ಈಗ ‘ದಾದಿ’ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಎಂಬತ್ತು ವರ್ಷದ ಚಾಂದ್‍ಬೀ ಹುಟ್ಟಿದ್ದು ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ. ಬಡಕುಟುಂಬದಿಂದ ಬಂದ ಇವರ ತಂದೆ ಕಿರಾಣಿ ಅಂಗಡಿಯೊಂದರಲ್ಲಿ ಕೂಲಿಯಾಗಿ ದುಡಿಯುತ್ತಿದ್ದರು. ಇವರಿಗೆ ಐದು ಜನ ಮಕ್ಕಳು (ಮೂರು ಹೆಣ್ಣು, ಎರಡು ಗಂಡು), ಚಾಂದ್‍ಬೀ ಮೂರನೇ ಮಗುವಾಗಿ ಆ ಕುಟುಂಬದಲ್ಲಿ ಜನಿಸುತ್ತಾರೆ.
ಇದು ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಒಂದು ಸಂದರ್ಬ. ಹೈದರಾಬಾದ ಕರ್ನಾಟಕದ ಹಲವು ಪ್ರದೇಶಗಳನ್ನು ನಿಜಾಮರು ಆಳುತ್ತಿದ್ದ ಕಾಲ. ನಿಜಾಮ ಸಂಸ್ಥಾನದ ಪರವಾಗಿ ‘ರಜಾಕರ’ರು ಈ ಭಾಗಗಳಿಂದ ತೆರಿಗೆಯನ್ನು ಸಂಗ್ರಹಿಸುತ್ತಿದ್ದರು. ಆಗಿನ ರಜಾಕರರ ತೆರಿಗೆ ಸಂಗ್ರಹಣಾ ಪದ್ಧತಿ ಸರಿ ಇಲ್ಲದ ಕಾರಣ ಹಲವು ಜನ ಸಮೂದಾಯ ಇದರ ವಿರುದ್ಧ ದನಿ ಎತ್ತುತ್ತಾರೆ, ತೆರಿಗೆ ನೀಡುವುದನ್ನು ನಿರಾಕರಿಸುತ್ತಾರೆ. ವಿರೂಪಾಕ್ಷ ಗೌಡರು ಅದರ ಮುಂದಾಳತ್ವ ವಹಿಸುತ್ತಾರೆ. ಆಗ ರಜಾಕರರು ಈ ಗುಂಪಿನ ಮೇಲೆ ದಾಳಿ ಮಾಡುತ್ತಾನೆ. ದಾಳಿ ತೀರ್ವತೆಗೆ ಹೋಗಿ ಇಬ್ಬರ ನಡುವೆ ದೊಡ್ಡ ಹೋರಾಟವಾಗುತ್ತದೆ. ಈ ಸಂದರ್ಭದಲ್ಲಿ ರಜಾಕರರು ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಕೊಲೆ-ಸುಲಿಗೆ- ಅತ್ಯಾಚಾರಗಳು ನಡೆಯುತ್ತವೆ. ಈ ದಂಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಸಂಶಯದಲ್ಲಿ ಚಾಂದ್‍ಬೀಯ ತಂದೆಯನ್ನೂ ಕೂಡ ಕಡಿದುಹಾಕಲಾಗುತ್ತದೆ. ಈ ಘಟನೆ ನಡೆದಾಗ ಚಾಂದ್‍ಬೀಗೆ ಆರು ವರ್ಷ. ಈ ಘಟನೆಯನ್ನು ನೋಡಿ ತಾಯಿಗೆ ಹೃದಯಾಘಾತವಾಗುತ್ತದೆ, ಖಾಯಿಲೆಗೆ ಬೀಳುತ್ತಾರೆ ಮತ್ತು ಕೊನೆಗೆ ಸಾವಿಗೆ ಶರಣಾಗುತ್ತಾರೆ. ಮಕ್ಕಳೆಲ್ಲರೂ ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗುತ್ತಾರೆ. ಆದರೆ ಇವರ ಸೋದರ ಮಾವ ಈ ಎಲ್ಲಾ ಮಕ್ಕಳನ್ನು ಕಕ್ಕೇರಾಗೆ ಕರೆದುಕೊಂಡು ಹೋಗಿ ಸಲಹುತ್ತಾರೆ.
ತಾಯಿ ಸಾಯುವಾಗ ಚಾಂದ್‍ಬೀ ಮೂರನೇ ತರಗತಿಯಲ್ಲಿ, ಉರ್ದು ಮಾಧ್ಯಮದಲ್ಲಿ ಓದುತ್ತಿದ್ದರು. ಮನೆಯಲ್ಲಿ ಬಡತನ ಇದ್ದ ಕಾರಣ ಆಕೆಯನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಕಳುಹಿಸಲಾಗುತ್ತದೆ. ಆದರೆ ಆಕೆ ಅಕ್ಷರಗಳನ್ನು ಓದಲು ಮತ್ತು ತನ್ನ ಹೆಸರನ್ನು ಬರೆಯಲು ಆಗಲೇ ಕಲಿತಿದ್ದಳು. ಶಾಲೆ ಬಿಟ್ಟ ಮೇಲೆ ಬೇರೆಯವರ ಹೊಲದಲ್ಲಿ ದುಡಿಯಲು ಪ್ರಾರಂಭಿಸುತ್ತಾರೆ. ನಂತರ ಅವರ 15ನೇ ವಯಸ್ಸಿನಲ್ಲಿ ಸೋದರ ಮಾವನ ಜೊತೆ ಮದುವೆಯಾಗುತ್ತದೆ. ಚಾಂದ್‍ಬೀಗೆ ನಾಲ್ಕು ಜನ ಮಕ್ಕಳು-ಮೂರು ಹೆಣ್ಣು, ಒಂದು ಗಂಡು. ಗಂಡನ ಮನೆಯಲ್ಲಿ ಸ್ವಲ್ಪ ಹೊಲ ಇದ್ದರೂ, ಸಂಸಾರ ದೊಡ್ಡದಾಗಿದ್ದರಿಂದ ಹೊರಗಡೆ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಹೊಲದಲ್ಲಿ ಸೆದೆ ತೆಗೆಯವುದು, ಶೇಂಗಾ ಬಿಡಿಸುವುದು ಹೀಗೆ ನಿತ್ಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಪೌಲಿಗೆ (25 ಪೈಸೆ), ಎಂಟಾಣೆಗೆ ದಿನವಿಡಿ ದುಡಿದವರು, ಅನ್ನ ರೊಟ್ಟಿ ಇಲ್ಲದೆ ಬರಿ ಪುಂಡೆ ಪಲ್ಯೆ ಬೇಯಿಸಿ ಅದಕ್ಕೆ ಉಪ್ಪು ಬೆರೆಸಿ ತಿಂದವರು. ಇವರು ಸಂತೆ ಕಂಡವರಲ್ಲ, ಹೊಲದ ತಪ್ಪಲುಗಳನ್ನೇ ವರ್ಷ’Àುಕಾಲ ಬೇಯಿಸಿ ತಿಂದವರು.
ಕೆಲವು ವರ್ಷಗಳ ನಂತರ ಸರಕಾರ ಕಕ್ಕೆರಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪ್ರಾರಂಭಿಸುತ್ತದೆ. ಚಾಂದ್‍ಬೀಯ ಗಂಡ ಕಟ್ಟಡ ಕಾಮಗಾರಿಯಲ್ಲಿ ನಿμÉ್ಠಯಿಂದ ದುಡಿತಾರೆ. ಮೂರನೇ ತರಗತಿಯವರೆಗೆ ಓದಿದ ಕಾರಣ ಚಾಂದ್‍ಬೀಗೆ ಅದೇ ದವಾಖಾನೆಯಲ್ಲಿ ‘ದಾಯಿ’ಯ ಕೆಲಸ ಸಿಗುತ್ತದೆ. ಒಂದು ಬಾಣಂತನಕ್ಕೆ (ಡೆಲಿವರಿ) ಎರಡು ರೂಪಾಯಿಯಂತೆ ಅವರ ಗೌರವ ಧನವನ್ನ ನಿಗದಿ ಮಾಡಲಾಗುತ್ತದೆ. ದಾಯಿ ಕೆಲಸ ಅಷ್ಟು ಸುಲಭವಾಗಿರಲಿಲ್ಲ, ಸುತ್ತಮುತ್ತಲೆಲ್ಲೂ ಆರೋಗ್ಯ ಕೇಂದ್ರವಿರದ ಕಾರಣ ಚಾಂದ್‍ಬೀ ಸುತ್ತಮುತ್ತಲಿನ ಹಳ್ಳಿಗಳಿಗೆ ನೆಡದೇ ಹೋಗಬೇಕಾಗಿತ್ತು. ಆಗ ದೂರವನ್ನ ಹರದಾರಿ ಮೂಲಕ ಅಳತೆ ಮಾಡುತಿದ್ದರು. ಏಳು, ಹತ್ತು ಹರದಾರಿ ನೆದುಕೊಂಡು ಹೋಗಿ ಬಾಣಂತನ ಮಾಡಿ ಬರಬೇಕಾಗಿತ್ತು. ಮುಸ್ಲಿಂ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಲು ನಿರ್ಬಂಧವಿದ್ದ ಆ ಸಂದರ್ಬದಲ್ಲಿಯೂ ಕೂಡ ದೂರ ದೂರದ ಹಳ್ಳಿಗಳಿಗೆ ಹೋಗಿ ಸೇವೆ ಮಾಡಿ ಬರುತ್ತಿದ್ದರು. ಧರ್ಮ, ಜಾತಿ ಯಾವುದನ್ನೂ ಲೆಕ್ಕಿಸದೆ ಕುರುಬರ ಮನೆಯಲ್ಲೂ, ದೊರೆಗಳ ಮನೆಯಲ್ಲೂ, ಬ್ರಾಹ್ಮಣರ ಮನೆಯಲ್ಲೂ ಅಷ್ಟು ಪ್ರೀತಿಯಿಂದ ಸೇವೆ ಮಾಡಿದ್ದಾರೆ. ದವಾಖಾನೆಯಲ್ಲಿ ವೈದ್ಯರಾದವರು ದಾಯಿಗಿಂತ ತುಂಬಾ ಚಿಕ್ಕವರು. ದಾಯಿ ಅವರನ್ನು ‘ಯಪ್ಪಾ ಬಾ, ಹೋಗು’ ಎಂದು ಏಕವಚನದಿಂದ ಮಾತನಾಡಿಸುತ್ತಿದ್ದರು. ಇದನ್ನು ಗಮನಿಸಿದ ಗಂಡ ಒಮ್ಮೆ ಚಾಂದ್‍ಬೀಯನ್ನು ಗದರಿಸುತ್ತಾರೆ, ‘ವೈದ್ಯರು ವಿದ್ಯಾವಂತರು, ಬಹಳ ಓದಿದವರು, ಅವರನ್ನು ಏಕವಚನದಲ್ಲಿ ಕರೆಯಬಾರದು, ಇನ್ನು ಮೇಲೆ ನೀನು ಅವರನ್ನು ‘ಸರ್’ ಎಂದು ಕರೆಯಬೇಕು’ ಎನ್ನುತ್ತಾರೆ. ಚಾಂದ್‍ಬೀಗೆ ಅದು ಇಷ್ಟವಾಗೊದಿಲ್ಲ. ಅವರು ಗಂಡನಿಗೆ “ವೃತ್ತಿಗೆ ಗೌರವಕೊಡಬೇಕು, ಪ್ರೀತಿಗೆ-ಸಂಬಂಧಕ್ಕೆ ಬೆಲೆ ಕೊಡಬೇಕು, ವೈದ್ಯರು ನನ್ನ ಮಗನ ಸಮಾನ, ನಾನು ಅವರನ್ನ ಸರ್ ಎಂದು ಕರೆಯೋದಿಲ್ಲ” ಎಂದು ನೇರವಾಗಿ ಹೇಳಿದ್ದರು.
ಸುಮಾರು ನಲವತ್ತು ವರ್ಷ ದಾಯಿಯಾಗಿ ಕೆಲಸಮಾಡಿದ ಚಾಂದ್‍ಬೀಗೆ ಇಲ್ಲಿಯವರೆಗೆ ಎμಂಂಔ ಬಾಣಂತನ ಮಾಡಿದ್ದೀರಿ ಎಂದು ಕೇಳಿದರೆ ‘ನನ್ನ ತಲೆಯಲ್ಲಿರುವ ಕೂದಲಿನಷ್ಟು’ ಎಂದು ಹೇಳಿ ನUುÀ ತ್ತಾರೆ. ಇವರು ಮಾಡಿದ ಎಲ್ಲಾ ಬಾಣಂತನ ಸಪಲs ವಾಗಿದೆ. ವಯಸ್ಸಾಗಿ PೈÉ ನqುÀ ಗೋದ್ರಿಂದ ದಾಯಿ ಕೆಲಸವನ್ನ ಬಿಟ್ಟು ಈಗ ಬಹಳ ವರ್ಷ ಆಯ್ತು. ಈಗಲೂ ದೂರದೂರದಿಂದ ದಾಯಿಯನ್ನ ನೋಡೋದಿಕ್ಕೆ ಜನ ಬರ್ತಾರೆ, ಅವರನ್ನ ಗೌರವದಿಂದ ನೋಡ್ತಾರೆ, ಸತ್ಕರಿಸುತ್ತಾರೆ. ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿ ಕಳಿಸುತ್ತಾರೆ. ಹಳ್ಳಿ ಹಳ್ಳಿ ಸುತ್ತಿ ಜೀವನ ನಡೆಸಿದ ಚಾಂದ್‍ಬೀ ಈಗ ಯಾದಗಿರಿ ಪಟ್ಟಣದಲ್ಲಿ ತನ್ನ ಮಗನ ಜೊತೆಯಲ್ಲಿದ್ದಾರೆ. ಆದರೆ ಅವರಿಗೆ ಹಳ್ಳಿಯ ಬದುಕೇ ±ಇಚಿಂμಂಔ ಎಂಬ ಭಾವನೆ ಇದೆ. ಹಳ್ಳಿಯಲ್ಲಿ ತುಂಬು ಪ್ರೀತಿ ಇದೆ, ಊಟ ಮಾಡದಿದ್ದರೂ ನನ್ನ ಹಳ್ಳಿಯ ಜನರನ್ನ ನೋಡಿ ನನಗೆ ಹೊಟ್ಟೆ ತುಂಬುತ್ತದೆ, ಅಲ್ಲಿ ಪ್ರೇಮ ಕಾಣ್ತದೆ ಎನ್ನುತ್ತಾರೆ.
ಈ ವಯಸ್ಸಿನಲ್ಲಿಯೂ ತನ್ನ ಕೈಲಾದ ಕೆಲಸವನ್ನ ಮಾಡ್ತಿದಾರೆ. ಹಂಡೆಯಲಿ ನೀರು ಕಾಯಿಸುವುದು, ತೆವಳುತ್ತಾ ಅಂಗಳದ ಕಸ ತೆಗೆಯುವುದು, ದವಸ ಧಾನ್ಯ ಚೊಕ್ಕ ಮಾಡುವುದು ಹೀಗೆ ಮುಂಜಾನೆ ಐದು ಗಂಟೆಗೆ ಎದ್ದು ತನ್ನ ಕೆಲಸ ಪ್ರಾರಂಭಿಸುತ್ತಾರೆ. ಅವರಿಗೆ ಜನರೊಡನೆ ಮಾತನಾಡುವುದು ಬಹಳ ಇಷ್ಟ. ಮನೆ ಮನೆಗೆ ಹೋಗಿ ತರಕಾರಿ ಮಾರುವವರು, ಹಾಲು-ಮೊಸರು ಮಾರುವ ಗೌಳಿಗರು ಹೀಗೆ ಮನೆ ಬಾಗಿಲಿಗೆ ಬಂದ ಎಲ್ಲರನ್ನೂ ಮಾತನಾಡಿಸಿ, ಕೊನೆ ಪಕ್ಷ ಒಂದು ಲೋಟ ನೀರನ್ನಾದರೂ ನೀಡಿ ಕಳುಹಿಸುತ್ತಾರೆ. ‘ಕಡ್ಡಿ ಗುಡ್ಡವಾಗಿ ಬೆಳೆಯಬೇಕು’ ಇದು ಅವರು ಎಲ್ಲಾ ಮಕ್ಕಳಿಗೂ ಹೇಳುವ ಮಾತು. ಹುಟ್ಟುವಾಗ ಎಲ್ಲರೂ ಚಿಕ್ಕವರು, ಬಡವರು ಅಥವಾ ತಿಳಿವಳಿಕೆ ಇಲ್ಲದವರು ಆದರೆ ಬೆಳೆದು ಅವರು ಆಲದ ಮರವಾಗಬೇಕು, ಹತ್ತಾರು ಜನಕ್ಕೆ ಆಸರೆಯಾಗಬೇಕು ಎಂಬುದು ಅವರ ನಿಲುವು. ಅದಕ್ಕಾಗಿ ಶಿಕ್ಷಣ ಬಹಳ ಮುಖ್ಯ, ಎಲ್ಲರಿಗೂ ಶಿಕ್ಷಣ ಸಿಗಬೇಕು ಎನ್ನುತ್ತಾರೆ. ತನ್ನ ಎಲ್ಲಾ ಮಕ್ಕಳಿಗೆ ಓದಿಸಲು ಆಗದಿದ್ದರೂ ಒಬ್ಬ ಮಗನನ್ನು ಸರಿಯಾಗಿ ಶಾಲೆಗೆ ಕಳುಹಿಸಿದ್ದಾರೆ, ಈಗ ಆವರು ಸರಕಾರಿ ನೌಕರಿಯಲ್ಲಿದ್ದಾರೆ. ದಾದಿಯದು ನೇರ ನುಡಿಯ ಸ್ವಭಾವ, ಇದ್ದದ್ದನ್ನ ಇದ್ದ ಹಾಗೆ ನೇರವಾಗಿ ಹೇಳುವುದು ಅವರ ಪದ್ದತಿ. ಜೊತೆಗೆ ಹಳ್ಳಿ ಹಳ್ಳಿ ಸುತ್ತಿ, ಜನರನ್ನ ನೋಡಿ ಮೌಲ್ಯಗಳನ್ನ ಸಂಪಾದಿಸಿದ್ದಾರೆ. ಈಗ ಅವರು ಊರಿನ ಹಿರಿಯರು, ಜನ ಯಾವುದೇ ಚಿಕ್ಕ ಪುಟ್ಟ ನ್ಯಾಯ ತೀರ್ಮಾನ, ತಂಟೆ ತಕರಾರುಗಳಿದ್ದರೂ ದಾದಿಯನ್ನು ಕೇಳಿ ಅವರ ತೀರ್ಮಾನದಂತೆ ನಡೆದುಕೊಳ್ಳುತ್ತಾರೆ. ದಾದಿ ಎಲ್ಲರಿಗೂ ಅಚ್ಚು ಮೆಚ್ಚು, ಅವರು ಬೆಳೆಸಿದ ಆಲದ ಮರದ ಕೆಳಗೆ ಕೂಡಿ ಬಾಳುವ ಕುಟುಂಬ ನಮ್ಮದು ಎಂದು ಗೌರವದಿಂದ ಜನ ಮಾತನಾಡುತ್ತಾರೆ.
(ನನ್ನ ಪಕ್ಕದ ಮನೆಯ, ಪ್ರೀತಿಯ ಚಾಂದ್‍ಬೀ ದಾದಿಯೊಂದಿಗಿನ ಚಿಕ್ಕ ಸಂದರ್ಶನದ ಸಾರಾಂಶ ರೂಪ ಈ ಲೇಖನ)