Saturday, 13 August 2016

ಎದೆಯೊಳಗಿನ ಪುಷ್ಯಮಳೆ

ಕತ್ತಲೆಯಲ್ಲಿ ಆರು ಕಣ್ಣುಗಳು
ಮಿಂಚು ಹೊಳೆದಂತೆಲ್ಲ ಫಳ ಫಳ
ಸೂರಿನ ಮೇಲೆ ಮುಗಿಬಿದ್ದಿದೆ
ದೊಡ್ಡ ಪುಷ್ಯಮಳೆ

ಮೂಟೆಯಡಿ ಬಿದ್ದ ಸಂಕುವಿಗೆ
ಮೊಣಕಾಲೆಲ್ಲ ಗಾಯ
ತೂತು ಬಿದ್ದ ಕೊಡೆಯಲ್ಲಿ ನೀರು
ಹರಿದಿದ್ದು ರಕ್ತಕಣ್ಣೀರು

ಕೈಯ್ಯಲ್ಲಿ ಚಾಕು, ಗೋಟು ಅಡಿಕೆ
ಪಾತಿಯ ಓಟ ಸೂರಿನೆಡೆಗೆ
ಮಳೆಗೆ ತೊಯ್ದ ಸೀರೆ ಕಪ್ಪು
ಒದ್ದೆಯಾದ ಒಡಲು ಉರಿದಿತ್ತು

ಇಬ್ಬರದೂ ಹಿಡಿ ಹಿಡಿ ಶಾಪ
ಪುಷ್ಯ ಮಳೆಗೆ ಆರದಿರಲಿ ದೀಪ
ನಿಂತಿಲ್ಲ ಓಟ, ನಿಂತಿಲ್ಲ ಮಳೆ
ಕಣ್ಣುಗಳಲ್ಲಿ ಅದೇ ಭಯ, ಹೊಳಪು

ಪಾತಿ-ಸಂಕು, ಗೋಣಿತಾಟು ಸರಿಸಿ
ಚಿಮುಣಿ ಬುಡ್ಡಿಗೆ ಕಡ್ಡಿ ಕೀರಿದಾಗ
ಕಣ್ಣುಗಳಲ್ಲಿ ಈಗ ಬೆಳಕಿತ್ತು
ಎದೆಯೊಳಗಿನ ಪುಷ್ಯಮಳೆ ನಿಂತಿತು

No comments:

Post a Comment