ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವುದು ಹೇಗೆ? ಇದು ಪ್ರತಿ ವರ್ಷ ನನ್ನನ್ನ ಕಾಡೋ ಪ್ರಶ್ನೆ. ಹೊಸ ವರ್ಷ ಆರಂಭ ಆದಾಗ ‘ನನ್ನ ಎಲ್ಲಾ ನಡವಳಿಕೆಯನ್ನ ಬದಲಾಯಿಸಿಕೊಳ್ಬೇಕು, ನಾನೂ ಬೆಳೆಯಬೇಕು, ಓದಬೇಕು, ನಾಲ್ಕು ಜನಕ್ಕೆ ಸಹಾಯ ಮಾಡಬೇಕು’ ಎಂದು ಮನಸ್ಸಿನಲ್ಲಿ ಸಾಕಷ್ಟು ಬಾರಿ ಅಂದುಕೊಳ್ತೇನೆ. ಆದರೆ ನಿತ್ಯದಂತೆಯೇ ಕಳೆದು ಹೋಗುತ್ತವೆ ನಾಳೆಗಳು, ಹೊಸ ವರ್ಷಗಳು, ಯಾವುದೇ ಬದಲಾವಣೆಗಳಿಲ್ಲದೆ. ಬದಲಾವಣೆಗಾಗಿ ಯೋಚನೆ ಮಾಡ್ತೇವೆ, ಬದಲಾವಣೆ ಆಗದಿದ್ದರೆ ನಾಳೆ ಅದರಿಂದಾಗುವ ಪರಿಣಾಮಗಳ ಬಗ್ಗೆಯೂ ಯೋಚಿಸ್ತೇವೆ. ಆದರೆ ಬದಲಾವಣೆ ಮಾತ್ರ ಆಗೋದಿಲ್ಲ. ತಮ್ಮ ಬದುಕಿನಲ್ಲಿ ಅದ್ಭುತ ಶಿಸ್ತನ್ನ ರೂಢಿಸಿಕೊಂಡಿರುವ ಹಲವಾರು ವ್ಯಕ್ತಿಗಳನ್ನ ನೋಡ್ತೇನೆ. ಊಟದಿಂದ ಹಿಡಿದು ತಮ್ಮ ಸಂಪೂರ್ಣ ವ್ಯಕ್ತಿತ್ವÀ ನಿರೂಪಿಸಿಕೊಂಡಿರುವಲ್ಲಿನ ಅಗಾಧ ಶಿಸ್ತು ಅವರದ್ದು. ಇವರಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗ್ತೇನೆ. ಹಾಗಿದ್ದರೂ ಯಾಕೆ ನಾನು ಬದಲಾಗೋದಿಲ್ಲ?
ನಾನು ನನ್ನ ಮನಸ್ಸನ್ನು ಹುಂಬತನದಿಂದ ಹಿಡಿದಿಟ್ಟಿರುವ ನಂಬಿಕೆ ಏನೆಂದರೆ ‘ನಾನು ಮಾಡುತ್ತಿರುವುದು ಸರಿ ಎಂದೆನಿಸಿದರೆ ಮತ್ತೆ ಜಗತ್ತಿಗೆ ಅಥವಾ ಸಮಾಜಕ್ಕೆ ಹೆದರಬೇಕಾದ ಅಗತ್ಯವಿಲ್ಲ” ಎಂಬುದು. ಹಾಗಾಗಿ ಬಹಳ ಸಲ ನಾನು ಮಾಡುತ್ತಿರುವುದು ಸರಿ ಎಂದೆನಿಸಿದಾಗ ಜನ ಏನೇ ಹೇಳಿದರೂ ನಾನು ಅದರ ಬಗ್ಗೆ ಕಿವಿಗೊಟ್ಟಿಲ್ಲ, ಬದಲಾವಣೆಗೊಳ್ಳುವ ಯೋಚನೆಯನ್ನೂ ಮಾಡಿಲ್ಲ. ಆದರೆ ನಾನು ‘ಸರಿ’ ಎಂದು ವಾಧಿಸುವ ನನ್ನ ನಂಬಿಕೆಗೆ ಆಧಾರ ಯಾವುದು? ಕೆಲವು ಸಲ ಮನೆಯಲ್ಲಿ ಅಮ್ಮನಿಗೆ, ಅಕ್ಕನಿಗೆ, ತಮ್ಮನಿಗೆ ಬುದ್ಧಿ ಹೇಳೋಕೆ ಹೋಗ್ತೇನೆ, ಅವರು ನಾನು ಹೇಳಿದ್ದನ್ನ ಕೇಳಬೇಕು ಅಂತ ಬಯಸುತ್ತೇನೆ ಅದೇ ನನ್ನ ಶಿಸ್ತು, ನೀವೂ ಪಾಲಿಸಬೇಕು ಎಂದು ಕೂಗಾಡ್ತೇನೆ. ಆದರೆ ಅವರ ಜಾಗದಲ್ಲಿ ನಿಂತು ಯೋಚಿಸುವುದರಲ್ಲಿ ಸೋಲ್ತೇನೆ. ಕೇವಲ ನನ್ನ ಅನುಭವದ ಹಿನ್ನೆಲೆಯಲ್ಲಿ ಕಟ್ಟಿಕೊಂಡ ನಂಬಿಕೆಗಳಿಂದ ಮಾತ್ರ ಶಿಸ್ತು ಬಂದುಬಿಡುವುದಿಲ್ಲ ಅಥವಾ ಬದಲಾವಣೆಯಾಗುವುದಿಲ್ಲ. ನನ್ನ ಅನುಭವದ ಜೊತೆಗೆ ನನ್ನ ಕುಟುಂಬದ, ನನ್ನ ಸಮಾಜದ ಅನುಭವದಿಂದ ಪಡೆದ ನಂಬಿಕೆಯ ಗಟ್ಟಿಯಾದ ನಿಲುವಿನಿಂದ ಮಾತ್ರ ಶಿಸ್ತನ್ನು ಪಡೆಯಲು ಸಾದ್ಯ ಎಂದೆನಿಸುತ್ತಿದೆ.
ದೇವರು, ಮೂಢನಂಬಿಕೆ, ಜಾತಕ ಇವುಗಳ ಬಗ್ಗೆ ನನ್ನ ನಿಲುವು, ದೃಷ್ಟಿಕೋನ ಬದಲಾಗಿದೆ ಎಂದು ನಂಬಿದ್ದೆ. ಮನೆಯಲ್ಲಿ ನಡೆಯುವ ಪೂಜೆ ಪುನಸ್ಕಾರಗಳನ್ನ ತಿರಸ್ಕರಿಸಿದ್ದೆ. ಇಂತಹ ನಂಬಿಕೆಗಳಿಗಾಗಿ ಹಣ ಫೋಲಾಗುವುದನ್ನು ಖಂಡಿಸಿದ್ದೆ. ಆದರೆ ಕೆಲವು ಸಂದರ್ಬಗಳಲ್ಲಿ ಅನಿವಾರ್ಯವಾಗಿ ಅವರ ನಂಬಿಕೆಯ ಎದುರು ತಲೆಬಗ್ಗಿಸಿ ನಿಂತದ್ದಿದೆ. ಮೂರು ಜನ ಪುರೋಹಿತರು ನನ್ನ ಅಭಿವೃದ್ಧಿಗಾಗಿ ಹೋಮ ಮಾಡುವಾಗ ಅವರೆದುರು ಅಸಹನೀಯವಾದ ನೋವು ಉಂಡದ್ದಿದೆ. ಆಗೆಲ್ಲಾ, ಮನೆಯವರ ನಂಬಿಕೆಯೆದುರು ನನ್ನ ನಿಲುವು ಸೋತದ್ದು ಯಾಕೆ? ಅವರ ಮನಪರಿವರ್ತಿಸುವಲ್ಲಿ ಎಡವಿದ್ದೆಲ್ಲಿ? ಇವೆಲ್ಲವನ್ನೂ ಮೀರಿ ನನ್ನ ನಂಬಿಕೆಯನ್ನು, ಶಿಸ್ತನ್ನು ಉಳಿಸಿಕೊಳ್ಳಬೇಕಾದರೆ ನಾನು ಏನು ಮಾಡಬೇಕು? ನನ್ನ ನಿಲುವು ಎಷ್ಟು ದೃಡವಾದದ್ದು? ಎಂದು ಪ್ರಶ್ನಿಸಿಕೊಂಡು ಪರಿತಪಿಸಿದ್ದೇನೆ.
ಶಿಸ್ತು ಮೂಡಿಸಿಕೊಳ್ಳಬೇಕಾದರೆ ಎಲ್ಲಾ ಸಂಬಂಧಗಳ ಮೋಹದಿಂದ ಹೊರಬರಬೇಕೆ? ಬದುಕನ್ನ ರೂಪಿಸಿಕೊಳ್ಳಬೇಕಾದರೆ ಯಾವುದೋ ಒಂದು ದಾರಿಯನ್ನ ಅಯ್ಕೆ ಮಾಡಿಕೊಳ್ಳಬೇಕು. ಆದರೆ ನನಗೆ ಎರಡೂ ದಾರಿ ಅμÉ್ಟೀ ಸತ್ಯ (ಒಳ್ಳೆಯದು) ಅμÉ್ಟೀ ಸುಳ್ಳು (ಕೆಟ್ಟದ್ದು). ನನ್ನ ಮನಸ್ಸು ಅಷ್ಟು ಪಕ್ವವಾಗಿಲ್ಲ, ಅಷ್ಟು ದೃಢವಾಗಿಲ್ಲ. ಆಯ್ಕೆ ಮಾಡಿಕೊಂಡ ದಾರಿಯಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ನನ್ನ ಶಕ್ತಿ ಮತ್ತು ದೃಢನಂಬಿಕೆಯಿಂದ ಮಾತ್ರ ಶಿಸ್ತಿನ ಬದುಕನ್ನ ಕಟ್ಟಿಕೊಳ್ಳಲು ಸಾಧ್ಯವಾಗಬಹುದು ಎಂದೆನಿಸುತ್ತಿದೆ.
ಪೇರಿ ಒಮ್ಮೆ ಹೇಳಿದ ಮಾತು ನೆನಪಾಗುತ್ತಿದೆ ‘ನನಗೆ ಇರುವ ಸಮಯ ಕಡಿಮೆ ಇದೆ, ಅದರೆ ಮೀರಲಿಕ್ಕಿರುವುದು ಬಹಳಷ್ಟಿದೆ, ಇನ್ನೂ ಗಟ್ಟಿಯಾಗಬೇಕಿದೆ’ ಎಂದು. ಬಹುಷಹ ಜೀವನದ ಇಂತಹ ಹಲವು ಸತ್ಯಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮನ್ನು ಗಟ್ಟಿಯಾಗಿಸುವಲ್ಲಿ ಮತ್ತು ಬಂಧನದಿಂದ ಹೊರಬರಲು ಸಹಾಯಮಾಡಿಕೊಡುತ್ತವೆ. ಬರಿ ಯೋಚನೆಯಿಂದ ಮತ್ತು ಚಿಂತನೆಯಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಆ ಚಿಂತನೆಯಂತೆ ಬಾಳುವುದೂ ಅμÉ್ಟೀ ಮುಖ್ಯ. ಚಿಕ್ಕ ಚಿಕ್ಕ ಪ್ರಯತ್ನಗಳು ನಮ್ಮಲ್ಲಿ ಶಿಸ್ತನ್ನು ರೂಪಿಸಿಕೊಳ್ಳಲು ಬುನಾದಿಯಾಗಬಹುದು. ನನ್ನ ಸ್ನೇಹಿತ ಇತ್ತೀಚೆಗೆ ಪ್ರಾರಂಭಿಸಿದ ಇಂತಹ ಪ್ರಯತ್ನ ನನಗೆ ತುಂಬಾ ಅಸಕ್ತಿದಾಯಕವಾಗಿ ಕಂಡಿತು. ಆತ ಹಂತಹಂತವಾಗಿ (ಪ್ರಜ್ಞಾಪೂರ್ವಕವಾಗಿ) ಚಹ ಕುಡಿಯುವದನ್ನು ಬಿಟ್ಟಿದ್ದು, ರಾತ್ರಿ ಊಟವನ್ನು ಕಡಿಮೆ ಮಾಡಿದ್ದು ಹೀಗೆ ಜೀವನಕ್ಕೆ ಅವಶ್ಯವಲ್ಲ ಎನ್ನುವ ಚಿಕ್ಕ ಚಿಕ್ಕ ಅಂಶಗಳನ್ನು ಬಿಟ್ಟಿದ್ದು ಆತನ ಮನಸ್ಸನ್ನು ದೃಢಗೊಳಿಸಿದೆ, ಮುಂದಿನ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸನ್ನ ಸಿದ್ಧಗೊಳಿಸಿದೆ. ಈ ಎಲ್ಲಾ ಅನುಭವಗಳು ನನಗೆ ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುದರ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನ ತಿಳಿಸಿದೆ. ಜೀವನದ ಸತ್ಯವನ್ನ ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಬಾಳುವ ಪ್ರಯತ್ನ ನಡೆಸುವುದು ನಮ್ನನ್ನು ವಿಹ್ವಲತೆಯ ಬದುಕಿನಿಂದ ಮುಕ್ತಗೊಳಿಸಲು ಸಾದ್ಯವೆಂದು ಅರಿವಾಗುತ್ತಿದೆ.
No comments:
Post a Comment