಬ ನಾನು...!!

ಆಸೆಯಿಲ್ಲ, ದೂಷಣೆಯಿಲ್ಲ
ಕೈಗೆ ಸಿಕ್ಕಷ್ಟು ಪ್ರೀತಿಯಲಿ ತೃಪ್ತಿ
ತೇಲುವ ಅಲೆಗಳ ಮೇಲೆ
ಹುಟ್ಟು ಹಿಡಿದ ಮೀನುಗಾರ

ಏನೇ ಹೇಳಿದರೂ, ದೂಷಿಸಿದರೂ
ಒಪ್ಪಿಕೊಳುವೆ ನಾನು, ನಿಜವಿರಬಹುದು
ಆದರೆ, ಅಂತರಂಗದೊಳಿಹೆನು
ನನ್ನಂತೆ ನಾನು...!!

ಎದೆಯೊಳಗಿನ ಪುಷ್ಯಮಳೆ

ಕತ್ತಲೆಯಲ್ಲಿ ಆರು ಕಣ್ಣುಗಳು
ಮಿಂಚು ಹೊಳೆದಂತೆಲ್ಲ ಫಳ ಫಳ
ಸೂರಿನ ಮೇಲೆ ಮುಗಿಬಿದ್ದಿದೆ
ದೊಡ್ಡ ಪುಷ್ಯಮಳೆ

ಮೂಟೆಯಡಿ ಬಿದ್ದ ಸಂಕುವಿಗೆ
ಮೊಣಕಾಲೆಲ್ಲ ಗಾಯ
ತೂತು ಬಿದ್ದ ಕೊಡೆಯಲ್ಲಿ ನೀರು
ಹರಿದಿದ್ದು ರಕ್ತಕಣ್ಣೀರು

ಕೈಯ್ಯಲ್ಲಿ ಚಾಕು, ಗೋಟು ಅಡಿಕೆ
ಪಾತಿಯ ಓಟ ಸೂರಿನೆಡೆಗೆ
ಮಳೆಗೆ ತೊಯ್ದ ಸೀರೆ ಕಪ್ಪು
ಒದ್ದೆಯಾದ ಒಡಲು ಉರಿದಿತ್ತು

ಇಬ್ಬರದೂ ಹಿಡಿ ಹಿಡಿ ಶಾಪ
ಪುಷ್ಯ ಮಳೆಗೆ ಆರದಿರಲಿ ದೀಪ
ನಿಂತಿಲ್ಲ ಓಟ, ನಿಂತಿಲ್ಲ ಮಳೆ
ಕಣ್ಣುಗಳಲ್ಲಿ ಅದೇ ಭಯ, ಹೊಳಪು

ಪಾತಿ-ಸಂಕು, ಗೋಣಿತಾಟು ಸರಿಸಿ
ಚಿಮುಣಿ ಬುಡ್ಡಿಗೆ ಕಡ್ಡಿ ಕೀರಿದಾಗ
ಕಣ್ಣುಗಳಲ್ಲಿ ಈಗ ಬೆಳಕಿತ್ತು
ಎದೆಯೊಳಗಿನ ಪುಷ್ಯಮಳೆ ನಿಂತಿತು

ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವುದು ಹೇಗೆ?

ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವುದು ಹೇಗೆ? ಇದು ಪ್ರತಿ ವರ್ಷ ನನ್ನನ್ನ ಕಾಡೋ ಪ್ರಶ್ನೆ. ಹೊಸ ವರ್ಷ ಆರಂಭ ಆದಾಗ ‘ನನ್ನ ಎಲ್ಲಾ ನಡವಳಿಕೆಯನ್ನ ಬದಲಾಯಿಸಿಕೊಳ್ಬೇಕು, ನಾನೂ ಬೆಳೆಯಬೇಕು, ಓದಬೇಕು, ನಾಲ್ಕು ಜನಕ್ಕೆ ಸಹಾಯ ಮಾಡಬೇಕು’ ಎಂದು ಮನಸ್ಸಿನಲ್ಲಿ ಸಾಕಷ್ಟು ಬಾರಿ ಅಂದುಕೊಳ್ತೇನೆ. ಆದರೆ ನಿತ್ಯದಂತೆಯೇ ಕಳೆದು ಹೋಗುತ್ತವೆ ನಾಳೆಗಳು, ಹೊಸ ವರ್ಷಗಳು, ಯಾವುದೇ ಬದಲಾವಣೆಗಳಿಲ್ಲದೆ. ಬದಲಾವಣೆಗಾಗಿ ಯೋಚನೆ ಮಾಡ್ತೇವೆ, ಬದಲಾವಣೆ ಆಗದಿದ್ದರೆ ನಾಳೆ ಅದರಿಂದಾಗುವ ಪರಿಣಾಮಗಳ ಬಗ್ಗೆಯೂ ಯೋಚಿಸ್ತೇವೆ. ಆದರೆ ಬದಲಾವಣೆ ಮಾತ್ರ ಆಗೋದಿಲ್ಲ. ತಮ್ಮ ಬದುಕಿನಲ್ಲಿ ಅದ್ಭುತ ಶಿಸ್ತನ್ನ ರೂಢಿಸಿಕೊಂಡಿರುವ ಹಲವಾರು ವ್ಯಕ್ತಿಗಳನ್ನ ನೋಡ್ತೇನೆ. ಊಟದಿಂದ ಹಿಡಿದು ತಮ್ಮ ಸಂಪೂರ್ಣ ವ್ಯಕ್ತಿತ್ವÀ ನಿರೂಪಿಸಿಕೊಂಡಿರುವಲ್ಲಿನ ಅಗಾಧ ಶಿಸ್ತು ಅವರದ್ದು. ಇವರಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗ್ತೇನೆ. ಹಾಗಿದ್ದರೂ ಯಾಕೆ ನಾನು ಬದಲಾಗೋದಿಲ್ಲ?

ನಾನು ನನ್ನ ಮನಸ್ಸನ್ನು ಹುಂಬತನದಿಂದ ಹಿಡಿದಿಟ್ಟಿರುವ ನಂಬಿಕೆ ಏನೆಂದರೆ ‘ನಾನು ಮಾಡುತ್ತಿರುವುದು ಸರಿ ಎಂದೆನಿಸಿದರೆ ಮತ್ತೆ ಜಗತ್ತಿಗೆ ಅಥವಾ ಸಮಾಜಕ್ಕೆ ಹೆದರಬೇಕಾದ ಅಗತ್ಯವಿಲ್ಲ” ಎಂಬುದು. ಹಾಗಾಗಿ ಬಹಳ ಸಲ ನಾನು ಮಾಡುತ್ತಿರುವುದು ಸರಿ ಎಂದೆನಿಸಿದಾಗ ಜನ ಏನೇ ಹೇಳಿದರೂ ನಾನು ಅದರ ಬಗ್ಗೆ ಕಿವಿಗೊಟ್ಟಿಲ್ಲ, ಬದಲಾವಣೆಗೊಳ್ಳುವ ಯೋಚನೆಯನ್ನೂ ಮಾಡಿಲ್ಲ. ಆದರೆ ನಾನು ‘ಸರಿ’ ಎಂದು ವಾಧಿಸುವ ನನ್ನ ನಂಬಿಕೆಗೆ ಆಧಾರ ಯಾವುದು? ಕೆಲವು ಸಲ ಮನೆಯಲ್ಲಿ ಅಮ್ಮನಿಗೆ, ಅಕ್ಕನಿಗೆ, ತಮ್ಮನಿಗೆ ಬುದ್ಧಿ ಹೇಳೋಕೆ ಹೋಗ್ತೇನೆ, ಅವರು ನಾನು ಹೇಳಿದ್ದನ್ನ ಕೇಳಬೇಕು ಅಂತ ಬಯಸುತ್ತೇನೆ ಅದೇ ನನ್ನ ಶಿಸ್ತು, ನೀವೂ ಪಾಲಿಸಬೇಕು ಎಂದು ಕೂಗಾಡ್ತೇನೆ. ಆದರೆ ಅವರ ಜಾಗದಲ್ಲಿ ನಿಂತು ಯೋಚಿಸುವುದರಲ್ಲಿ ಸೋಲ್ತೇನೆ. ಕೇವಲ ನನ್ನ ಅನುಭವದ ಹಿನ್ನೆಲೆಯಲ್ಲಿ ಕಟ್ಟಿಕೊಂಡ ನಂಬಿಕೆಗಳಿಂದ ಮಾತ್ರ ಶಿಸ್ತು ಬಂದುಬಿಡುವುದಿಲ್ಲ ಅಥವಾ ಬದಲಾವಣೆಯಾಗುವುದಿಲ್ಲ. ನನ್ನ ಅನುಭವದ ಜೊತೆಗೆ ನನ್ನ ಕುಟುಂಬದ, ನನ್ನ ಸಮಾಜದ ಅನುಭವದಿಂದ ಪಡೆದ ನಂಬಿಕೆಯ ಗಟ್ಟಿಯಾದ ನಿಲುವಿನಿಂದ ಮಾತ್ರ ಶಿಸ್ತನ್ನು ಪಡೆಯಲು ಸಾದ್ಯ ಎಂದೆನಿಸುತ್ತಿದೆ.

ದೇವರು, ಮೂಢನಂಬಿಕೆ, ಜಾತಕ ಇವುಗಳ ಬಗ್ಗೆ ನನ್ನ ನಿಲುವು, ದೃಷ್ಟಿಕೋನ ಬದಲಾಗಿದೆ ಎಂದು ನಂಬಿದ್ದೆ. ಮನೆಯಲ್ಲಿ ನಡೆಯುವ ಪೂಜೆ ಪುನಸ್ಕಾರಗಳನ್ನ ತಿರಸ್ಕರಿಸಿದ್ದೆ. ಇಂತಹ ನಂಬಿಕೆಗಳಿಗಾಗಿ ಹಣ ಫೋಲಾಗುವುದನ್ನು ಖಂಡಿಸಿದ್ದೆ. ಆದರೆ ಕೆಲವು ಸಂದರ್ಬಗಳಲ್ಲಿ ಅನಿವಾರ್ಯವಾಗಿ ಅವರ ನಂಬಿಕೆಯ ಎದುರು ತಲೆಬಗ್ಗಿಸಿ ನಿಂತದ್ದಿದೆ. ಮೂರು ಜನ ಪುರೋಹಿತರು ನನ್ನ ಅಭಿವೃದ್ಧಿಗಾಗಿ ಹೋಮ ಮಾಡುವಾಗ ಅವರೆದುರು ಅಸಹನೀಯವಾದ ನೋವು ಉಂಡದ್ದಿದೆ. ಆಗೆಲ್ಲಾ, ಮನೆಯವರ ನಂಬಿಕೆಯೆದುರು ನನ್ನ ನಿಲುವು ಸೋತದ್ದು ಯಾಕೆ? ಅವರ ಮನಪರಿವರ್ತಿಸುವಲ್ಲಿ ಎಡವಿದ್ದೆಲ್ಲಿ? ಇವೆಲ್ಲವನ್ನೂ ಮೀರಿ ನನ್ನ ನಂಬಿಕೆಯನ್ನು, ಶಿಸ್ತನ್ನು ಉಳಿಸಿಕೊಳ್ಳಬೇಕಾದರೆ ನಾನು ಏನು ಮಾಡಬೇಕು? ನನ್ನ ನಿಲುವು ಎಷ್ಟು ದೃಡವಾದದ್ದು? ಎಂದು ಪ್ರಶ್ನಿಸಿಕೊಂಡು ಪರಿತಪಿಸಿದ್ದೇನೆ.

ಶಿಸ್ತು ಮೂಡಿಸಿಕೊಳ್ಳಬೇಕಾದರೆ ಎಲ್ಲಾ ಸಂಬಂಧಗಳ ಮೋಹದಿಂದ ಹೊರಬರಬೇಕೆ? ಬದುಕನ್ನ ರೂಪಿಸಿಕೊಳ್ಳಬೇಕಾದರೆ ಯಾವುದೋ ಒಂದು ದಾರಿಯನ್ನ ಅಯ್ಕೆ ಮಾಡಿಕೊಳ್ಳಬೇಕು. ಆದರೆ ನನಗೆ ಎರಡೂ ದಾರಿ ಅμÉ್ಟೀ ಸತ್ಯ (ಒಳ್ಳೆಯದು) ಅμÉ್ಟೀ ಸುಳ್ಳು (ಕೆಟ್ಟದ್ದು). ನನ್ನ ಮನಸ್ಸು ಅಷ್ಟು ಪಕ್ವವಾಗಿಲ್ಲ, ಅಷ್ಟು ದೃಢವಾಗಿಲ್ಲ. ಆಯ್ಕೆ ಮಾಡಿಕೊಂಡ ದಾರಿಯಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ನನ್ನ ಶಕ್ತಿ ಮತ್ತು ದೃಢನಂಬಿಕೆಯಿಂದ ಮಾತ್ರ ಶಿಸ್ತಿನ ಬದುಕನ್ನ ಕಟ್ಟಿಕೊಳ್ಳಲು ಸಾಧ್ಯವಾಗಬಹುದು ಎಂದೆನಿಸುತ್ತಿದೆ.

ಪೇರಿ ಒಮ್ಮೆ ಹೇಳಿದ ಮಾತು ನೆನಪಾಗುತ್ತಿದೆ ‘ನನಗೆ ಇರುವ ಸಮಯ ಕಡಿಮೆ ಇದೆ, ಅದರೆ ಮೀರಲಿಕ್ಕಿರುವುದು ಬಹಳಷ್ಟಿದೆ, ಇನ್ನೂ ಗಟ್ಟಿಯಾಗಬೇಕಿದೆ’ ಎಂದು. ಬಹುಷಹ ಜೀವನದ ಇಂತಹ ಹಲವು ಸತ್ಯಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮನ್ನು ಗಟ್ಟಿಯಾಗಿಸುವಲ್ಲಿ ಮತ್ತು ಬಂಧನದಿಂದ ಹೊರಬರಲು ಸಹಾಯಮಾಡಿಕೊಡುತ್ತವೆ. ಬರಿ ಯೋಚನೆಯಿಂದ ಮತ್ತು ಚಿಂತನೆಯಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಆ ಚಿಂತನೆಯಂತೆ ಬಾಳುವುದೂ ಅμÉ್ಟೀ ಮುಖ್ಯ. ಚಿಕ್ಕ ಚಿಕ್ಕ ಪ್ರಯತ್ನಗಳು ನಮ್ಮಲ್ಲಿ ಶಿಸ್ತನ್ನು ರೂಪಿಸಿಕೊಳ್ಳಲು ಬುನಾದಿಯಾಗಬಹುದು. ನನ್ನ ಸ್ನೇಹಿತ ಇತ್ತೀಚೆಗೆ ಪ್ರಾರಂಭಿಸಿದ ಇಂತಹ ಪ್ರಯತ್ನ ನನಗೆ ತುಂಬಾ ಅಸಕ್ತಿದಾಯಕವಾಗಿ ಕಂಡಿತು. ಆತ ಹಂತಹಂತವಾಗಿ (ಪ್ರಜ್ಞಾಪೂರ್ವಕವಾಗಿ) ಚಹ ಕುಡಿಯುವದನ್ನು ಬಿಟ್ಟಿದ್ದು, ರಾತ್ರಿ ಊಟವನ್ನು ಕಡಿಮೆ ಮಾಡಿದ್ದು ಹೀಗೆ ಜೀವನಕ್ಕೆ ಅವಶ್ಯವಲ್ಲ ಎನ್ನುವ ಚಿಕ್ಕ ಚಿಕ್ಕ ಅಂಶಗಳನ್ನು ಬಿಟ್ಟಿದ್ದು ಆತನ ಮನಸ್ಸನ್ನು ದೃಢಗೊಳಿಸಿದೆ, ಮುಂದಿನ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸನ್ನ ಸಿದ್ಧಗೊಳಿಸಿದೆ.  ಈ ಎಲ್ಲಾ ಅನುಭವಗಳು ನನಗೆ ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುದರ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನ ತಿಳಿಸಿದೆ. ಜೀವನದ ಸತ್ಯವನ್ನ ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಬಾಳುವ ಪ್ರಯತ್ನ ನಡೆಸುವುದು ನಮ್ನನ್ನು ವಿಹ್ವಲತೆಯ ಬದುಕಿನಿಂದ ಮುಕ್ತಗೊಳಿಸಲು ಸಾದ್ಯವೆಂದು ಅರಿವಾಗುತ್ತಿದೆ. 

ವಿಶ್ಲೇಷಣೆ

ವಿಶ್ಲೇಷಣೆ ಮತ್ತು ತಾರ್ಕಿಕ ಚಿಂತನೆ:

ವಿಶ್ಲೇಷಣೆ ನಮ್ಮ ಸಮಸ್ಯೆಗಳಿಗೆ ಅಥವಾ ಪ್ರಶ್ನೆಗಳಿಗೆ ಸತ್ಯಕ್ಕೆ ಹತ್ತಿರವಾದ ಹಾಗೂ ವೈಜ್ಞಾನಿಕವಾದ ಉತ್ತರವನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಸಂಶೋಧನೆಯಲ್ಲಿ ಇದು ಒಂದು ಮುಖ್ಯವಾದ ಹಂತ. ಮಾಹಿತಿಯನ್ನು ಗುಣಾತ್ಮಕವಾಗಿ ಅಥವಾ ಪರಿಮಾಣಾತ್ಮಕವಾಗಿ, ವಿವಿಧ ವಿಶ್ಲೇಷಣಾ ವಿಧಾನಗಳ ಮೂಲಕ ಓರೆಗೆ ಹಚ್ಚಿ ಉತ್ತರಗಳನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತಾರ್ಕಿಕ ಚಿಂತನೆ ಯಾವುದೇ ವೈಜ್ಞಾನಿಕ ವಿಧಾನಗಳಿಲ್ಲದೆ ಕೇವಲ ಹಿಂದಿನ ಅನುಭವಗಳ ಆಧಾರದ ಮೇಲಿನ ಊಹೆ ಮತ್ತು ಲಭ್ಯವಿರುವ ಕೆಲವೇ ಕೆಲವು ಮಾಹಿತಿಯ ಆಧಾರದ ಮೇಲೆ ನಿಲ್ಲುವ ಅಭಿಪ್ರಾಯ. ಈ ಅಭಿಪ್ರಾಯ ಅಥವಾ ಚಿಂತನೆ ಎಷ್ಟು ಸರಿ ಎಂಬುದನ್ನು ಮತ್ತೆ ಸರಿಯಾದ ವಿಶ್ಲೇಷಣೆಯ ಮೂಲಕ ತಿಳಿಯಬಹುದು. ಇಲ್ಲಿ ನನ್ನ ಅಭಿಪ್ರಾಯದಲ್ಲಿ ಸಂಶೋಧಕರಿಗೂ, ಜನಸಾಮಾನ್ಯರಿಗೂ ಅಥವಾ ಕ್ಷೇತ್ರದಲ್ಲಿ ಕೆಲಸಮಾಡುವ ಪ್ರತಿಯೊಬ್ಬರಿಗೂ ವಿಶ್ಲೇಷಣೆಗಿಂತ ಮುಖ್ಯವಾಗಿ ಈ ತಾರ್ಕಿಕ ಚಿಂತನೆಯ ಮನೋಭಾವ ಬೇಕು ಎಂಬುದು.

ಎರಡು ವರ್ಷಗಳ ಹಿಂದೆ ನಾನು ಪೆರಿಯವರ ಮನೆಯಲ್ಲಿ ವಾಸವಾಗಿದ್ದೆ. ಮನೆಗೆ ಯಾವುದೇ ಸಾಮಗ್ರಿಗಳು ಬೇಕಿದ್ದರೂ ದೂರದಲ್ಲಿದ್ದ ಮೈನ್ ರೋಡ್‍ನಲ್ಲಿರುವ ಅಂಗಡಿಗಳಿಂದ ಅಥವಾ ಸೂಪರ್ ಮಾರ್ಕೇಟ್‍ನಿಂದ ತರ್ತಿದ್ದೆ. ನಮ್ಮ ಮನೆ ಇದ್ದ ಪ್ರದೇಶದಲ್ಲಿ ಸುಮಾರು 50-60 ಮನೆಗಳು ಇದ್ದಿರÀಬಹುದು. ಒಮ್ಮೆ ಪೆರಿ ಕೇಳಿದ್ರು ‘ಈ ಪ್ರದೇಶದಲ್ಲಿ ಎಲ್ಲೂ ಚಿಕ್ಕ ಅಂಗಡಿಗಳು ಇಲ್ವಾ’ ಅಂತ. ಎಲ್ಲೂ ಅಂಗಡಿಗಳನ್ನ ಗಮನಿಸದೇ ಇದ್ದರಿಂದ ನಾನು ಸಹಜವಾಗಿ ‘ಇಲ್ಲ’ ಎಂದೆ. ಆಗ ಅವರು ‘ಅದು ಹೇಗೆ ಸಾದ್ಯ, ಇಷ್ಟು ಮನೆಗಳಿರುವ ಜಾಗದಲ್ಲಿ ಎಲ್ಲಾದರೂ ಒಂದು ಕಡೆ ಚಿಕ್ಕ ಪೆಟ್ಟಿ ಶಾಪ್ ಆದರೂ ಇರಲೇ ಬೇಕಲ್ಲ, ಎಲ್ಲಾ ಸಂದರ್ಭದಲ್ಲೂ ಸೂಪರ್ ಮಾರ್ಕೇಟ್‍ಗೆ ಹೋಗೋದಿಕ್ಕೆ ಆಗಲ್ಲ. ಅಕಸ್ಮಾತ್ ಎನಾದರೂ ಚಿಕ್ಕ ಪುಟ್ಟ ಅಗತ್ಯತೆಗಳು ಬಂದಾಗ ಅದು ಸಿಗುವ ವ್ಯವಸ್ತೆಯನ್ನು ಬಹುಶಹ ಜನ ಮಾಡಿಕೊಂಡಿರ್ತಾರೆ’ ಅಂತ ಹೇಳಿದ್ರು. ಅವರ ಆ ತಾರ್ಕಿಕ ಚಿಂತನೆ ನನಗೆ ನಿಜ ಅನ್ನಿಸಿತು. ಸೂಪರ್ ಮಾರ್ಕೇಟ್‍ಗಳೆಲ್ಲ ಇತ್ತೀಚಿನ ಬದಲಾವಣೆಗಳು ಆದರೆ ಬಹಳ ವರ್ಷದಿಂದ ಆ ಪ್ರದೇಶದಲ್ಲಿ ಜನ ಬದುಕ್ತಾ ಇದ್ದಾರೆ ಅಂದ್ರೆ ಇಂತಹ ಏರ್ಪಾಡುಗಳನ್ನ ಮಾಡಿಕೊಂಡಿರುವುದು ಸಹಜ. ಅವರ ಈ ತರ್ಕವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆ ಪ್ರದೇಶವನ್ನ ರೌಂಡ್ ಹಾಕಿದ್ರೆ ಅಲ್ಲಲ್ಲಿ, ಮನೆಯಲ್ಲಿ ಚಿಕ್ಕಪುಟ್ಟ ಅಂಗಡಿಗಳ ವ್ಯವಸ್ತೆ ಮಾಡಿಕೊಂಡಿದ್ದು ಕಾಣಿಸ್ತು. ಬಹುಶಹ ಇಂತಹ ಹಲವಾರು ಉದಾಹರಣೆಗಳು ನಿಮ್ಮಲ್ಲಿ ಇರಬಹುದು. ತಾರ್ಕಿಕ ಚಿಂತನೆ ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ, ವಿಶ್ಲೇಷಣೆ ಈ ಪ್ರಶ್ನೆಗಳಿಗೆ ವೈಜ್ಞಾನಿಕವಾದ ಉತ್ತರಗಳನ್ನ ಹುಡುಕೋದಿಕ್ಕೆ ಸಹಾಯ ಮಾಡ್ತದೆ.

ಸ್ವ-ವಿಶ್ಲೇಷಣೆ:
ಸಹಜವಾಗಿ ನಾವು ಬೇರೆಯವರನ್ನ, ಸಮಾಜವನ್ನ, ನಿತ್ಯ ಜೀವನದಲ್ಲಿ ನಡೆಯುವ ಹಲವು ವಿಷಯಗಳನ್ನು ವಿಶ್ಲೇಷಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ನಮ್ಮನ್ನು ನಾವು ಆ ಕನ್ನಡಿಯ ಮುಂದೆ ನಿಲ್ಲಿಸಿಕೊಳ್ಳುವುದಕ್ಕೆ ಒಪ್ಪುವುದಿಲ್ಲ. ಆ ಮನುಷ್ಯ ಸರಿ ಇಲ್ಲ ಎಂದು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವೆ, ಆದರೆ ನಿಜವಾಗಿ ವಿಶ್ಲೇಷಣೆ ಮಾಡಿದರೆ ಆ ವ್ಯಕ್ತಿಗಿಂತ ನಾವೇ ಎμÉ್ಟೂೀ ಕೆಟ್ಟವರಾಗಿರ್ತೆವೆ. ಬೇರೆಯವರ ತಪ್ಪುಗಳಿಗೆ ಕಾರಣ ಹುಡುಕುವ ನಾವು ನಮ್ಮ ತಪ್ಪುಗಳಿಗೆ ಸಾಕಷ್ಟು ಸಮರ್ಥನೆ ಕೊಟ್ಟುಕೊಳ್ತೇವೆ.

ಬೆಂಗಳೂರು ರೈಲ್ವೇ ಸ್ಟೇಷನ್‍ನಲ್ಲಿ, ಎಪ್ಪತ್ತರ ವಯಸ್ಸಿನ ಒಬ್ಬ ಹೆಂಗಸು, ಡಸ್ಟ್‍ಬಿನ್ ಒಳಗಿಂದ, ಜನ ತಿಂದು ಬಿಸಾಕಿದ ಆಹಾರದ ಪೊಟ್ಟಣದೊಳಗಿಂದ ಆಹಾರಗಳನ್ನ ಸಂಗ್ರಹಿಸುತ್ತಾ ಇದ್ದಳು. ನನಗೆ ಬಹಳ ಬೇಸರ ಆಗಿ ಆ ತಾಯಿಗೆ ಹೇಳಿದೆ ‘ಅದನ್ನ ತಿನ್ನಬೇಡ, ಅದು ಸರಿ ಇಲ್ಲ’ ಎಂದು. ಅಲ್ಲದೆ ನನ್ನ ಕೈಲಿದ್ದ ಇನ್ನೂರು ರೂಪಾಯಿಗಳನ್ನು ಅವಳಿಗೆ ಕೊಟ್ಟೆ. ನಾಜೂಕಿನಿಂದ ಆಹಾರಗಳನ್ನು ಡಬ್ಬಿಗೆ ಸೇರಿಸಿದ ಹೆಂಗಸು, ದುಡ್ಡನ್ನು ವಾಪಸ್ ನನ್ನ ಕಿಸೆಯಲ್ಲಿ ಇಡುತ್ತ ಸುಮ್ಮನೆ ನಕ್ಕು ತನ್ನ ಪಾಡಿಗೆ ಹೊರಟು ಹೋದಳು. ಒಮ್ಮೆ ಮನಸ್ಸಿಗೆ ಅನ್ನಿಸಿತು ಈ ಹೆಂಗಸಿಗೆ ಎಷ್ಟು ಅಹಂಕಾರ ಎಂದು. ಆದರೆ ಆಕೆಯ ಜಾಗದಲ್ಲಿ ನಿಂತು ಯೋಚಿಸಿದರೆ ಆಕೆ ಮಾಡಿದ್ದು ಸರಿ. ಆವತ್ತಿನ ಮಟ್ಟಿಗೆ ನಾನು ಆಕೆಯ ಹಸಿವನ್ನ ತೀರಿಸಬಹುದಿತ್ತು ಆದರೆ ದಿನನಿತ್ಯ ಆಕೆಯ ಹಸಿವನ್ನ ತೀರಿಸುವವರು ಯಾರು? ಬಹುಶಹ ಆ ಡಸ್ಟ್‍ಬಿನ್‍ಗೆ ಮಾತ್ರ ಸಾದ್ಯ. 

ಆ ದಿನ ಆ ಹೆಂಗಸಿನ ಬಗ್ಗೆ ನನ್ನ ಮನಸ್ಸಿನಲ್ಲಿ ಮೂಡಿದ ಮಮಕಾರ ನಿಜವೇ ಇರಬಹುದು, ಆದರೆ ಪ್ರತಿ ನಿತ್ಯ ನನ್ನ ಸುತ್ತ ಮುತ್ತ ನಡೆಯುವ ಇಂತಹ ಹಲವಾರು ಘಟನೆಗಳನ್ನು ನಾನು ನೋಡಿಯೂ ನೋಡದೇ ಇರುವ ಹಾಗೆ ಬದುಕುತ್ತೇನೆ. ಕೆಲವು ಸಂದರ್ಬದಲ್ಲಿ ಕೇವಲ ತೋರಿಕೆಗಾಗಿ, ನೋಡುವ ಜನರಿಗಾಗಿ ಸಮಾಜ ಸೇವೆ ಮಾಡೂ ನಾಟಕ ಮಾಡ್ತೇವೆ. ನಡೆ ಮತ್ತು ನುಡಿಯಲ್ಲಿ ಸಾಕಷ್ಟು ವ್ಯತ್ಯಾಸ ಮಾಡ್ತೇವೆ. ಯಾರದ್ದೋ ಸ್ನೇಹಕ್ಕೆ ದ್ರೋಹ ಮಾಡಿರ್ತೇವೆ, ಯಾವುದೋ ಪ್ರೀತಿಗೆ ಮೋಸ ಮಾಡಿರ್ತೇವೆ, ಯಾರದೋ ಗೌರವ ದಕ್ಕೆ ಆಗುವ ಹಾಗೆ ಗಾಸಿಪ್ ಮಾಡಿರ್ತೇವೆ. ಇದೆಲ್ಲವೂ ಸಮಾಜದಲ್ಲಿ ನಡಿತಾ ಇದೆ ಅಂದುಕೊಂಡಿರ್ತೇವೆ, ಆದರೆ ಇಂತಹ ಎμÉ್ಟೂೀ ಅಂಶಗಳು ನಮ್ಮೊಳಗೆ ಹುಟ್ಟಿ ಬೆಳೆದು ಅಂತಹ ಸಮಾಜ ಆಗೋದಿಕ್ಕೆ ಕಾರಣವಾಗಿರ್ತವೆ. ಯಾವತ್ತೋ ಒಂದು ದಿನ ರೈಲ್ವೇ ಸ್ಟೇಷನ್‍ನಲ್ಲಿ ಕಂಡ ಆ ಹೆಂಗಸಿನ ಹಸಿವನ್ನ ನೀಗಿಸೊದಿಕ್ಕೆ ಹೊರಟ ನನಗೆ ನೆನಪಾದದ್ದು ಕಳೆದ ಮೂರು ತಿಂಗಳಿನಿಂದ ಯಾವುದೋ ಕಾರಣಕ್ಕೆ ನಾನು ಮನೆಗೆ ಹಣ ಕಳಿಸುವುದನ್ನ ನಿಲ್ಲಿಸಿದ್ದು.