ಅವರ ಹೆಸರು ಸಂಕಯ್ಯ. ಅವರ ತಾಯಿ ಅವರನ್ನ ‘ಮೂಕ ಬಸವಣ್ಣ’ ಅಥವಾ ‘ಬೊಳೇ ಶಂಕರ’ ಅಂತ ಕರೀತಿದ್ರು. ಯಾಕೇಂದ್ರೆ ಈ ವ್ಯಕ್ತಿ ತನಗೋಸ್ಕರ ಯಾವುದೇ ಆಸ್ತಿಯನ್ನೂ, ಹಣ ಸಂಗ್ರಹವನ್ನೂ ಮಾಡಿರಲಿಲ್ಲ. ತನ್ನಲ್ಲಿದ್ದ ಅಲ್ಪ ಸ್ವಲ್ಪ ಹಣವನ್ನ, ಆಸ್ತಿಯನ್ನ ಮಕ್ಕಳ ಶಿಕ್ಷಣಕ್ಕೆ ವಿನಿಯೋಗ ಮಾಡಿದ್ರು ಅಥವಾ ಬೇರೆಯವರಿಗೆ ದಾನವಾಗಿ ಕೊಟ್ಟಿದ್ರು. ಇದಕ್ಕೆ ಪ್ರತಿಯಾಗಿ ಯಾವುದೇ ನಿರೀಕ್ಷೆ ಅವರಲ್ಲಿ ಇರಲಿಲ್ಲ. ಹೆಂಡತಿ ಅಥವಾ ತಾಯಿ ಈ ಬಗ್ಗೆ ಮಾತು ಎತ್ತಿದರೆ ಸುಮ್ಮನೆ ನಕ್ಕು ಮಾತಿಗೆ ವಿರಾಮ ಹಾಕುತ್ತಿದ್ದರು.
ಒಂದು ದೊಡ್ಡ ಸ್ಟೀಲ್ ಲೋಟದಲ್ಲಿ ನಾಲ್ಕು ಹೊತ್ತು ಚಹಾ ಕುಡಿಯೋದು, ಬಾಯಿತುಂಬ ಎಲೆ ಅಡಿಕೆ ಜಗಿಯೋದು, ಸಂಜೆ ಒಂದಷ್ಟು ಸಾರಾಯಿ ಕುಡಿಯುವುದು ಮತ್ತು ಗಣೇಶ ಬೀಡಿ ಎಳೆಯೋದು ಬಿಟ್ಟರೆ ಆವರಿಗೆ ಬೇರೆ ಯಾವುದೇ ಹವ್ಯಾಸಗಳಿರಲಿಲ್ಲ.
ಅವರು ಹೆಚ್ಚು ಮಾತಾಡ್ತಾ ಇದ್ದಿದ್ದು ಮಕ್ಕಳ ಜೊತೆ ಮಾತ್ರ, ಅದು ಯಾವತ್ತೂ ಬರಿ ಬಾಯಲ್ಲಿ ಮಾತಾಡ್ತಿರಲಿಲ್ಲ. ತನ್ನ ಹೆಗಲಿಗೆ ಸಿಕ್ಕಿಸಿದ್ದ ಟವೆಲ್‍ನ ಒಂದು ತುದಿಗೆ ಕಟ್ಟಿದ್ದ ಚೌಚೌ ಬಾತ್ ಅಥವಾ ಪೆಪ್ಪರ್‍ಮೆಂಟು ಕೊಟ್ಟಿಯೇ ಮಕ್ಕಳನ್ನು ಮಾತಾಡಿಸುವುದು. ಮಕ್ಕಳು ಎಂದಾಗ ಅವರಿಗೆ ತನ್ನ ಮಕ್ಕಳು ಮತ್ತು ಇತರ ಮನೆಯ ಮಕ್ಕಳಿಗೂ ಬೆಧ ಇರಲಿಲ್ಲ. ಅಕ್ಕ ಪಕ್ಕದ ಮನೆಯ ಮಕ್ಕಳನ್ನು ಒಟ್ಟು ಹಾಕಿ ಆಡಿಸುವುದು, ಊಟ ಮಾಡಿಸುವುದು ಅವರಿಗೆ ಬಹಳ ಸಂತೋಷ ಕೊಡುವ ವಿಷಯ. ಈ ಸಂಪ್ರದಾಯ ಈಗಲೂ ಆ ಮನೆಯಲ್ಲಿ ಮುಂದುವರಿದಿದೆ.
ಶಾಲೆಯ ಮೆಟ್ಟಿಲು ಹತ್ತದ ಇವರಿಗೆ ಶಿಕ್ಷಣ ಎಂದರೆ ಎಲ್ಲಿಲ್ಲದ ಆಸಕ್ತಿ. ಬಡತನದ ಕಾರಣದಿಂದ ತನ್ನ ಏಳನೇ ವಯಸ್ಸಿನಲ್ಲಿ ಹೊಟೆಲ್ ಒಂದರಲ್ಲಿ ಸಪ್ಲಾಯರ್ ಆಗಿ ಕೆಲಸಕ್ಕೆ ಸೇರ್ತಾರೆ. ಆ ಹೊಟೆಲ್ ಮಾಲಿಕನಿಗೆ ಇವರ ಕೆಲಸದ ಮೇಲೆ ಬಹಳ ಪ್ರೀತಿ. ಮಾಲಿಕರು ಪ್ರತಿ ದಿನದ ಕೆಲಸ ಮುಗಿದ ಮೇಲೆ ರಾತ್ರಿ ಸಂಕಯ್ಯನಿಗೆ ಲೆಕ್ಕ ಹೆಳಿಕೊಡುವುದು, ಅಕ್ಷರಗಳ ಪರಿಚಯ ಮಾಡಿಸುವುದು ಮತ್ತು ಕೊಂಕಣಿ ಭಾಷೆಯಲ್ಲಿ ಮಾತನಾಡಿಸುವುದನ್ನು ಮಾಡುತ್ತಿದ್ದರು. ಇದರಿಂದ ಸಂಕಯ್ಯನಿಗೆ ಲೆಕ್ಕ ಬಿಡಿಸುವುದು, ಕನ್ನಡ ಓದು-ಬರಹ, ಹಿಂದಿ ಮತ್ತು ಕೊಂಕಣಿ ಭಾಷೆಯಲ್ಲಿ ಮಾತನಾಡುವುದು ಮತ್ತು ಕೆಲವು ಇಂಗ್ಲೀಷ್ ಅಕ್ಷರಗಳನ್ನು ಓದುವುದು ರೂಢಿಯಾಯಿತು.
ಮುಂದೆ ಅಡಿಕೆ ಮಂಡಿಯಲ್ಲಿ ಹಮಾಲಿಯಾಗಿ ಕೆಲಸಕ್ಕೆ ಸೇರಿದಾಗ ಅವರ ನಿಷ್ಠ ಲೆಕ್ಕಾಚಾರ ಮತ್ತು ಓದು ಬರಹದ ಹಿನ್ನೆಲೆಯಲ್ಲಿ ಅವರಿಗೆ ತೂಕ ಮತ್ತು ಕಾಠ ಮಾಡುವ ಕೆಲಸಕ್ಕೆ ನೇಮಿಸುತ್ತಾರೆ.
ಒಮ್ಮೆ ಅವರ ಮಾವ ತನ್ನ ಕೊನೆಯ ಮಗಳನ್ನ ಮುಂದೆ ಓದುವುದು ಬೇಡ, ನಿನಗೆ ಮದುವೆ ಮಾಡುತ್ತೇನೆ ಅಂದಾಗ, ಅವರ ಜೊತೆ ಜಗಳವಾಡಿ ನಾದಿನಿಯನ್ನ ತನ್ನ ಮನೆಗೆ ಕರೆತಂದು, ಓದಿಸಿ ಅವರು ಮುಂದೆ ಒಬ್ಬ ಶಿಕ್ಷಕಿಯಾಗೋ ಹಾಗೆ ಮಾಡ್ತಾರೆ. ದಿನದ ಅವಧಿಗಿಂತ ಹೆಚ್ಚುವರಿ ಕೆಲಸ ಮಾಡಿ ಅದರಿಂದ ಬಂದ ಹಣದಿಂದ ಮಕ್ಕಳಿಗೆ ಬೇಕಾದ ಸಮವಸ್ತ್ರ, ಪಠ್ಯ ಪುಸ್ತಕ ಹಾಗು ಇತರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಅವರ ಆಸೆ ಇದ್ದದ್ದು ತನ್ನ ಮಕ್ಕಳನ್ನು ಓದಿಸಿ ಒಳ್ಳೆಯ ಹುದ್ದೆಯಲ್ಲಿ ಅವರನ್ನ ನೋಡಬೇಕು ಅನ್ನುವದು. ಮಕ್ಕಳು ಬೇಗ ಎದ್ದು ಓದಬೇಕು, ಸಮಯ ಸರಿಯಾಗಿ ಅರ್ಥ ಅಗಬೇಕು ಅಂತ ಕೂಡಿಟ್ಟ ಹಣದಲ್ಲಿ ಮೊದಲನೇ ಬಾರಿಗೆ ಮನೆಗೆ ಒಂದು ಅಲಾರಾಮ್ ತಂದಿದ್ರು.
ಇವರಲ್ಲಿದ್ದ ಇನ್ನೊಂದು ಗುಣವೇ ಹಿರಿಯರಿಗೆ ಸಹಾಯ ಮಾಡುವುದು. ಹಿರಿಯರು ಅಥವಾ ಭಿಕ್ಷುಕರು ಮನೆಗೆ ಬಂದರೆ ಅವರಿಗೆ ಊಟ ನೀಡುವುದು, ಅವರ ಕಟಿಂಗ್ ಮತ್ತು ದಾಡಿಗೆ ಹಣ ಕೊಡುವುದು, ಚಪ್ಪಲಿ ಮತ್ತು ಚತ್ರಿ ಖರೀದಿಸಲು ಹಣ ಕೊಡುವುದು, ಮೈ ಒತ್ತಿ ಕೊಡುವುದು ಇತ್ಯಾದಿ ಅವರಿಗೆ ಬಹು ಇಷ್ಟದ ಕೆಲಸ. ಇವರು ಈ ಸಹಾಯಕ್ಕೆ ಪ್ರತಿಯಾಗಿ ಯಾವುದೇ ಕ್ರೆಡಿಟ್ ತೆಗೆದುಕೊಂಡವರಲ್ಲ.
ಅಡಿಕೆ ಮಂಡಿಯಲ್ಲಿ ಹಮಾಲಿಗೆ ಸೇರುವುದಕ್ಕೆ ಮುನ್ನ ಹಮಾಲರ ಬಿಡಾರದಲ್ಲಿ ಅಡುಗೆ ಮಾಡೋ ಕೆಲಸಕ್ಕೆ ಸೆರ್ಕೊಂಡಿದ್ರು ಹಾಗಾಗಿ ಅವರಿಗೆ ಎಲ್ಲಾ ತರಹದ ಅಡುಗೆ ಮಾಡೋಕೆ ಬರ್ತಿತ್ತು. ಮುಂದೆ ಮದುವೆ ಆದ ಮೇಲೆಯೂ ಕೂಡ ಹೆಂಡತಿಗೆ ಅಡುಗೆ ಮಾಡಲು ಸಹಾಯ ಮಾಡ್ತಾ ಇದ್ರು. ಮ್ಕಳಿಗೆ ತಲೆ ಬಾಚೋದು, ಊಟ ಮಾಡಿಸೋದು, ಮಸಾಲೆ ರುಬ್ಬುವುದು, ದೂರದ ಕೊಳಾಯಿಯಿಂದ ನೀರು ತರುವುದು ಹೀಗೆ ತನ್ನ ಕೆಲಸದ ಜೊತೆಗೆ ಮನೆಯ ಎಲ್ಲಾ ಕೆಲಸದಲ್ಲೂ ಹೆಂಡತಿಯೊಂದಿಗೆ ಕೈಜೋಡಿಸ್ತಿದ್ರು. ಪ್ರತಿ ಭಾನುವಾರದ ಮೀನು ಪದಾರ್ಥ ಇವರ ಕೈಯಿಂದಲೇ ಆಗಬೇಕು.
ಇವರು ತುಂಬಾ ಸ್ವಾಭಿಮಾನಿ. ಬೇರೆಯವರ ಹಣಕ್ಕೆ ಆಸೆಪಟ್ಟವರಲ್ಲ, ಋಣಕ್ಕೆ ಬಿದ್ದವರಲ್ಲ ಅಥವಾ ಶ್ರಮ ಇಲ್ಲದ ತುತ್ತು ತಿಂದವರಲ್ಲ. ಇವರು ಯಾವತ್ತೂ ಹೆಳ್ತಾ ಇದ್ದದ್ದು ಒಂದೇ ಮಾತು ‘ಶ್ರಮ ಇಲ್ಲದೆ ಪಡೆವ ತುತ್ತು ಭಿಕ್ಷೆಗೆ ಸಮಾನ’ ಎಂದು. ಹಾಗಾಗಿ ಇವರಿಗೆ ತಾನು ಮಾಡುವ ಕೆಲಸದಲ್ಲಿ ಸಾಕಷ್ಟು ಪ್ರೀತಿ ಮತ್ತು ನೀಯತ್ತು.
ಇವರು ತನ್ನ ಯಾವುದೇ ಕಷ್ಟ, ನೋವನ್ನ ಇನ್ನೊಬ್ಬರೊಂದಿಗೆ ಹಂಚಿಕೊಂಡವರಲ್ಲ, ಯಾರ ಸಹಾಯವನ್ನೂ ಬೇಡಿದವರಲ್ಲ. ತನ್ನ ಮಿತಿಯೊಳಗೆ ಬರುವ ಎಲ್ಲ ಕೆಲಸಗಳನ್ನು ನಿಭಾಯಿಸುವ ಜಾಣ್ಮೆ ಅವರಲ್ಲಿತ್ತು. ಸಪ್ಲಾಯರ್ ಅಗಿ, ಅಡುಗೆ ಭಟ್ಟನಾಗಿ, ಮೀನುಗಾರನಾಗಿ, ಹಮಾಲಿಯಾಗಿ, ಲಾರಿ ಕ್ಲೀನರ್ ಆಗಿ, ಲೆಕ್ಕಿಗನಾಗಿ ಗಳಿಸಿದ ಜೀವನಾನುಭವಗಳನ್ನು ತನ್ನ ಸಂಸಾರದೊಂದಿಗೆ ಅಳವಡಿಸಿಕೊಂಡು ಪೂರ್ಣ ಜೀವನ ನಡೆಸಿದ ಒಬ್ಬ ಆದರ್ಶ ವ್ಯಕ್ತಿ ಇವರು.
ಜೀವನ ಪೂರ್ತಿ ಅಡಿಕೆ ಮಂಡಿಯಲ್ಲಿ ತನ್ನ ಕಾಲುಗಳನ್ನು ಜೀತಕ್ಕಿಟ್ಟ ಇವರು ತಮ್ಮ ಜೀವನ ಪಯಣವನ್ನು ಮುಗಿಸಿದ್ದು ಈ ಅಡಿಕೆ ಮಂಡಿಯಲ್ಲಿಯೇ.
ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ರು, ಯಾರಿಗೂ ಕಾಯದೆ.
No comments:
Post a Comment