ವಿಶ್ಲೇಷಣೆ ನಮ್ಮ ಸಮಸ್ಯೆಗಳಿಗೆ ಅಥವಾ ಪ್ರಶ್ನೆಗಳಿಗೆ ಸತ್ಯಕ್ಕೆ ಹತ್ತಿರವಾದ ಹಾಗೂ ವೈಜ್ಞಾನಿಕವಾದ ಉತ್ತರವನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಸಂಶೋಧನೆಯಲ್ಲಿ ಇದು ಒಂದು ಮುಖ್ಯವಾದ ಹಂತ. ಮಾಹಿತಿಯನ್ನು ಗುಣಾತ್ಮಕವಾಗಿ ಅಥವಾ ಪರಿಮಾಣಾತ್ಮಕವಾಗಿ, ವಿವಿಧ ವಿಶ್ಲೇಷಣಾ ವಿಧಾನಗಳ ಮೂಲಕ ಓರೆಗೆ ಹಚ್ಚಿ ಉತ್ತರಗಳನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತಾರ್ಕಿಕ ಚಿಂತನೆ ಯಾವುದೇ ವೈಜ್ಞಾನಿಕ ವಿಧಾನಗಳಿಲ್ಲದೆ ಕೇವಲ ಹಿಂದಿನ ಅನುಭವಗಳ ಆಧಾರದ ಮೇಲಿನ ಊಹೆ ಮತ್ತು ಲಭ್ಯವಿರುವ ಕೆಲವೇ ಕೆಲವು ಮಾಹಿತಿಯ ಆಧಾರದ ಮೇಲೆ ನಿಲ್ಲುವ ಅಭಿಪ್ರಾಯ. ಈ ಅಭಿಪ್ರಾಯ ಅಥವಾ ಚಿಂತನೆ ಎಷ್ಟು ಸರಿ ಎಂಬುದನ್ನು ಮತ್ತೆ ಸರಿಯಾದ ವಿಶ್ಲೇಷಣೆಯ ಮೂಲಕ ತಿಳಿಯಬಹುದು. ಇಲ್ಲಿ ನನ್ನ ಅಭಿಪ್ರಾಯದಲ್ಲಿ ಸಂಶೋಧಕರಿಗೂ, ಜನಸಾಮಾನ್ಯರಿಗೂ ಅಥವಾ ಕ್ಷೇತ್ರದಲ್ಲಿ ಕೆಲಸಮಾಡುವ ಪ್ರತಿಯೊಬ್ಬರಿಗೂ ವಿಶ್ಲೇಷಣೆಗಿಂತ ಮುಖ್ಯವಾಗಿ ಈ ತಾರ್ಕಿಕ ಚಿಂತನೆಯ ಮನೋಭಾವ ಬೇಕು ಎಂಬುದು.
ಎರಡು ವರ್ಷಗಳ ಹಿಂದೆ ನಾನು ಪೆರಿಯವರ ಮನೆಯಲ್ಲಿ ವಾಸವಾಗಿದ್ದೆ. ಮನೆಗೆ ಯಾವುದೇ ಸಾಮಗ್ರಿಗಳು ಬೇಕಿದ್ದರೂ ದೂರದಲ್ಲಿದ್ದ ಮೈನ್ ರೋಡ್‍ನಲ್ಲಿರುವ ಅಂಗಡಿಗಳಿಂದ ಅಥವಾ ಸೂಪರ್ ಮಾರ್ಕೇಟ್‍ನಿಂದ ತರ್ತಿದ್ದೆ. ನಮ್ಮ ಮನೆ ಇದ್ದ ಪ್ರದೇಶದಲ್ಲಿ ಸುಮಾರು 50-60 ಮನೆಗಳು ಇದ್ದಿರÀಬಹುದು. ಒಮ್ಮೆ ಪೆರಿ ಕೇಳಿದ್ರು ‘ಈ ಪ್ರದೇಶದಲ್ಲಿ ಎಲ್ಲೂ ಚಿಕ್ಕ ಅಂಗಡಿಗಳು ಇಲ್ವಾ’ ಅಂತ. ಎಲ್ಲೂ ಅಂಗಡಿಗಳನ್ನ ಗಮನಿಸದೇ ಇದ್ದರಿಂದ ನಾನು ಸಹಜವಾಗಿ ‘ಇಲ್ಲ’ ಎಂದೆ. ಆಗ ಅವರು ‘ಅದು ಹೇಗೆ ಸಾದ್ಯ, ಇಷ್ಟು ಮನೆಗಳಿರುವ ಜಾಗದಲ್ಲಿ ಎಲ್ಲಾದರೂ ಒಂದು ಕಡೆ ಚಿಕ್ಕ ಪೆಟ್ಟಿ ಶಾಪ್ ಆದರೂ ಇರಲೇ ಬೇಕಲ್ಲ, ಎಲ್ಲಾ ಸಂದರ್ಭದಲ್ಲೂ ಸೂಪರ್ ಮಾರ್ಕೇಟ್‍ಗೆ ಹೋಗೋದಿಕ್ಕೆ ಆಗಲ್ಲ. ಅಕಸ್ಮಾತ್ ಎನಾದರೂ ಚಿಕ್ಕ ಪುಟ್ಟ ಅಗತ್ಯತೆಗಳು ಬಂದಾಗ ಅದು ಸಿಗುವ ವ್ಯವಸ್ತೆಯನ್ನು ಬಹುಶಹ ಜನ ಮಾಡಿಕೊಂಡಿರ್ತಾರೆ’ ಅಂತ ಹೇಳಿದ್ರು. ಅವರ ಆ ತಾರ್ಕಿಕ ಚಿಂತನೆ ನನಗೆ ನಿಜ ಅನ್ನಿಸಿತು. ಸೂಪರ್ ಮಾರ್ಕೇಟ್‍ಗಳೆಲ್ಲ ಇತ್ತೀಚಿನ ಬದಲಾವಣೆಗಳು ಆದರೆ ಬಹಳ ವರ್ಷದಿಂದ ಆ ಪ್ರದೇಶದಲ್ಲಿ ಜನ ಬದುಕ್ತಾ ಇದ್ದಾರೆ ಅಂದ್ರೆ ಇಂತಹ ಏರ್ಪಾಡುಗಳನ್ನ ಮಾಡಿಕೊಂಡಿರುವುದು ಸಹಜ. ಅವರ ಈ ತರ್ಕವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆ ಪ್ರದೇಶವನ್ನ ರೌಂಡ್ ಹಾಕಿದ್ರೆ ಅಲ್ಲಲ್ಲಿ, ಮನೆಯಲ್ಲಿ ಚಿಕ್ಕಪುಟ್ಟ ಅಂಗಡಿಗಳ ವ್ಯವಸ್ತೆ ಮಾಡಿಕೊಂಡಿದ್ದು ಕಾಣಿಸ್ತು. ಬಹುಶಹ ಇಂತಹ ಹಲವಾರು ಉದಾಹರಣೆಗಳು ನಿಮ್ಮಲ್ಲಿ ಇರಬಹುದು. ತಾರ್ಕಿಕ ಚಿಂತನೆ ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ, ವಿಶ್ಲೇಷಣೆ ಈ ಪ್ರಶ್ನೆಗಳಿಗೆ ವೈಜ್ಞಾನಿಕವಾದ ಉತ್ತರಗಳನ್ನ ಹುಡುಕೋದಿಕ್ಕೆ ಸಹಾಯ ಮಾಡ್ತದೆ.
ಸ್ವ-ವಿಶ್ಲೇಷಣೆ:
ಸಹಜವಾಗಿ ನಾವು ಬೇರೆಯವರನ್ನ, ಸಮಾಜವನ್ನ, ನಿತ್ಯ ಜೀವನದಲ್ಲಿ ನಡೆಯುವ ಹಲವು ವಿಷಯಗಳನ್ನು ವಿಶ್ಲೇಷಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ನಮ್ಮನ್ನು ನಾವು ಆ ಕನ್ನಡಿಯ ಮುಂದೆ ನಿಲ್ಲಿಸಿಕೊಳ್ಳುವುದಕ್ಕೆ ಒಪ್ಪುವುದಿಲ್ಲ. ಆ ಮನುಷ್ಯ ಸರಿ ಇಲ್ಲ ಎಂದು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವೆ, ಆದರೆ ನಿಜವಾಗಿ ವಿಶ್ಲೇಷಣೆ ಮಾಡಿದರೆ ಆ ವ್ಯಕ್ತಿಗಿಂತ ನಾವೇ ಎμÉ್ಟೂೀ ಕೆಟ್ಟವರಾಗಿರ್ತೆವೆ. ಬೇರೆಯವರ ತಪ್ಪುಗಳಿಗೆ ಕಾರಣ ಹುಡುಕುವ ನಾವು ನಮ್ಮ ತಪ್ಪುಗಳಿಗೆ ಸಾಕಷ್ಟು ಸಮರ್ಥನೆ ಕೊಟ್ಟುಕೊಳ್ತೇವೆ.
ಬೆಂಗಳೂರು ರೈಲ್ವೇ ಸ್ಟೇಷನ್‍ನಲ್ಲಿ, ಎಪ್ಪತ್ತರ ವಯಸ್ಸಿನ ಒಬ್ಬ ಹೆಂಗಸು, ಡಸ್ಟ್‍ಬಿನ್ ಒಳಗಿಂದ, ಜನ ತಿಂದು ಬಿಸಾಕಿದ ಆಹಾರದ ಪೊಟ್ಟಣದೊಳಗಿಂದ ಆಹಾರಗಳನ್ನ ಸಂಗ್ರಹಿಸುತ್ತಾ ಇದ್ದಳು. ನನಗೆ ಬಹಳ ಬೇಸರ ಆಗಿ ಆ ತಾಯಿಗೆ ಹೇಳಿದೆ ‘ಅದನ್ನ ತಿನ್ನಬೇಡ, ಅದು ಸರಿ ಇಲ್ಲ’ ಎಂದು. ಅಲ್ಲದೆ ನನ್ನ ಕೈಲಿದ್ದ ಇನ್ನೂರು ರೂಪಾಯಿಗಳನ್ನು ಅವಳಿಗೆ ಕೊಟ್ಟೆ. ನಾಜೂಕಿನಿಂದ ಆಹಾರಗಳನ್ನು ಡಬ್ಬಿಗೆ ಸೇರಿಸಿದ ಹೆಂಗಸು, ದುಡ್ಡನ್ನು ವಾಪಸ್ ನನ್ನ ಕಿಸೆಯಲ್ಲಿ ಇಡುತ್ತ ಸುಮ್ಮನೆ ನಕ್ಕು ತನ್ನ ಪಾಡಿಗೆ ಹೊರಟು ಹೋದಳು. ಒಮ್ಮೆ ಮನಸ್ಸಿಗೆ ಅನ್ನಿಸಿತು ಈ ಹೆಂಗಸಿಗೆ ಎಷ್ಟು ಅಹಂಕಾರ ಎಂದು. ಆದರೆ ಆಕೆಯ ಜಾಗದಲ್ಲಿ ನಿಂತು ಯೋಚಿಸಿದರೆ ಆಕೆ ಮಾಡಿದ್ದು ಸರಿ. ಆವತ್ತಿನ ಮಟ್ಟಿಗೆ ನಾನು ಆಕೆಯ ಹಸಿವನ್ನ ತೀರಿಸಬಹುದಿತ್ತು ಆದರೆ ದಿನನಿತ್ಯ ಆಕೆಯ ಹಸಿವನ್ನ ತೀರಿಸುವವರು ಯಾರು? ಬಹುಶಹ ಆ ಡಸ್ಟ್‍ಬಿನ್‍ಗೆ ಮಾತ್ರ ಸಾದ್ಯ.
ಆ ದಿನ ಆ ಹೆಂಗಸಿನ ಬಗ್ಗೆ ನನ್ನ ಮನಸ್ಸಿನಲ್ಲಿ ಮೂಡಿದ ಮಮಕಾರ ನಿಜವೇ ಇರಬಹುದು, ಆದರೆ ಪ್ರತಿ ನಿತ್ಯ ನನ್ನ ಸುತ್ತ ಮುತ್ತ ನಡೆಯುವ ಇಂತಹ ಹಲವಾರು ಘಟನೆಗಳನ್ನು ನಾನು ನೋಡಿಯೂ ನೋಡದೇ ಇರುವ ಹಾಗೆ ಬದುಕುತ್ತೇನೆ. ಕೆಲವು ಸಂದರ್ಬದಲ್ಲಿ ಕೇವಲ ತೋರಿಕೆಗಾಗಿ, ನೋಡುವ ಜನರಿಗಾಗಿ ಸಮಾಜ ಸೇವೆ ಮಾಡೂ ನಾಟಕ ಮಾಡ್ತೇವೆ. ನಡೆ ಮತ್ತು ನುಡಿಯಲ್ಲಿ ಸಾಕಷ್ಟು ವ್ಯತ್ಯಾಸ ಮಾಡ್ತೇವೆ. ಯಾರದ್ದೋ ಸ್ನೇಹಕ್ಕೆ ದ್ರೋಹ ಮಾಡಿರ್ತೇವೆ, ಯಾವುದೋ ಪ್ರೀತಿಗೆ ಮೋಸ ಮಾಡಿರ್ತೇವೆ, ಯಾರದೋ ಗೌರವ ದಕ್ಕೆ ಆಗುವ ಹಾಗೆ ಗಾಸಿಪ್ ಮಾಡಿರ್ತೇವೆ. ಇದೆಲ್ಲವೂ ಸಮಾಜದಲ್ಲಿ ನಡಿತಾ ಇದೆ ಅಂದುಕೊಂಡಿರ್ತೇವೆ, ಆದರೆ ಇಂತಹ ಎμÉ್ಟೂೀ ಅಂಶಗಳು ನಮ್ಮೊಳಗೆ ಹುಟ್ಟಿ ಬೆಳೆದು ಅಂತಹ ಸಮಾಜ ಆಗೋದಿಕ್ಕೆ ಕಾರಣವಾಗಿರ್ತವೆ. ಯಾವತ್ತೋ ಒಂದು ದಿನ ರೈಲ್ವೇ ಸ್ಟೇಷನ್‍ನಲ್ಲಿ ಕಂಡ ಆ ಹೆಂಗಸಿನ ಹಸಿವನ್ನ ನೀಗಿಸೊದಿಕ್ಕೆ ಹೊರಟ ನನಗೆ ನೆನಪಾದದ್ದು ಕಳೆದ ಮೂರು ತಿಂಗಳಿನಿಂದ ಯಾವುದೋ ಕಾರಣಕ್ಕೆ ನಾನು ಮನೆಗೆ ಹಣ ಕಳಿಸುವುದನ್ನ ನಿಲ್ಲಿಸಿದ್ದು.
No comments:
Post a Comment