Saturday, 13 August 2016

ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವುದು ಹೇಗೆ?

ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವುದು ಹೇಗೆ? ಇದು ಪ್ರತಿ ವರ್ಷ ನನ್ನನ್ನ ಕಾಡೋ ಪ್ರಶ್ನೆ. ಹೊಸ ವರ್ಷ ಆರಂಭ ಆದಾಗ ‘ನನ್ನ ಎಲ್ಲಾ ನಡವಳಿಕೆಯನ್ನ ಬದಲಾಯಿಸಿಕೊಳ್ಬೇಕು, ನಾನೂ ಬೆಳೆಯಬೇಕು, ಓದಬೇಕು, ನಾಲ್ಕು ಜನಕ್ಕೆ ಸಹಾಯ ಮಾಡಬೇಕು’ ಎಂದು ಮನಸ್ಸಿನಲ್ಲಿ ಸಾಕಷ್ಟು ಬಾರಿ ಅಂದುಕೊಳ್ತೇನೆ. ಆದರೆ ನಿತ್ಯದಂತೆಯೇ ಕಳೆದು ಹೋಗುತ್ತವೆ ನಾಳೆಗಳು, ಹೊಸ ವರ್ಷಗಳು, ಯಾವುದೇ ಬದಲಾವಣೆಗಳಿಲ್ಲದೆ. ಬದಲಾವಣೆಗಾಗಿ ಯೋಚನೆ ಮಾಡ್ತೇವೆ, ಬದಲಾವಣೆ ಆಗದಿದ್ದರೆ ನಾಳೆ ಅದರಿಂದಾಗುವ ಪರಿಣಾಮಗಳ ಬಗ್ಗೆಯೂ ಯೋಚಿಸ್ತೇವೆ. ಆದರೆ ಬದಲಾವಣೆ ಮಾತ್ರ ಆಗೋದಿಲ್ಲ. ತಮ್ಮ ಬದುಕಿನಲ್ಲಿ ಅದ್ಭುತ ಶಿಸ್ತನ್ನ ರೂಢಿಸಿಕೊಂಡಿರುವ ಹಲವಾರು ವ್ಯಕ್ತಿಗಳನ್ನ ನೋಡ್ತೇನೆ. ಊಟದಿಂದ ಹಿಡಿದು ತಮ್ಮ ಸಂಪೂರ್ಣ ವ್ಯಕ್ತಿತ್ವÀ ನಿರೂಪಿಸಿಕೊಂಡಿರುವಲ್ಲಿನ ಅಗಾಧ ಶಿಸ್ತು ಅವರದ್ದು. ಇವರಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗ್ತೇನೆ. ಹಾಗಿದ್ದರೂ ಯಾಕೆ ನಾನು ಬದಲಾಗೋದಿಲ್ಲ?

ನಾನು ನನ್ನ ಮನಸ್ಸನ್ನು ಹುಂಬತನದಿಂದ ಹಿಡಿದಿಟ್ಟಿರುವ ನಂಬಿಕೆ ಏನೆಂದರೆ ‘ನಾನು ಮಾಡುತ್ತಿರುವುದು ಸರಿ ಎಂದೆನಿಸಿದರೆ ಮತ್ತೆ ಜಗತ್ತಿಗೆ ಅಥವಾ ಸಮಾಜಕ್ಕೆ ಹೆದರಬೇಕಾದ ಅಗತ್ಯವಿಲ್ಲ” ಎಂಬುದು. ಹಾಗಾಗಿ ಬಹಳ ಸಲ ನಾನು ಮಾಡುತ್ತಿರುವುದು ಸರಿ ಎಂದೆನಿಸಿದಾಗ ಜನ ಏನೇ ಹೇಳಿದರೂ ನಾನು ಅದರ ಬಗ್ಗೆ ಕಿವಿಗೊಟ್ಟಿಲ್ಲ, ಬದಲಾವಣೆಗೊಳ್ಳುವ ಯೋಚನೆಯನ್ನೂ ಮಾಡಿಲ್ಲ. ಆದರೆ ನಾನು ‘ಸರಿ’ ಎಂದು ವಾಧಿಸುವ ನನ್ನ ನಂಬಿಕೆಗೆ ಆಧಾರ ಯಾವುದು? ಕೆಲವು ಸಲ ಮನೆಯಲ್ಲಿ ಅಮ್ಮನಿಗೆ, ಅಕ್ಕನಿಗೆ, ತಮ್ಮನಿಗೆ ಬುದ್ಧಿ ಹೇಳೋಕೆ ಹೋಗ್ತೇನೆ, ಅವರು ನಾನು ಹೇಳಿದ್ದನ್ನ ಕೇಳಬೇಕು ಅಂತ ಬಯಸುತ್ತೇನೆ ಅದೇ ನನ್ನ ಶಿಸ್ತು, ನೀವೂ ಪಾಲಿಸಬೇಕು ಎಂದು ಕೂಗಾಡ್ತೇನೆ. ಆದರೆ ಅವರ ಜಾಗದಲ್ಲಿ ನಿಂತು ಯೋಚಿಸುವುದರಲ್ಲಿ ಸೋಲ್ತೇನೆ. ಕೇವಲ ನನ್ನ ಅನುಭವದ ಹಿನ್ನೆಲೆಯಲ್ಲಿ ಕಟ್ಟಿಕೊಂಡ ನಂಬಿಕೆಗಳಿಂದ ಮಾತ್ರ ಶಿಸ್ತು ಬಂದುಬಿಡುವುದಿಲ್ಲ ಅಥವಾ ಬದಲಾವಣೆಯಾಗುವುದಿಲ್ಲ. ನನ್ನ ಅನುಭವದ ಜೊತೆಗೆ ನನ್ನ ಕುಟುಂಬದ, ನನ್ನ ಸಮಾಜದ ಅನುಭವದಿಂದ ಪಡೆದ ನಂಬಿಕೆಯ ಗಟ್ಟಿಯಾದ ನಿಲುವಿನಿಂದ ಮಾತ್ರ ಶಿಸ್ತನ್ನು ಪಡೆಯಲು ಸಾದ್ಯ ಎಂದೆನಿಸುತ್ತಿದೆ.

ದೇವರು, ಮೂಢನಂಬಿಕೆ, ಜಾತಕ ಇವುಗಳ ಬಗ್ಗೆ ನನ್ನ ನಿಲುವು, ದೃಷ್ಟಿಕೋನ ಬದಲಾಗಿದೆ ಎಂದು ನಂಬಿದ್ದೆ. ಮನೆಯಲ್ಲಿ ನಡೆಯುವ ಪೂಜೆ ಪುನಸ್ಕಾರಗಳನ್ನ ತಿರಸ್ಕರಿಸಿದ್ದೆ. ಇಂತಹ ನಂಬಿಕೆಗಳಿಗಾಗಿ ಹಣ ಫೋಲಾಗುವುದನ್ನು ಖಂಡಿಸಿದ್ದೆ. ಆದರೆ ಕೆಲವು ಸಂದರ್ಬಗಳಲ್ಲಿ ಅನಿವಾರ್ಯವಾಗಿ ಅವರ ನಂಬಿಕೆಯ ಎದುರು ತಲೆಬಗ್ಗಿಸಿ ನಿಂತದ್ದಿದೆ. ಮೂರು ಜನ ಪುರೋಹಿತರು ನನ್ನ ಅಭಿವೃದ್ಧಿಗಾಗಿ ಹೋಮ ಮಾಡುವಾಗ ಅವರೆದುರು ಅಸಹನೀಯವಾದ ನೋವು ಉಂಡದ್ದಿದೆ. ಆಗೆಲ್ಲಾ, ಮನೆಯವರ ನಂಬಿಕೆಯೆದುರು ನನ್ನ ನಿಲುವು ಸೋತದ್ದು ಯಾಕೆ? ಅವರ ಮನಪರಿವರ್ತಿಸುವಲ್ಲಿ ಎಡವಿದ್ದೆಲ್ಲಿ? ಇವೆಲ್ಲವನ್ನೂ ಮೀರಿ ನನ್ನ ನಂಬಿಕೆಯನ್ನು, ಶಿಸ್ತನ್ನು ಉಳಿಸಿಕೊಳ್ಳಬೇಕಾದರೆ ನಾನು ಏನು ಮಾಡಬೇಕು? ನನ್ನ ನಿಲುವು ಎಷ್ಟು ದೃಡವಾದದ್ದು? ಎಂದು ಪ್ರಶ್ನಿಸಿಕೊಂಡು ಪರಿತಪಿಸಿದ್ದೇನೆ.

ಶಿಸ್ತು ಮೂಡಿಸಿಕೊಳ್ಳಬೇಕಾದರೆ ಎಲ್ಲಾ ಸಂಬಂಧಗಳ ಮೋಹದಿಂದ ಹೊರಬರಬೇಕೆ? ಬದುಕನ್ನ ರೂಪಿಸಿಕೊಳ್ಳಬೇಕಾದರೆ ಯಾವುದೋ ಒಂದು ದಾರಿಯನ್ನ ಅಯ್ಕೆ ಮಾಡಿಕೊಳ್ಳಬೇಕು. ಆದರೆ ನನಗೆ ಎರಡೂ ದಾರಿ ಅμÉ್ಟೀ ಸತ್ಯ (ಒಳ್ಳೆಯದು) ಅμÉ್ಟೀ ಸುಳ್ಳು (ಕೆಟ್ಟದ್ದು). ನನ್ನ ಮನಸ್ಸು ಅಷ್ಟು ಪಕ್ವವಾಗಿಲ್ಲ, ಅಷ್ಟು ದೃಢವಾಗಿಲ್ಲ. ಆಯ್ಕೆ ಮಾಡಿಕೊಂಡ ದಾರಿಯಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ನನ್ನ ಶಕ್ತಿ ಮತ್ತು ದೃಢನಂಬಿಕೆಯಿಂದ ಮಾತ್ರ ಶಿಸ್ತಿನ ಬದುಕನ್ನ ಕಟ್ಟಿಕೊಳ್ಳಲು ಸಾಧ್ಯವಾಗಬಹುದು ಎಂದೆನಿಸುತ್ತಿದೆ.

ಪೇರಿ ಒಮ್ಮೆ ಹೇಳಿದ ಮಾತು ನೆನಪಾಗುತ್ತಿದೆ ‘ನನಗೆ ಇರುವ ಸಮಯ ಕಡಿಮೆ ಇದೆ, ಅದರೆ ಮೀರಲಿಕ್ಕಿರುವುದು ಬಹಳಷ್ಟಿದೆ, ಇನ್ನೂ ಗಟ್ಟಿಯಾಗಬೇಕಿದೆ’ ಎಂದು. ಬಹುಷಹ ಜೀವನದ ಇಂತಹ ಹಲವು ಸತ್ಯಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮನ್ನು ಗಟ್ಟಿಯಾಗಿಸುವಲ್ಲಿ ಮತ್ತು ಬಂಧನದಿಂದ ಹೊರಬರಲು ಸಹಾಯಮಾಡಿಕೊಡುತ್ತವೆ. ಬರಿ ಯೋಚನೆಯಿಂದ ಮತ್ತು ಚಿಂತನೆಯಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಆ ಚಿಂತನೆಯಂತೆ ಬಾಳುವುದೂ ಅμÉ್ಟೀ ಮುಖ್ಯ. ಚಿಕ್ಕ ಚಿಕ್ಕ ಪ್ರಯತ್ನಗಳು ನಮ್ಮಲ್ಲಿ ಶಿಸ್ತನ್ನು ರೂಪಿಸಿಕೊಳ್ಳಲು ಬುನಾದಿಯಾಗಬಹುದು. ನನ್ನ ಸ್ನೇಹಿತ ಇತ್ತೀಚೆಗೆ ಪ್ರಾರಂಭಿಸಿದ ಇಂತಹ ಪ್ರಯತ್ನ ನನಗೆ ತುಂಬಾ ಅಸಕ್ತಿದಾಯಕವಾಗಿ ಕಂಡಿತು. ಆತ ಹಂತಹಂತವಾಗಿ (ಪ್ರಜ್ಞಾಪೂರ್ವಕವಾಗಿ) ಚಹ ಕುಡಿಯುವದನ್ನು ಬಿಟ್ಟಿದ್ದು, ರಾತ್ರಿ ಊಟವನ್ನು ಕಡಿಮೆ ಮಾಡಿದ್ದು ಹೀಗೆ ಜೀವನಕ್ಕೆ ಅವಶ್ಯವಲ್ಲ ಎನ್ನುವ ಚಿಕ್ಕ ಚಿಕ್ಕ ಅಂಶಗಳನ್ನು ಬಿಟ್ಟಿದ್ದು ಆತನ ಮನಸ್ಸನ್ನು ದೃಢಗೊಳಿಸಿದೆ, ಮುಂದಿನ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸನ್ನ ಸಿದ್ಧಗೊಳಿಸಿದೆ.  ಈ ಎಲ್ಲಾ ಅನುಭವಗಳು ನನಗೆ ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುದರ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನ ತಿಳಿಸಿದೆ. ಜೀವನದ ಸತ್ಯವನ್ನ ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಬಾಳುವ ಪ್ರಯತ್ನ ನಡೆಸುವುದು ನಮ್ನನ್ನು ವಿಹ್ವಲತೆಯ ಬದುಕಿನಿಂದ ಮುಕ್ತಗೊಳಿಸಲು ಸಾದ್ಯವೆಂದು ಅರಿವಾಗುತ್ತಿದೆ. 

ವಿಶ್ಲೇಷಣೆ

ವಿಶ್ಲೇಷಣೆ ಮತ್ತು ತಾರ್ಕಿಕ ಚಿಂತನೆ:

ವಿಶ್ಲೇಷಣೆ ನಮ್ಮ ಸಮಸ್ಯೆಗಳಿಗೆ ಅಥವಾ ಪ್ರಶ್ನೆಗಳಿಗೆ ಸತ್ಯಕ್ಕೆ ಹತ್ತಿರವಾದ ಹಾಗೂ ವೈಜ್ಞಾನಿಕವಾದ ಉತ್ತರವನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಸಂಶೋಧನೆಯಲ್ಲಿ ಇದು ಒಂದು ಮುಖ್ಯವಾದ ಹಂತ. ಮಾಹಿತಿಯನ್ನು ಗುಣಾತ್ಮಕವಾಗಿ ಅಥವಾ ಪರಿಮಾಣಾತ್ಮಕವಾಗಿ, ವಿವಿಧ ವಿಶ್ಲೇಷಣಾ ವಿಧಾನಗಳ ಮೂಲಕ ಓರೆಗೆ ಹಚ್ಚಿ ಉತ್ತರಗಳನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತಾರ್ಕಿಕ ಚಿಂತನೆ ಯಾವುದೇ ವೈಜ್ಞಾನಿಕ ವಿಧಾನಗಳಿಲ್ಲದೆ ಕೇವಲ ಹಿಂದಿನ ಅನುಭವಗಳ ಆಧಾರದ ಮೇಲಿನ ಊಹೆ ಮತ್ತು ಲಭ್ಯವಿರುವ ಕೆಲವೇ ಕೆಲವು ಮಾಹಿತಿಯ ಆಧಾರದ ಮೇಲೆ ನಿಲ್ಲುವ ಅಭಿಪ್ರಾಯ. ಈ ಅಭಿಪ್ರಾಯ ಅಥವಾ ಚಿಂತನೆ ಎಷ್ಟು ಸರಿ ಎಂಬುದನ್ನು ಮತ್ತೆ ಸರಿಯಾದ ವಿಶ್ಲೇಷಣೆಯ ಮೂಲಕ ತಿಳಿಯಬಹುದು. ಇಲ್ಲಿ ನನ್ನ ಅಭಿಪ್ರಾಯದಲ್ಲಿ ಸಂಶೋಧಕರಿಗೂ, ಜನಸಾಮಾನ್ಯರಿಗೂ ಅಥವಾ ಕ್ಷೇತ್ರದಲ್ಲಿ ಕೆಲಸಮಾಡುವ ಪ್ರತಿಯೊಬ್ಬರಿಗೂ ವಿಶ್ಲೇಷಣೆಗಿಂತ ಮುಖ್ಯವಾಗಿ ಈ ತಾರ್ಕಿಕ ಚಿಂತನೆಯ ಮನೋಭಾವ ಬೇಕು ಎಂಬುದು.

ಎರಡು ವರ್ಷಗಳ ಹಿಂದೆ ನಾನು ಪೆರಿಯವರ ಮನೆಯಲ್ಲಿ ವಾಸವಾಗಿದ್ದೆ. ಮನೆಗೆ ಯಾವುದೇ ಸಾಮಗ್ರಿಗಳು ಬೇಕಿದ್ದರೂ ದೂರದಲ್ಲಿದ್ದ ಮೈನ್ ರೋಡ್‍ನಲ್ಲಿರುವ ಅಂಗಡಿಗಳಿಂದ ಅಥವಾ ಸೂಪರ್ ಮಾರ್ಕೇಟ್‍ನಿಂದ ತರ್ತಿದ್ದೆ. ನಮ್ಮ ಮನೆ ಇದ್ದ ಪ್ರದೇಶದಲ್ಲಿ ಸುಮಾರು 50-60 ಮನೆಗಳು ಇದ್ದಿರÀಬಹುದು. ಒಮ್ಮೆ ಪೆರಿ ಕೇಳಿದ್ರು ‘ಈ ಪ್ರದೇಶದಲ್ಲಿ ಎಲ್ಲೂ ಚಿಕ್ಕ ಅಂಗಡಿಗಳು ಇಲ್ವಾ’ ಅಂತ. ಎಲ್ಲೂ ಅಂಗಡಿಗಳನ್ನ ಗಮನಿಸದೇ ಇದ್ದರಿಂದ ನಾನು ಸಹಜವಾಗಿ ‘ಇಲ್ಲ’ ಎಂದೆ. ಆಗ ಅವರು ‘ಅದು ಹೇಗೆ ಸಾದ್ಯ, ಇಷ್ಟು ಮನೆಗಳಿರುವ ಜಾಗದಲ್ಲಿ ಎಲ್ಲಾದರೂ ಒಂದು ಕಡೆ ಚಿಕ್ಕ ಪೆಟ್ಟಿ ಶಾಪ್ ಆದರೂ ಇರಲೇ ಬೇಕಲ್ಲ, ಎಲ್ಲಾ ಸಂದರ್ಭದಲ್ಲೂ ಸೂಪರ್ ಮಾರ್ಕೇಟ್‍ಗೆ ಹೋಗೋದಿಕ್ಕೆ ಆಗಲ್ಲ. ಅಕಸ್ಮಾತ್ ಎನಾದರೂ ಚಿಕ್ಕ ಪುಟ್ಟ ಅಗತ್ಯತೆಗಳು ಬಂದಾಗ ಅದು ಸಿಗುವ ವ್ಯವಸ್ತೆಯನ್ನು ಬಹುಶಹ ಜನ ಮಾಡಿಕೊಂಡಿರ್ತಾರೆ’ ಅಂತ ಹೇಳಿದ್ರು. ಅವರ ಆ ತಾರ್ಕಿಕ ಚಿಂತನೆ ನನಗೆ ನಿಜ ಅನ್ನಿಸಿತು. ಸೂಪರ್ ಮಾರ್ಕೇಟ್‍ಗಳೆಲ್ಲ ಇತ್ತೀಚಿನ ಬದಲಾವಣೆಗಳು ಆದರೆ ಬಹಳ ವರ್ಷದಿಂದ ಆ ಪ್ರದೇಶದಲ್ಲಿ ಜನ ಬದುಕ್ತಾ ಇದ್ದಾರೆ ಅಂದ್ರೆ ಇಂತಹ ಏರ್ಪಾಡುಗಳನ್ನ ಮಾಡಿಕೊಂಡಿರುವುದು ಸಹಜ. ಅವರ ಈ ತರ್ಕವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆ ಪ್ರದೇಶವನ್ನ ರೌಂಡ್ ಹಾಕಿದ್ರೆ ಅಲ್ಲಲ್ಲಿ, ಮನೆಯಲ್ಲಿ ಚಿಕ್ಕಪುಟ್ಟ ಅಂಗಡಿಗಳ ವ್ಯವಸ್ತೆ ಮಾಡಿಕೊಂಡಿದ್ದು ಕಾಣಿಸ್ತು. ಬಹುಶಹ ಇಂತಹ ಹಲವಾರು ಉದಾಹರಣೆಗಳು ನಿಮ್ಮಲ್ಲಿ ಇರಬಹುದು. ತಾರ್ಕಿಕ ಚಿಂತನೆ ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ, ವಿಶ್ಲೇಷಣೆ ಈ ಪ್ರಶ್ನೆಗಳಿಗೆ ವೈಜ್ಞಾನಿಕವಾದ ಉತ್ತರಗಳನ್ನ ಹುಡುಕೋದಿಕ್ಕೆ ಸಹಾಯ ಮಾಡ್ತದೆ.

ಸ್ವ-ವಿಶ್ಲೇಷಣೆ:
ಸಹಜವಾಗಿ ನಾವು ಬೇರೆಯವರನ್ನ, ಸಮಾಜವನ್ನ, ನಿತ್ಯ ಜೀವನದಲ್ಲಿ ನಡೆಯುವ ಹಲವು ವಿಷಯಗಳನ್ನು ವಿಶ್ಲೇಷಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ನಮ್ಮನ್ನು ನಾವು ಆ ಕನ್ನಡಿಯ ಮುಂದೆ ನಿಲ್ಲಿಸಿಕೊಳ್ಳುವುದಕ್ಕೆ ಒಪ್ಪುವುದಿಲ್ಲ. ಆ ಮನುಷ್ಯ ಸರಿ ಇಲ್ಲ ಎಂದು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವೆ, ಆದರೆ ನಿಜವಾಗಿ ವಿಶ್ಲೇಷಣೆ ಮಾಡಿದರೆ ಆ ವ್ಯಕ್ತಿಗಿಂತ ನಾವೇ ಎμÉ್ಟೂೀ ಕೆಟ್ಟವರಾಗಿರ್ತೆವೆ. ಬೇರೆಯವರ ತಪ್ಪುಗಳಿಗೆ ಕಾರಣ ಹುಡುಕುವ ನಾವು ನಮ್ಮ ತಪ್ಪುಗಳಿಗೆ ಸಾಕಷ್ಟು ಸಮರ್ಥನೆ ಕೊಟ್ಟುಕೊಳ್ತೇವೆ.

ಬೆಂಗಳೂರು ರೈಲ್ವೇ ಸ್ಟೇಷನ್‍ನಲ್ಲಿ, ಎಪ್ಪತ್ತರ ವಯಸ್ಸಿನ ಒಬ್ಬ ಹೆಂಗಸು, ಡಸ್ಟ್‍ಬಿನ್ ಒಳಗಿಂದ, ಜನ ತಿಂದು ಬಿಸಾಕಿದ ಆಹಾರದ ಪೊಟ್ಟಣದೊಳಗಿಂದ ಆಹಾರಗಳನ್ನ ಸಂಗ್ರಹಿಸುತ್ತಾ ಇದ್ದಳು. ನನಗೆ ಬಹಳ ಬೇಸರ ಆಗಿ ಆ ತಾಯಿಗೆ ಹೇಳಿದೆ ‘ಅದನ್ನ ತಿನ್ನಬೇಡ, ಅದು ಸರಿ ಇಲ್ಲ’ ಎಂದು. ಅಲ್ಲದೆ ನನ್ನ ಕೈಲಿದ್ದ ಇನ್ನೂರು ರೂಪಾಯಿಗಳನ್ನು ಅವಳಿಗೆ ಕೊಟ್ಟೆ. ನಾಜೂಕಿನಿಂದ ಆಹಾರಗಳನ್ನು ಡಬ್ಬಿಗೆ ಸೇರಿಸಿದ ಹೆಂಗಸು, ದುಡ್ಡನ್ನು ವಾಪಸ್ ನನ್ನ ಕಿಸೆಯಲ್ಲಿ ಇಡುತ್ತ ಸುಮ್ಮನೆ ನಕ್ಕು ತನ್ನ ಪಾಡಿಗೆ ಹೊರಟು ಹೋದಳು. ಒಮ್ಮೆ ಮನಸ್ಸಿಗೆ ಅನ್ನಿಸಿತು ಈ ಹೆಂಗಸಿಗೆ ಎಷ್ಟು ಅಹಂಕಾರ ಎಂದು. ಆದರೆ ಆಕೆಯ ಜಾಗದಲ್ಲಿ ನಿಂತು ಯೋಚಿಸಿದರೆ ಆಕೆ ಮಾಡಿದ್ದು ಸರಿ. ಆವತ್ತಿನ ಮಟ್ಟಿಗೆ ನಾನು ಆಕೆಯ ಹಸಿವನ್ನ ತೀರಿಸಬಹುದಿತ್ತು ಆದರೆ ದಿನನಿತ್ಯ ಆಕೆಯ ಹಸಿವನ್ನ ತೀರಿಸುವವರು ಯಾರು? ಬಹುಶಹ ಆ ಡಸ್ಟ್‍ಬಿನ್‍ಗೆ ಮಾತ್ರ ಸಾದ್ಯ. 

ಆ ದಿನ ಆ ಹೆಂಗಸಿನ ಬಗ್ಗೆ ನನ್ನ ಮನಸ್ಸಿನಲ್ಲಿ ಮೂಡಿದ ಮಮಕಾರ ನಿಜವೇ ಇರಬಹುದು, ಆದರೆ ಪ್ರತಿ ನಿತ್ಯ ನನ್ನ ಸುತ್ತ ಮುತ್ತ ನಡೆಯುವ ಇಂತಹ ಹಲವಾರು ಘಟನೆಗಳನ್ನು ನಾನು ನೋಡಿಯೂ ನೋಡದೇ ಇರುವ ಹಾಗೆ ಬದುಕುತ್ತೇನೆ. ಕೆಲವು ಸಂದರ್ಬದಲ್ಲಿ ಕೇವಲ ತೋರಿಕೆಗಾಗಿ, ನೋಡುವ ಜನರಿಗಾಗಿ ಸಮಾಜ ಸೇವೆ ಮಾಡೂ ನಾಟಕ ಮಾಡ್ತೇವೆ. ನಡೆ ಮತ್ತು ನುಡಿಯಲ್ಲಿ ಸಾಕಷ್ಟು ವ್ಯತ್ಯಾಸ ಮಾಡ್ತೇವೆ. ಯಾರದ್ದೋ ಸ್ನೇಹಕ್ಕೆ ದ್ರೋಹ ಮಾಡಿರ್ತೇವೆ, ಯಾವುದೋ ಪ್ರೀತಿಗೆ ಮೋಸ ಮಾಡಿರ್ತೇವೆ, ಯಾರದೋ ಗೌರವ ದಕ್ಕೆ ಆಗುವ ಹಾಗೆ ಗಾಸಿಪ್ ಮಾಡಿರ್ತೇವೆ. ಇದೆಲ್ಲವೂ ಸಮಾಜದಲ್ಲಿ ನಡಿತಾ ಇದೆ ಅಂದುಕೊಂಡಿರ್ತೇವೆ, ಆದರೆ ಇಂತಹ ಎμÉ್ಟೂೀ ಅಂಶಗಳು ನಮ್ಮೊಳಗೆ ಹುಟ್ಟಿ ಬೆಳೆದು ಅಂತಹ ಸಮಾಜ ಆಗೋದಿಕ್ಕೆ ಕಾರಣವಾಗಿರ್ತವೆ. ಯಾವತ್ತೋ ಒಂದು ದಿನ ರೈಲ್ವೇ ಸ್ಟೇಷನ್‍ನಲ್ಲಿ ಕಂಡ ಆ ಹೆಂಗಸಿನ ಹಸಿವನ್ನ ನೀಗಿಸೊದಿಕ್ಕೆ ಹೊರಟ ನನಗೆ ನೆನಪಾದದ್ದು ಕಳೆದ ಮೂರು ತಿಂಗಳಿನಿಂದ ಯಾವುದೋ ಕಾರಣಕ್ಕೆ ನಾನು ಮನೆಗೆ ಹಣ ಕಳಿಸುವುದನ್ನ ನಿಲ್ಲಿಸಿದ್ದು.

ಚಾಂದ್ ಬೀ ದಾದಿ

ಈಗ ‘ದಾದಿ’ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಎಂಬತ್ತು ವರ್ಷದ ಚಾಂದ್‍ಬೀ ಹುಟ್ಟಿದ್ದು ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ. ಬಡಕುಟುಂಬದಿಂದ ಬಂದ ಇವರ ತಂದೆ ಕಿರಾಣಿ ಅಂಗಡಿಯೊಂದರಲ್ಲಿ ಕೂಲಿಯಾಗಿ ದುಡಿಯುತ್ತಿದ್ದರು. ಇವರಿಗೆ ಐದು ಜನ ಮಕ್ಕಳು (ಮೂರು ಹೆಣ್ಣು, ಎರಡು ಗಂಡು), ಚಾಂದ್‍ಬೀ ಮೂರನೇ ಮಗುವಾಗಿ ಆ ಕುಟುಂಬದಲ್ಲಿ ಜನಿಸುತ್ತಾರೆ.

ಇದು ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಒಂದು ಸಂದರ್ಬ. ಹೈದರಾಬಾದ ಕರ್ನಾಟಕದ ಹಲವು ಪ್ರದೇಶಗಳನ್ನು ನಿಜಾಮರು ಆಳುತ್ತಿದ್ದ ಕಾಲ. ನಿಜಾಮ ಸಂಸ್ಥಾನದ ಪರವಾಗಿ ‘ರಜಾಕರ’ರು ಈ ಭಾಗಗಳಿಂದ ತೆರಿಗೆಯನ್ನು ಸಂಗ್ರಹಿಸುತ್ತಿದ್ದರು. ಆಗಿನ ರಜಾಕರರ ತೆರಿಗೆ ಸಂಗ್ರಹಣಾ ಪದ್ಧತಿ ಸರಿ ಇಲ್ಲದ ಕಾರಣ ಹಲವು ಜನ ಸಮೂದಾಯ ಇದರ ವಿರುದ್ಧ ದನಿ ಎತ್ತುತ್ತಾರೆ, ತೆರಿಗೆ ನೀಡುವುದನ್ನು ನಿರಾಕರಿಸುತ್ತಾರೆ. ವಿರೂಪಾಕ್ಷ ಗೌಡರು ಅದರ ಮುಂದಾಳತ್ವ ವಹಿಸುತ್ತಾರೆ. ಆಗ ರಜಾಕರರು ಈ ಗುಂಪಿನ ಮೇಲೆ ದಾಳಿ ಮಾಡುತ್ತಾನೆ. ದಾಳಿ ತೀರ್ವತೆಗೆ ಹೋಗಿ ಇಬ್ಬರ ನಡುವೆ ದೊಡ್ಡ ಹೋರಾಟವಾಗುತ್ತದೆ. ಈ ಸಂದರ್ಭದಲ್ಲಿ ರಜಾಕರರು ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಕೊಲೆ-ಸುಲಿಗೆ- ಅತ್ಯಾಚಾರಗಳು ನಡೆಯುತ್ತವೆ. ಈ ದಂಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಸಂಶಯದಲ್ಲಿ ಚಾಂದ್‍ಬೀಯ ತಂದೆಯನ್ನೂ ಕೂಡ ಕಡಿದುಹಾಕಲಾಗುತ್ತದೆ. ಈ ಘಟನೆ ನಡೆದಾಗ ಚಾಂದ್‍ಬೀಗೆ ಆರು ವರ್ಷ. ಈ ಘಟನೆಯನ್ನು ನೋಡಿ ತಾಯಿಗೆ ಹೃದಯಾಘಾತವಾಗುತ್ತದೆ, ಖಾಯಿಲೆಗೆ ಬೀಳುತ್ತಾರೆ ಮತ್ತು ಕೊನೆಗೆ ಸಾವಿಗೆ ಶರಣಾಗುತ್ತಾರೆ. ಮಕ್ಕಳೆಲ್ಲರೂ ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗುತ್ತಾರೆ. ಆದರೆ ಇವರ ಸೋದರ ಮಾವ ಈ ಎಲ್ಲಾ ಮಕ್ಕಳನ್ನು ಕಕ್ಕೇರಾಗೆ ಕರೆದುಕೊಂಡು ಹೋಗಿ ಸಲಹುತ್ತಾರೆ.

ತಾಯಿ ಸಾಯುವಾಗ ಚಾಂದ್‍ಬೀ ಮೂರನೇ ತರಗತಿಯಲ್ಲಿ, ಉರ್ದು ಮಾಧ್ಯಮದಲ್ಲಿ ಓದುತ್ತಿದ್ದರು. ಮನೆಯಲ್ಲಿ ಬಡತನ ಇದ್ದ ಕಾರಣ ಆಕೆಯನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಕಳುಹಿಸಲಾಗುತ್ತದೆ. ಆದರೆ ಆಕೆ ಅಕ್ಷರಗಳನ್ನು ಓದಲು ಮತ್ತು ತನ್ನ ಹೆಸರನ್ನು ಬರೆಯಲು ಆಗಲೇ ಕಲಿತಿದ್ದಳು. ಶಾಲೆ ಬಿಟ್ಟ ಮೇಲೆ ಬೇರೆಯವರ ಹೊಲದಲ್ಲಿ ದುಡಿಯಲು ಪ್ರಾರಂಭಿಸುತ್ತಾರೆ. ನಂತರ ಅವರ 15ನೇ ವಯಸ್ಸಿನಲ್ಲಿ ಸೋದರ ಮಾವನ ಜೊತೆ ಮದುವೆಯಾಗುತ್ತದೆ. ಚಾಂದ್‍ಬೀಗೆ ನಾಲ್ಕು ಜನ ಮಕ್ಕಳು-ಮೂರು ಹೆಣ್ಣು, ಒಂದು ಗಂಡು. ಗಂಡನ ಮನೆಯಲ್ಲಿ ಸ್ವಲ್ಪ ಹೊಲ ಇದ್ದರೂ, ಸಂಸಾರ ದೊಡ್ಡದಾಗಿದ್ದರಿಂದ ಹೊರಗಡೆ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಹೊಲದಲ್ಲಿ ಸೆದೆ ತೆಗೆಯವುದು, ಶೇಂಗಾ ಬಿಡಿಸುವುದು ಹೀಗೆ ನಿತ್ಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಪೌಲಿಗೆ (25 ಪೈಸೆ), ಎಂಟಾಣೆಗೆ ದಿನವಿಡಿ ದುಡಿದವರು, ಅನ್ನ ರೊಟ್ಟಿ ಇಲ್ಲದೆ ಬರಿ ಪುಂಡೆ ಪಲ್ಯೆ ಬೇಯಿಸಿ ಅದಕ್ಕೆ ಉಪ್ಪು ಬೆರೆಸಿ ತಿಂದವರು. ಇವರು ಸಂತೆ ಕಂಡವರಲ್ಲ, ಹೊಲದ ತಪ್ಪಲುಗಳನ್ನೇ ವರ್ಷ’Àುಕಾಲ ಬೇಯಿಸಿ ತಿಂದವರು.

ಕೆಲವು ವರ್ಷಗಳ ನಂತರ ಸರಕಾರ ಕಕ್ಕೆರಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪ್ರಾರಂಭಿಸುತ್ತದೆ. ಚಾಂದ್‍ಬೀಯ ಗಂಡ ಕಟ್ಟಡ ಕಾಮಗಾರಿಯಲ್ಲಿ ನಿμÉ್ಠಯಿಂದ ದುಡಿತಾರೆ. ಮೂರನೇ ತರಗತಿಯವರೆಗೆ ಓದಿದ ಕಾರಣ ಚಾಂದ್‍ಬೀಗೆ ಅದೇ ದವಾಖಾನೆಯಲ್ಲಿ ‘ದಾಯಿ’ಯ ಕೆಲಸ ಸಿಗುತ್ತದೆ. ಒಂದು ಬಾಣಂತನಕ್ಕೆ (ಡೆಲಿವರಿ) ಎರಡು ರೂಪಾಯಿಯಂತೆ ಅವರ ಗೌರವ ಧನವನ್ನ ನಿಗದಿ ಮಾಡಲಾಗುತ್ತದೆ. ದಾಯಿ ಕೆಲಸ ಅಷ್ಟು ಸುಲಭವಾಗಿರಲಿಲ್ಲ, ಸುತ್ತಮುತ್ತಲೆಲ್ಲೂ ಆರೋಗ್ಯ ಕೇಂದ್ರವಿರದ ಕಾರಣ ಚಾಂದ್‍ಬೀ ಸುತ್ತಮುತ್ತಲಿನ ಹಳ್ಳಿಗಳಿಗೆ ನೆಡದೇ ಹೋಗಬೇಕಾಗಿತ್ತು. ಆಗ ದೂರವನ್ನ ಹರದಾರಿ ಮೂಲಕ ಅಳತೆ ಮಾಡುತಿದ್ದರು. ಏಳು, ಹತ್ತು ಹರದಾರಿ ನೆದುಕೊಂಡು ಹೋಗಿ ಬಾಣಂತನ ಮಾಡಿ ಬರಬೇಕಾಗಿತ್ತು. ಮುಸ್ಲಿಂ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಲು ನಿರ್ಬಂಧವಿದ್ದ ಆ ಸಂದರ್ಬದಲ್ಲಿಯೂ ಕೂಡ ದೂರ ದೂರದ ಹಳ್ಳಿಗಳಿಗೆ ಹೋಗಿ ಸೇವೆ ಮಾಡಿ ಬರುತ್ತಿದ್ದರು. ಧರ್ಮ, ಜಾತಿ ಯಾವುದನ್ನೂ ಲೆಕ್ಕಿಸದೆ ಕುರುಬರ ಮನೆಯಲ್ಲೂ, ದೊರೆಗಳ ಮನೆಯಲ್ಲೂ, ಬ್ರಾಹ್ಮಣರ ಮನೆಯಲ್ಲೂ ಅಷ್ಟು ಪ್ರೀತಿಯಿಂದ ಸೇವೆ ಮಾಡಿದ್ದಾರೆ. ದವಾಖಾನೆಯಲ್ಲಿ ವೈದ್ಯರಾದವರು ದಾಯಿಗಿಂತ ತುಂಬಾ ಚಿಕ್ಕವರು. ದಾಯಿ ಅವರನ್ನು ‘ಯಪ್ಪಾ ಬಾ, ಹೋಗು’ ಎಂದು ಏಕವಚನದಿಂದ ಮಾತನಾಡಿಸುತ್ತಿದ್ದರು. ಇದನ್ನು ಗಮನಿಸಿದ ಗಂಡ ಒಮ್ಮೆ ಚಾಂದ್‍ಬೀಯನ್ನು ಗದರಿಸುತ್ತಾರೆ, ‘ವೈದ್ಯರು ವಿದ್ಯಾವಂತರು, ಬಹಳ ಓದಿದವರು, ಅವರನ್ನು ಏಕವಚನದಲ್ಲಿ ಕರೆಯಬಾರದು, ಇನ್ನು ಮೇಲೆ ನೀನು ಅವರನ್ನು ‘ಸರ್’ ಎಂದು ಕರೆಯಬೇಕು’ ಎನ್ನುತ್ತಾರೆ. ಚಾಂದ್‍ಬೀಗೆ ಅದು ಇಷ್ಟವಾಗೊದಿಲ್ಲ. ಅವರು ಗಂಡನಿಗೆ “ವೃತ್ತಿಗೆ ಗೌರವಕೊಡಬೇಕು, ಪ್ರೀತಿಗೆ-ಸಂಬಂಧಕ್ಕೆ ಬೆಲೆ ಕೊಡಬೇಕು, ವೈದ್ಯರು ನನ್ನ ಮಗನ ಸಮಾನ, ನಾನು ಅವರನ್ನ ಸರ್ ಎಂದು ಕರೆಯೋದಿಲ್ಲ” ಎಂದು ನೇರವಾಗಿ ಹೇಳಿದ್ದರು.

ಸುಮಾರು ನಲವತ್ತು ವರ್ಷ ದಾಯಿಯಾಗಿ ಕೆಲಸಮಾಡಿದ ಚಾಂದ್‍ಬೀಗೆ ಇಲ್ಲಿಯವರೆಗೆ ಎμಂಂಔ ಬಾಣಂತನ ಮಾಡಿದ್ದೀರಿ ಎಂದು ಕೇಳಿದರೆ ‘ನನ್ನ ತಲೆಯಲ್ಲಿರುವ ಕೂದಲಿನಷ್ಟು’ ಎಂದು ಹೇಳಿ ನUುÀ ತ್ತಾರೆ. ಇವರು ಮಾಡಿದ ಎಲ್ಲಾ ಬಾಣಂತನ ಸಪಲs ವಾಗಿದೆ. ವಯಸ್ಸಾಗಿ PೈÉ ನqುÀ ಗೋದ್ರಿಂದ ದಾಯಿ ಕೆಲಸವನ್ನ ಬಿಟ್ಟು ಈಗ ಬಹಳ ವರ್ಷ ಆಯ್ತು. ಈಗಲೂ ದೂರದೂರದಿಂದ ದಾಯಿಯನ್ನ ನೋಡೋದಿಕ್ಕೆ ಜನ ಬರ್ತಾರೆ, ಅವರನ್ನ ಗೌರವದಿಂದ ನೋಡ್ತಾರೆ, ಸತ್ಕರಿಸುತ್ತಾರೆ. ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿ ಕಳಿಸುತ್ತಾರೆ. ಹಳ್ಳಿ ಹಳ್ಳಿ ಸುತ್ತಿ ಜೀವನ ನಡೆಸಿದ ಚಾಂದ್‍ಬೀ ಈಗ ಯಾದಗಿರಿ ಪಟ್ಟಣದಲ್ಲಿ ತನ್ನ ಮಗನ ಜೊತೆಯಲ್ಲಿದ್ದಾರೆ. ಆದರೆ ಅವರಿಗೆ ಹಳ್ಳಿಯ ಬದುಕೇ ±ಇಚಿಂμಂಔ ಎಂಬ ಭಾವನೆ ಇದೆ. ಹಳ್ಳಿಯಲ್ಲಿ ತುಂಬು ಪ್ರೀತಿ ಇದೆ, ಊಟ ಮಾಡದಿದ್ದರೂ ನನ್ನ ಹಳ್ಳಿಯ ಜನರನ್ನ ನೋಡಿ ನನಗೆ ಹೊಟ್ಟೆ ತುಂಬುತ್ತದೆ, ಅಲ್ಲಿ ಪ್ರೇಮ ಕಾಣ್ತದೆ ಎನ್ನುತ್ತಾರೆ.

ಈ ವಯಸ್ಸಿನಲ್ಲಿಯೂ ತನ್ನ ಕೈಲಾದ ಕೆಲಸವನ್ನ ಮಾಡ್ತಿದಾರೆ. ಹಂಡೆಯಲಿ ನೀರು ಕಾಯಿಸುವುದು, ತೆವಳುತ್ತಾ ಅಂಗಳದ ಕಸ ತೆಗೆಯುವುದು, ದವಸ ಧಾನ್ಯ ಚೊಕ್ಕ ಮಾಡುವುದು ಹೀಗೆ ಮುಂಜಾನೆ ಐದು ಗಂಟೆಗೆ ಎದ್ದು ತನ್ನ ಕೆಲಸ ಪ್ರಾರಂಭಿಸುತ್ತಾರೆ. ಅವರಿಗೆ ಜನರೊಡನೆ ಮಾತನಾಡುವುದು ಬಹಳ ಇಷ್ಟ. ಮನೆ ಮನೆಗೆ ಹೋಗಿ ತರಕಾರಿ ಮಾರುವವರು, ಹಾಲು-ಮೊಸರು ಮಾರುವ ಗೌಳಿಗರು ಹೀಗೆ ಮನೆ ಬಾಗಿಲಿಗೆ ಬಂದ ಎಲ್ಲರನ್ನೂ ಮಾತನಾಡಿಸಿ, ಕೊನೆ ಪಕ್ಷ ಒಂದು ಲೋಟ ನೀರನ್ನಾದರೂ ನೀಡಿ ಕಳುಹಿಸುತ್ತಾರೆ. ‘ಕಡ್ಡಿ ಗುಡ್ಡವಾಗಿ ಬೆಳೆಯಬೇಕು’ ಇದು ಅವರು ಎಲ್ಲಾ ಮಕ್ಕಳಿಗೂ ಹೇಳುವ ಮಾತು. ಹುಟ್ಟುವಾಗ ಎಲ್ಲರೂ ಚಿಕ್ಕವರು, ಬಡವರು ಅಥವಾ ತಿಳಿವಳಿಕೆ ಇಲ್ಲದವರು ಆದರೆ ಬೆಳೆದು ಅವರು ಆಲದ ಮರವಾಗಬೇಕು, ಹತ್ತಾರು ಜನಕ್ಕೆ ಆಸರೆಯಾಗಬೇಕು ಎಂಬುದು ಅವರ ನಿಲುವು. ಅದಕ್ಕಾಗಿ ಶಿಕ್ಷಣ ಬಹಳ ಮುಖ್ಯ, ಎಲ್ಲರಿಗೂ ಶಿಕ್ಷಣ ಸಿಗಬೇಕು ಎನ್ನುತ್ತಾರೆ. ತನ್ನ ಎಲ್ಲಾ ಮಕ್ಕಳಿಗೆ ಓದಿಸಲು ಆಗದಿದ್ದರೂ ಒಬ್ಬ ಮಗನನ್ನು ಸರಿಯಾಗಿ ಶಾಲೆಗೆ ಕಳುಹಿಸಿದ್ದಾರೆ, ಈಗ ಆವರು ಸರಕಾರಿ ನೌಕರಿಯಲ್ಲಿದ್ದಾರೆ. ದಾದಿಯದು ನೇರ ನುಡಿಯ ಸ್ವಭಾವ, ಇದ್ದದ್ದನ್ನ ಇದ್ದ ಹಾಗೆ ನೇರವಾಗಿ ಹೇಳುವುದು ಅವರ ಪದ್ದತಿ. ಜೊತೆಗೆ ಹಳ್ಳಿ ಹಳ್ಳಿ ಸುತ್ತಿ, ಜನರನ್ನ ನೋಡಿ ಮೌಲ್ಯಗಳನ್ನ ಸಂಪಾದಿಸಿದ್ದಾರೆ. ಈಗ ಅವರು ಊರಿನ ಹಿರಿಯರು, ಜನ ಯಾವುದೇ ಚಿಕ್ಕ ಪುಟ್ಟ ನ್ಯಾಯ ತೀರ್ಮಾನ, ತಂಟೆ ತಕರಾರುಗಳಿದ್ದರೂ ದಾದಿಯನ್ನು ಕೇಳಿ ಅವರ ತೀರ್ಮಾನದಂತೆ ನಡೆದುಕೊಳ್ಳುತ್ತಾರೆ. ದಾದಿ ಎಲ್ಲರಿಗೂ ಅಚ್ಚು ಮೆಚ್ಚು, ಅವರು ಬೆಳೆಸಿದ ಆಲದ ಮರದ ಕೆಳಗೆ ಕೂಡಿ ಬಾಳುವ ಕುಟುಂಬ ನಮ್ಮದು ಎಂದು ಗೌರವದಿಂದ ಜನ ಮಾತನಾಡುತ್ತಾರೆ.

(ನನ್ನ ಪಕ್ಕದ ಮನೆಯ, ಪ್ರೀತಿಯ ಚಾಂದ್‍ಬೀ ದಾದಿಯೊಂದಿಗಿನ ಚಿಕ್ಕ ಸಂದರ್ಶನದ ಸಾರಾಂಶ ರೂಪ ಈ ಲೇಖನ)

ಏನು, ನೀನು ಇನ್ನೂ ಮಗುವೆ?


ನಾನು ಶಿವರಾಮ ಕಾರಂತರು ಬರೆದ “ಶಿಕ್ಷಣ-ಮಕ್ಕಳ ಉತ್ಪಾದಕ ಶಕ್ತಿ” ಎಂಬ ಲೇಖನವನ್ನ ಓದುತ್ತಿದ್ದೆ. ಮಕ್ಕಳಲ್ಲಿ ಸಹಜವಾಗಿಯೇ ಇರುವ ಸೃಜನಾತ್ಮಕತೆಯ ಕುರಿತು ಈ ಲೇಖನದಲ್ಲಿ ಕಾರಂತರು ಪ್ರಸ್ತಾಪಿಸುತ್ತಾರೆ. ಈ ಲೇಖನದ ಹಿನ್ನೆಲೆಯಲ್ಲಿ ನನ್ನ ಅನುಭವಕ್ಕೆ ಸಿಲುಕಿದ ಒಂದು zಂಇμಂ್ಟಂತವನ್ನು ನಿಮ್ಮ ಮುಂದಿಡುತ್ತೇನೆ. ಈ ಲೇಖನಕ್ಕೆ ನೀಡಿದ ತಲೆಬರಹವನ್ನು ಸ್ವಲ್ಪ ಗಮನಿಸಿ, ‘ಏನು, ನೀನು ಇನ್ನೂ ಮಗುವೇ?’ ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳು ಇರುವ ಎಲ್ಲರ ಮನೆಯಲ್ಲೂ ಕೇಳಿ ಬರುವ ಒಂದು ಸಹಜವಾದ ಪ್ರಶ್ನೆ. ಈ ಒಂದು ಪ್ರಶ್ನೆಯೇ ಮಗುವನ್ನು ಮಗುವಾಗಿರಲು ಬಿಡದೆ, ಅದರ ಸಹಜ ಸೃಜನಶೀಲತೆಯನ್ನು ಮುರುಟಿ ಹಾಕಲು ಸಾಕು.

ವಿಶೇಷವೆಂದರೆ ಮಗು ಶಾಲೆಯ ಮೆಟ್ಟಿಲನ್ನು ಹತ್ತುವುದಕ್ಕೂ ಮುನ್ನ ಅದು ಏನೇ ಮಾಡಿದರು ಅದು ನಮಗೆ ಆಪ್ಯ, ನಾವು ಅದರ ಎಲ್ಲಾ ಚಟುವಟಿಕೆಯನ್ನ, ತುಂಟಾಟವನ್ನು ಆನಂದಿಸುತ್ತೇವೆ. ಆದರೆ ಒಮ್ಮೆ ಶಾಲೆಯ ನಾಲ್ಕು ಗೋಡೆಯ ಮದ್ಯೆs ಸೇರಿಬಿಟ್ಟರೆ, ಆ ಮಗುವಿನ ಜೀವನ ಪೂರ್ತಿ ಆ ನಾಲ್ಕು ಗೋಡೆಯ ನqುÀ ವೆ ನqಂÉ iÀುುವ PೃÀ ತಕ ಉತ್ಪಾದಕತೆಗೆ ಕೇಂದ್ರೀಕೃತವಾಗಿ ಬಿಡುತ್ತದೆ. ಮಗು ಶಾಲೆಯ ಅಭ್ಯಾಸವನ್ನು ಬಿಟ್ಟು ಬೇರೆ ಏನೇ ಮಾಡಿದರೂ ಈ ಮೇಲಿನ ಪ್ರಶ್ನೆ ಮಗುವಿಗೆ ನೇರವಾಗಿ ತಲುಪುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳು ತಿಳಿದಿರುವ ನಮ್ಮಂತವರ ಮನೆಯಲ್ಲಿಯೇ ಈ ಸನ್ನಿವೇಶ ಎದುರಾದಾಗ ಮನಸ್ಸಿಗೆ ಬಹಳ ಖೇದ ಎನಿಸುತ್ತದೆ.

ಭೂಮಿಕಾ ನಾಲ್ಕು ವರ್ಷzಂ ತುಂಟ ಹುಡುಗಿ. ಆಕೆಯನ್ನ ನಿಯಂತ್ರಿಸುವುದು ತಂದೆ, ತಾಯಿ, ಅಜ್ಜಿ, ಮಾವ ಎಲ್ಲರಿಗೂ Pಂμಂಔಸಾಧ್ಯ. ಅವಳ ಚಟುವಟಿಕೆಗಳು ಮತ್ತು ಕಲ್ಪನೆ ಅμಂಂಔ ತೀಕ್ಷ್ಣ ಮತ್ತು ವಿಶಾಲವಾದದ್ದು. ಬಹುಶಹ ಇದೇ ಕಾರಣದಿಂದ ಆಕೆಗೆ ಮೂರು ವರ್ಷ ತುಂಬಿದ ಮೇಲೆ ಅಂಗನವಾಡಿ ಕೇಂದ್ರಕ್ಕೆ ಬಿಡಲು ಪ್ರಾರಂಭಿಸಿದ್ದರು. ನಾನು ಊರಿಗೆ ಹೋದಾಗಲೆಲ್ಲ ಆಕೆಯನ್ನು ಅಂಗನವಾಡಿಗೆ ಬಿಡುವ ಮತ್ತು ಕರೆತರುವ ಕೆಲಸ ಮಾಡುತ್ತಿದ್ದೆ. ಈ ಪ್ರಕ್ರಿಯೆಯಲ್ಲಿ ನಾನು ಗಮನಿಸಿದ ಅಂಶ, ಆವಳು ಮನೆಯಲ್ಲಿ ಇರುವಾಗ ಮತ್ತು ಅಂಗನವಾಡಿಯಲ್ಲಿ ಇರುವಾಗಿನ ವೈರುದ್ಯ ವ್ಯತ್ಯಾಸ. ಮನೆಯಲ್ಲಿ ಹೆಚ್ಚು ಕ್ರಿಯಾಶಿಲವಾಗಿರುತ್ತಿದ್ದ ಆಕೆ, ಅಂಗನವಾಡಿಯಲ್ಲಿ ಮಂಕಾಗಿ ಕೂರುತ್ತಿದ್ದಳು. ಮನೆಯಲ್ಲಿಯೂ ಕೂಡ ಈ ಹಿಂದೆ ಇದ್ದ ಉತ್ಸಾಹ, ಸೃಜನಾತ್ಮಕತೆ ಕಡಿಮೆಯಾಗಿತ್ತು. ತಂದೆ, ತಾಯಿ, ಅಜ್ಜಿ, ಮಾವ ಎಲ್ಲರಿಗೂ ಆಕೆಯನ್ನು ನಿಯಂತ್ರಿಸುವುದು ಕಷ್ಟವಾಗಿ ಈ ಮೇಲಿನ ಪ್ರಶ್ನೆಯನ್ನು ಕೇಳಿಕೇಳಿ ಅಂಗನವಾಡಿಗೆ ದಬ್ಬಿದ್ದರೆ ಅಂಗನವಾಡಿಯಲ್ಲಿ ಇದಕ್ಕೆ ಭಿನ್ನವಾದ ಹಿಂಸೆ ಇತ್ತು.

ಶಿಕ್ಷಣ ಮಕ್ಕಳ ಉತ್ಪಾದಕ ಶಕ್ತಿಗೆ ಪ್ರೇರಣೆ ನೀಡಬೇಕು, ಅಂಗನವಾಡಿ ಅಥವಾ ಶಾಲೆಗಳಲ್ಲಿ ಇದಕ್ಕೆ ಪೂರಕವಾದ ವಾತಾವರಣವಿರಬೇಕು. ಆದರೆ ಆ ಅಂಗನವಾಡಿಯಲ್ಲಿ ವಿಶಾಲವಾದ ಜಾಗವನ್ನು ಹೊರತುಪಡಿಸಿದರೆ ಮಕ್ಕಳ ಆಟಕ್ಕೆ ಯೋಗ್ಯವಾದ ಯಾವುದೇ ವಸ್ತುಗಳು ಇರಲಿಲ್ಲ. ಆ ಅಂಗನವಾಡಿಯಲ್ಲಿ ನಾನು ವಿ±ಇಂμಂವಾಗಿ ಗಮನಿಸಿದ್ದು ಅಲ್ಲಲ್ಲಿ ಬಿದ್ದಿರುವ ಒಂದರಿಂದ ಎರಡು ಅಡಿ ಉದ್ದದ ಹಲವಾರು ಬಟ್ಟೆ ತುಂಡುಗಳು. ಒಮ್ಮೆ ಭೂಮಿಕಾಳನ್ನು ಕೇಳಿದೆ. ಅವಳು ಹೇಳಿದ್ದು “ತುಂಟಾಟ ಮಾಡುವ ಮಕ್ಕಳ ಕೈಯನ್ನು ಆ ಬಟ್ಟೆ ತುಂಡುಗಳಿಂದ ಕಟ್ಟಿ ಒಂದು ಮೂಲೆಯಲ್ಲಿ ಕೂರಿಸುತ್ತಾರೆ”. ಆ ದಿನ ನಾನು ಆಕೆಯನ್ನು ತಬ್ಬಿ ಹಿಡಿದು ಅತ್ತಿದ್ದೆ. ಸಹಜವಾಗಿ, ತಮಾμÉಗೆಂದು ಯಾರಾದರೂ ನಿಮ್ಮ ಎರಡೂ ಕೈಗಳನ್ನು ಕಟ್ಟಿ ಹಾಕಿದರೆ, ನಿಮ್ಮ ಮನಸ್ಸಿನ ಒಳಗೆ ಆಗುವ ಬದಲಾವಣೆಯನ್ನು ಸ್ವಲ್ಪ ಗಮನಿಸಿ. ಹಾಗಿರುವಾಗ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಇದು ಇನ್ಯಾವ ರೀತಿಯ ಪರಿಣಾಮ ಬೀರಬಲ್ಲದು?

ನಾವು ಶಿಕ್ಷಕರಲ್ಲಿ ಶಿಕ್ಷಣದ ದೃಷ್ಟಿಕೋನವನ್ನು ಬದಲಾಯಿಸುವ ಪ್ರಯತ್ನದಲ್ಲಿದ್ದೇವೆ. ಆದರೆ ನಮ್ಮ ಮನೆಗಳಲ್ಲಿ, ಸಂಬಂಧಿಸಿದ ವ್ಯಕ್ತಿಗಳಲ್ಲಿ ಈ ಬದಲಾವಣೆಯನ್ನು ತರಲು ಸೋಲುತ್ತಿದ್ದೇವೆ. ಅದು ಅμಂಂಔ ಸುಲಭವೂ ಅಲ್ಲ. ಮಕ್ಕಳಲ್ಲಿ ಸಹಜವಾಗಿ ಒಂದು ಉತ್ಪಾದಕ ಶಕ್ತಿ ಇದೆ. ಅವರು ಮಾಡುವ ಪ್ರತಿಯೊಂದು ಚಟುವಟಿಕೆಯೂ ಹೊಸದು, ಅದು ಅನುಕರಣೆ ಅಲ್ಲ. ಮನೆಯಲ್ಲೂ ಮತ್ತು ಶಾಲೆಗಳಲ್ಲೂ ಅದನ್ನು ಪ್ರೇರೇಪಿಸುವ ವಾತಾವರಣ ಸೃಷ್ಟಿಯಾಗಬೇಕು.

ಭೂಮಿಕಾಳ ಕಲ್ಪನೆಯ ಅಂಗಡಿಯಲ್ಲಿ ಎಲ್ಲವೂ ಇದೆ, ಅಲ್ಲಿ ಅವಳಿಗೆ ಮಾತ್ರ ನಮಗೆ ಬೇಕಾದ್ದನ್ನು ಮಾರಲು ಸಾದ್ಯ, ಚಾಕೋಲೆಟ್, ಬಟ್ಟೆ, ಮೀನು, ಚಪ್ಪಲ್....ಮನಶ್ಯಾಂತಿ ಎಲ್ಲವೂ ಇದೆ....ಇವೆಲ್ಲವನ್ನೂ ಕೇವಲ ಮೂರು ರೂಪಾಯಿಗೆ ಕೊಡಲು ಅವಳಿಗೆ ಮಾತ್ರ ಸಾಧ್ಯ. ನಮಗೆ ಮಾಡಲು ಸಾಧ್ಯವಾಗದ್ದೆಲ್ಲಾ ಮಕ್ಕಳಿಗೆ ಮಾಡಲು ಸಾದ್ಯ. ಈಗ ಹೇಳಿ ‘ಏನು, ನೀನು ಇನ್ನೂ ಮಗುವೆ?’ ಎಂದು ಕೇಳುವುದು ಎಷ್ಟು ಸೂಕ್ತ.

Saturday, 9 May 2015

ಕಾದಿರುವಳು ಮಾಳವ್ವ

ಮಣ್ಣು ಗೋಡೆಯ, ಸೋಗೆ ಹೊದಿಕೆಯ, ಮನೆಯ ಮಾಡಿನ ಒಳಗೆ ಮಾಳವ್ವ, ಒಲೆಯ ಮೇಲೆ ಎಸರನ್ನಿಟ್ಟು, ಉರಿಯದೇ ಸತಾಯಿಸುತ್ತಿದ್ದ ಹಸಿ ಕಟ್ಟಿಗೆಯನ್ನು ಹೊತ್ತಿಸಲು ಊದುಬತ್ತಿ ಅಂಡೆಯಿಂದ ಊದುತ್ತಿದ್ದಳು. ಸೊಂಯ್...ಸೊಂಯ್ ಎಂಬ ಆಕೆಯ ಉಸಿರಿನ ರಾಗಕ್ಕೆ ಕೆಮ್ಮು ಹಿಮ್ಮೇಳವಾಗಿತ್ತು. ಮೊದಲೇ ಮಂಜಾಗಿದ್ದ ಕಣ್ಣಿಗೆ ಈಗ ಹೊಗೆ ತುಂಬಿಕೊಂಡಿತ್ತು, ಮಾಳವ್ವನಿಗೆ ಸಿಟ್ಟು ನೆತ್ತಿಗೇರಿತ್ತು

“ರಂಡಿ ಮಗನ ಕಟ್ಟಿಗಿ, ಎಷ್ಟ್ ಬಿಸಿಲಿಗೆ ಹಾಕಿದ್ರೂ ಒಣಗೂದಿಲ್ಲ, ಈ ಮಕ್ಕಳಿಗೋ ಒಣ ಕಟ್ಟಿಗಿ ಆರಿಸ್ಕಂಡ್ ಬನ್ನಿ ಅಂದ್ರೆ ತಿಳುದಿಲ್ಲ, ನೆವಕ್ಕೆ ಕೆಲಸ ಮಾಡ್ತವೆ...ಹಾಳಾಬಿದ್ದುಂದು” ಎಂದು ತನ್ನಷ್ಟಕ್ಕೆ ಗೊಣಗಿಕೊಂಡು ಮೊಮ್ಮಗಳನ್ನು ಕೂಗಿದಳು.

“ಮಗಾ, ಆಯ್ತನೆ, ಎಸ್ರು ಕಾದದೆ, ಅಕ್ಕಿ ಹಾಕು ಬಾ”.

“ತಡಿಯೇ ಮಾರಾಯ್ತಿ, ನಿಂಗಂತು ಸಮಾದಾನನೆ ಇಲ್ಲಾ, ಅಕ್ಕಿ ತೊಳುಕೆ ಹತ್ತಿದ್ದೆ, ಬಂದೆ ಇರು” ಎಂದು ಮೊಮ್ಮಗಳು ಮಾಳವ್ವನನ್ನು ಗದರುತ್ತಾಳೆ.

ಅಕ್ಕಿ ತೊಳೆದು ಒಳಗೆ ಬಂದ ಮೊಮ್ಮಗಳು “ಅವ್ವಾ, ಇದೆಂಥದ್ದೆ, ಮನಿ ತುಂಬಾ ಹೊಗಿ ಮಾಡ್ಕಂಡ್ ಕೂತಿದ್ದೆ, ಒಂಚೂರು ಬೆಂಕಿ ಉರಿಸುಕೆ ಆಗುದಿಲ್ಲ ನಿಂಗೆ...ಸಾಯ್ತದೆ ಇದೊಂದು” ಎಂದು ಬರಬರನೆ ಕಟ್ಟಿಗೆಯನ್ನು ಕುಟ್ಟಿ ಜೋರಾಗಿ ಊದತೊಡಗಿದಳು.

ಆಕೆಗೆ ಹೆದರಿಕೊಂಡೋ ಏನೋ ಪಾಪ ಆ ಕಟ್ಟಿಗೆಯೂ ಸುಮ್ಮನೆ ಉರಿಯತೊಡಗಿತು.

“ಮಗಾ, ಸಣ್ಣ ಮಾವ (ಶಂಕರ) ಬಂದವ್ನಂತನೆ ಮನಿಗೆ? ನಿನ್ನೆ ಲಕ್ಷ್ಮತ್ತಿಗಿ ಹೇಳ್ತಾ ಇದ್ದುಂದು ಕೇಳಿಸ್ಕಂಡೆ. ಮತ್ತೆ ಕಾರ್ಖಾನೆಗೆ ಹೋಗ್ತಿನಿ ಅಂತಿದ್ನಂತೆ, ಅದ್ಕೆ ಕೆಲ್ಸ ಕೇಳ್ಕಂಡ್ ಬರುಕೆ ಹೊನ್ನಾವರಕ್ಕೆ ಹೋಗವ್ನಂತೆ”. ಎಂದು ಮೊಮ್ಮಗಳನ್ನು ಕೇಳಿದಳು.

“ಬಂದಿರುಕೆ ಸಾಕು, ಇಷ್ಟ್ ದಿನ ಬೇಕಾಯ್ತದ್ಯ ಹೋಗಿ ಬರುಕೆ”? ಎಂದು ಮೊಮ್ಮಗಳು ಗೊಣಗಿದಳು.

ಮೊಮ್ಮಗಳ ಅವತಾರ ಮಾಳವ್ವನಿಗೆ ಹೊಸತಾಗಿರಲಿಲ್ಲ. ಹಾಗಾಗಿ ಅವಳ ಮಾತಿನ ಕಡೆ ಗಮನ ಕೊಡದೆ ಎದುರಿನ ಬೇಲಿಯ ಗೇಟಿನ ಕಡೆಗೆ ದೃಷ್ಠಿ ಹಾಯಿಸಿದಳು.

***
ಶಂಕರ, ಮಾಳವ್ವನ ಐದು ಜನ ಮಕ್ಕಳಲ್ಲಿ ಮೂರನೆಯವನು. ಏಳನೇ ತರಗತಿಯ ವರೆಗೆ ಓದಿದ ಈತ ಮನೆಯ ಬಡತನದ ಕಾರಣದಿಂದ ಶಾಲೆ ಬಿಟ್ಟು ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಸ್ವಲ್ಪ ದಿನದ ನಂತರ ದೂರದ ಹೊನ್ನಾವರದ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಖಾಲಿ ಇದೆ ಎಂದು ಸುದ್ದಿ ತಿಳಿದು ಹೆಗಲಿಗೆ ಚೀಲ ಏರಿಸಿ ಹೊರಟಾಗ ಅವನಿಗೆ ಹದಿನಾಲ್ಕು ವರ್ಷ. ಹೊನ್ನಾವರದ ದಿವಗಿ ಊರಿನಲ್ಲಿರುವ ಒಬ್ಬ ಸಂಬಂಧಿಕರ ಮನೆಯಲ್ಲಿ ಇವನ ವಾಸಕ್ಕೆ ವ್ಯವಸ್ತೆ ಆಗುತ್ತದೆ. ಅಲ್ಲಿ ಈತನ ಓರಗೆಯನಾದ ಕೃಷ್ಣ ಇವನಿಗೆ ಸಂಗಾತಿಯಾಗುತ್ತಾನೆ.

ಮಾಳವ್ವನ ಮನೆಯಲ್ಲಿ ಪೂಜೆ, ನಂಬಿಕೆಗಳು, ಆಚರಣೆಗಳು ಹೆಚ್ಚು. ವಾರಕ್ಕೊಮ್ಮೆ ದೆಯ್ಯ (ದೆವ್ವ) ಕರೆಯದೇ ಇರುತ್ತಿರಲಿಲ್ಲ. ನೆಗಡಿ, ಕೆಮ್ಮು, ಜ್ವರ ಬಂದರೆ ಆಸ್ಪತ್ರೆಗೆ ಹೋದದ್ದೆ ಕಮ್ಮಿ. ಎಲ್ಲದಕ್ಕೂ ದೆಯ್ಯದ ಆಶ್ವಾಸನೆಯೇ ಆಗಬೇಕು. ಆದರೆ ಶಂಕರ ನಾಸ್ತಿಕ, ದೇವರ ತಲೆ ಮೇಲೆ ಒಂದು ಹೂವು ಮುಡಿಸಿದವನಲ್ಲ, ಹಬ್ಬ ಹರಿದಿನ ಆಚರಿಸಿದವನಲ್ಲ. ಮನೆಯಿಂದ ದಿವಗಿ ಹೆಂಚಿನ ಕಾರ್ಖಾನೆಗೆ ನಾಲ್ಕು ಕಿಲೋ ಮೀಟರು ದೂರ. ಬಸ್ಸಿನ ವ್ಯವಸ್ತೆ ಇದ್ದರೂ ದಿನವೂ ನಡೆದೇ ಹೋಗುತ್ತಿದ್ದ. ಆ ದಾರಿಯ ಮಧ್ಯೆ ಒಂದು ಸ್ಮಶಾನವಿದೆ. ಆದರೆ ಆತನಿಗೆ ಅದರ ಪರಿವೆ ಇರುತ್ತಿರಲಿಲ್ಲ. ಹಗಲು, ರಾತ್ರಿ ಏನಿದ್ದರೂ ಅದೇ ದಾರಿಯಲ್ಲಿ ಪ್ರಯಾಣ. ಆತನಿಗೆ ಕೆಲಸದ ಮೇಲಿನ ನಂಬಿಕೆಗಿಂತ ಹೆಚ್ಚಿನದು ಏನೂ ಇರಲಿಲ್ಲ, ಅದು ನಿಶ್ಚಲವಾಗಿ ನಿಂತ ಬಂಡೆಯಂತೆ.

ಶಂಕರ ಏಳನೇ ತರಗತಿ ಮಾತ್ರ ಓದಿದ್ದರೂ ಆತನಿಗಿದ್ದ ಪ್ರಪಂಚ ಜ್ಞಾನ ಅಗಾಧ. ರಾತ್ರಿ ಕೆಲಸ ಮಗಿಸಿ ಮನೆಗೆ ಬರುವುದು ಎಷ್ಟೇ ತಡವಾದರೂ ಪುಸ್ತಕ ಓದದೆ ಮಲಗುತ್ತಿರಲಿಲ್ಲ. ಕೃಷ್ಣನ ತರಗತಿಯ ಎಲ್ಲಾ ಪುಸ್ತಕಗಳನ್ನೂ ಶಂಕರ ಓದಿ ಮುಗಿಸುತ್ತಿದ್ದ. ಬದಿಯಲ್ಲಿ ಬಿದ್ದ ಚಿಕ್ಕ ಪೇಪರ್ ಚೂರನ್ನೂ ಒಮ್ಮೆ ಕಣ್ಣಾಡಿಸದೆ ಬಿಡುತ್ತಿರಲಿಲ್ಲ. ಯಾವ ವಿಷಯದ ಮೇಲೂ ಆತನಿಗೆ ಪ್ರಭುತ್ವವಿತ್ತು. ಅಷ್ಟೇ ಚತುರ ಮಾತುಗಾರ ಕೂಡ. ಆತನಿಗೆ ಸುಮಾರು 22 ವರ್ಷ ತುಂಬುವಷ್ಟರಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿ ಪ್ರಪಂಚವನ್ನ ಅರ್ಥಮಾಡಿಕೊಂಡಿದ್ದ. ಚದುರಂಗ ಆತನಿಗೆ ಪ್ರಿಯವಾದ ಆಟ. ಆತನನ್ನು ಚದುರಂಗದಲ್ಲಿ ಸೋಲಿಸಿದವರಿಲ್ಲ.

ಹೀಗಿರುವಾಗ ಒಮ್ಮೆ ಶಂಕರನಿಗೆ ಒಂದು ಟೆಲಿಗ್ರಾಮ್ ಬರುತ್ತದೆ.

“ಅಣ್ಣನ ಹೆಂಡತಿ ತೀರ್ವ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಯಾರೋ ಮಾಟ ಮಾಡಿಸಿದ್ದಾರೆ, ವಿಷಯ ತಿಳಿದ ಕೂಡಲೆ ಶೀಘ್ರ ಹೊರಟು ಬಾ” ಎಂದು ಅದರಲ್ಲಿ ಬರೆದಿತ್ತು.

ಈ ಹಿಂದೆ ಇಂತಹ ವಿಷಯಗಳು ಶಂಕರನ ಮನೆಯಲ್ಲಿ ಸಾಕಷ್ಟು ನಡೆದಿತ್ತು. ನಾಸ್ತಿಕ ಶಂಕರನಿಗೆ ಇವುಗಳಲ್ಲಿ ನಂಬಿಕೆ ಇರಲಿಲ್ಲ. ಖರ್ಚಿಗೆ ಒಂದಷ್ಟು ಹಣ ಕಳುಹಿಸಿ ಸುಮ್ಮನಾಗುತ್ತಿದ್ದ. ಆದರೆ ಈ ಬಾರಿ ಸ್ವಲ್ಪ ವಿಚಲಿತನಾದ. ಮನೆಯ ಈ ಸಮಸ್ಯೆಯನ್ನು ಪರಿಹರಿಸಬೇಕು, ಜನರ ಮೂಢ ನಂಬಿಕೆಯನ್ನು ಕಿತ್ತು ಎಸೆಯಬೇಕು ಎಂದು ನಿರ್ಧರಿಸಿ, ಚೀಲ ಹೆಗಲಿಗೇರಿಸಿ ಬಸ್ ನಿಲ್ದಾಣದ ಕಡೆ ನಡೆದ.

***
ಮನೆಯಲ್ಲಿ ಎಲ್ಲರೂ ಶಂಕರನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಗೇಟಿನ ದೊಣಪೆಯನ್ನು ಸರಿಸಿ ಒಳಗೆ ಬಂದ ಶಂಕರ ಯಾರನ್ನೂ ಮಾತನಾಡಿಸದೇ ಸೀದಾ ಮಧ್ಯ ಮನೆಯನ್ನು ಪ್ರವೇಶಿಸಿದ. ಅದು ಕತ್ತಲೆ ಕೋಣೆ, ಒಳಗೆ ಅಣ್ಣನ ಹೆಂಡತಿ ಪ್ರಜ್ಞೆ ತಪ್ಪಿ ಮಲಗಿದ್ದರು. ಆಕೆಯ ಸುತ್ತಲೂ ನಿಂಬೆ ಹಣ್ಣು, ಅರಶಿಣ-ಕುಂಕುಮವನ್ನು ಚೆಲ್ಲಲಾಗಿತ್ತು. ಒಂದು ಕ್ಷಣಕ್ಕೆ ಆತನಿಗದು ಸ್ಮಶಾನದ ತರ ಕಂಡಿತ್ತು. ಆದರೆ ಯಾರಿಗೂ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ಮನೆಯಲ್ಲಿ ಒಂದು ಕ್ಷಣ ನಿಲ್ಲಲೂ ಆತನಿಗೆ ಆಗಲಿಲ್ಲ. ಸ್ವಲ್ಪ ಯೋಚಿಸಿ, ಪಕ್ಕದ ಸಂಬಂಧಿಕರ ಮನೆಯಾದ ಲಕ್ಷ್ಮತ್ತಿಗೆಯ ಮನೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ.

ಮಹಾದೇವ ಎಂಬುವವನು ಶಂಕರನ ದೂರದ ಸಂಬಂಧಿ, ಆತನ ಮೇಲೆ ದೆವ್ವ ಬರುತ್ತದೆ. ಅಣ್ಣನ ಹೆಂಡತಿಗೆ ಆರೋಗ್ಯ ಸರಿ ಇಲ್ಲದಾಗ ಇವನನ್ನೆ ಕರೆದು ದೆಯ್ಯ ನೋಡಿಸಿತ್ತು. ಆತನ ಸಲಹೆಯ ಮೇರೆಗೆ ಮನೆಯಲ್ಲಿ ಮಾಟ ಕೀಳಿಸುವ ವ್ಯವಸ್ತೆ ಮಾಡಲಾಗಿತ್ತು. ಶಂಕರನಿಗೆ ಇದಾವುದು ಸರಿ ಕಾಣದಿದ್ದರೂ ಆ ಪ್ರಕ್ರಿಯೆಯಲ್ಲಿದ್ದುಕೊಂಡೇ ಅದರ ರಹಸ್ಯವನ್ನು ಬೇಧಿಸಬೇಕಿತ್ತು. ಇಲ್ಲಿಯವರೆಗೂ ಬರಿ ಕೇಳಿ ತಿಳಿದಿದ್ದ ಮಾಟ ಮಂತ್ರಗಳ ವಿಷಯ ಈಗ ಆತನ ಕಣ್ಣೆದುರಿಗೇ ನಡೆಯುತ್ತಿತ್ತು. ಪ್ರತಿ ದಿನ ಪೂಜೆ, ಅಣ್ಣನ ಹೆಂಡತಿಯ ದೇಹದಲ್ಲಿ ಹೊಕ್ಕ ದೆವ್ವದ ಬಾಯಿ ಬಿಡಿಸುವ ಹೋರಾಟ, ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದ ನಿಂಬೆ ಹಣ್ಣು ಇನ್ನೆಲ್ಲಿಯೋ ಮಣ್ಣು ಅಗೆದಾಗ ಸಿಗುತ್ತಿತ್ತು. ದೆಯ್ಯ ಹೇಳಿದ ಮಾತುಗಳೆಲ್ಲವೂ ಸತ್ಯದಂತೆ ಕಾಣತೊಡಗಿತ್ತು. ನಾಲ್ಕು ದಿನದ ರಜೆಹಾಕಿ ಬಂದಿದ್ದ ಶಂಕರನಿಗೆ ದೆವ್ವದ ಹುಡುಕಾಟದಲ್ಲಿ ದಿನಗಳು ಕಳೆದದ್ದು ತಿಳಿಯಲೇ ಇಲ್ಲ. ದೆಯ್ಯ-ಮಾಟಗಳ ಆಟಕ್ಕೆ ಅಂತ್ಯ ಸಿಗಲಿಲ್ಲ ಆದರೆ ಶಂಕರ ಕಾರ್ಖಾನೆಯ ಕೆಲಸ ಕಳೆದುಕೊಂಡಿದ್ದ.

***
ಶಂಕರ ನಿದಾನವಾಗಿ ಬದಲಾಗುತ್ತಿದ್ದ. ಮಾಟ-ಮಂತ್ರ-ದೆವ್ವಗಳ ಸತ್ಯ ತಿಳಿಯದಿದ್ದರೂ ಯಾವುದೋ ಕಾಣದ ಶಕ್ತಿಯ ಕಡೆಗೆ ಅವನ ಮನ ವಾಲುತ್ತಿತ್ತು. ಮನೆಯವರೊಂದಿಗಿನ ಒಡನಾಟ ಕಡಿದುಕೊಂಡಿದ್ದ. ಕೂಡಿಟ್ಟ ಹಣವೆಲ್ಲ ಬರಿದಾಗಿತ್ತು. ಲಕ್ಷ್ಮತ್ತಿಗೆಯ ಋಣದಲ್ಲಿ ಎರಡು ಹೊತ್ತಿನ ಹಸಿವು ನೀಗುತ್ತಿತ್ತು. ಇಡೀ ಮೂವತ್ತು ವರ್ಷದಲ್ಲಿ ದೇವರ ತಲೆಯ ಮೇಲೆ ಒಂದು ಹೂವೂ ಏರಿಸದ ಈತ ಈಗ ದಿನವಿಡಿ ಹೂವಿಗಾಗಿ ಅಲೆಯುತ್ತಿದ್ದ. ದೀಪದ ಎದುರು ಗಂಟೆಗಟ್ಟಲೆ ಕುಳಿತು ಧ್ಯಾನಿಸುತ್ತಿದ್ದ. ಆತನ ಮನಸ್ಸು ಆತನ ಹಿಡಿತದಲ್ಲಿ ಇರಲಿಲ್ಲ. ಬದುಕಿಗೆ ಅರ್ಥವಿಲ್ಲ ಎಂದು ಚೀರಾಡುತ್ತಿದ್ದ. ಕೆಲವೊಮ್ಮೆ ಆತ್ಮ ಹತ್ಯೆಗೂ ಯತ್ನಿಸಿದ್ದ. ಹೀಗೆ ನಾಸ್ತಿಕನಾದ ಶಂಕರ ಆಸ್ತಿಕನಾಗಿ ಬದಲಾಗಿದ್ದ.

ಊರಿನವರೆಲ್ಲ ಆತನನ್ನ ಒಬ್ಬ ಹುಚ್ಚನಂತೆ ನೋಡತೊಡಗಿದ್ದರು. ಮನೆ, ಸಂಬಂಧ, ಕೆಲಸ ಎಲ್ಲವೂ ತೊರೆದಿದ್ದ ಶಂಕರನಿಗೆ ಇದ್ದಕ್ಕಿದ್ದಂತೆ ಪಂಡರಾಪುರಕ್ಕೆ ಹೋಗುವ ಯೋಚನೆ ಹೊಳೆದಿತ್ತು. ಇದಾದ ಹಲವು ತಿಂಗಳುಗಳ ನಂತರ ಶಂಕರ ಇದ್ದಕ್ಕಿದ್ದಂತೆ ಕಾಣೆಯಾದ. ಮನೆಯವರೆಲ್ಲರೂ ಆತನ ಹುಡುಕಾಟಕ್ಕೆ ಪ್ರಾರಂಭಿಸಿದರು. ಆದರೆ ಇಲ್ಲಿಯವರೆಗೂ ಆತನ ಸುಳಿವು ಯಾರಿಗೂ ತಿಳಿದಿಲ್ಲ. ಕೆಲವರು ಪಂಡರಾಪುರದ ಮಠದಲ್ಲಿ ಕೂದಲು ಬಿಟ್ಟುಕೊಂಡು ಸನ್ಯಾಸಿಯೊಂತೆ ಅಲೆದಾಡುತ್ತಿದ್ದಾನೆ ಎಂದು ಹೇಳಿದರೆ ಕೆಲವರು ಇತ್ತೀಚೆಗೆ ಊರಿನ ಆಚೆಗಿರುವ ಕೊಳದಲ್ಲಿ ಒಂದು ಹೆಣ ತೇಲುತ್ತಿತ್ತು ಅದರ ಮೇಲೆ ಆತ ಹಾಕಿಕೊಂಡ ಬಟ್ಟೆ ಇತ್ತು ಎಂದು ಹೇಳುತ್ತಾರೆ.

ಆದರೆ ಮಾಳವ್ವನಿಗೆ ಆತ ಮತ್ತೆ ಕೆಲಸ ಕೇಳಿಕೊಂಡು ಕಾರ್ಖಾನೆಗೆ ಹೋದ ವಿಷಯ ಮಾತ್ರ ತಿಳಿದಿದೆ.

***
ಮಾಳವ್ವ ಮೊಮ್ಮಗಳನ್ನು ಕರೆದು “ಯವ್ವಾ, ಸೆಂಜಿ ಆಯ್ತು, ಲಕ್ಷ್ಮತ್ತಿಗಿ ಕೆಲಸದಿಂದ ಬಂದಿರುಕೆ ಸಾಕು, ಸಣ್ಣ ಮಾವ ಬಂದವನ್ಯಾ ಅಂತ ಒಂದ್ ಸಲ ಕೇಳ್ಕಂಡ್ ಬಾರೆ” ಎಂದು ಕೇಳುತ್ತಾಳೆ.

“ನಿಂದೊಂದು ದಿನಾ ಇದೇ ರಾಗ ಆಯ್ತು, ಬಂದ್ರೆ ಮನಿಗೆ ಬರ್ದೆ ಹೋಯ್ತಾರಾ?” ಎಂದು ಮೊಮ್ಮಗಳು ಗೊಣಗಿದಳು.

ಮತ್ತೆ ಮಾಳವ್ವ ಎದುರು ಬೇಲಿಯ ಗೇಟಿನ ಕಡೆಗೆ ದೃಷ್ಠಿ ಹಾಯಿಸುತ್ತಾಳೆ.

ಮೌನ!

ಇದ್ದಂತಿಹುದು,
ಇಲ್ಲದಂತಿಹುದು
ನನ್ನ ನಿನ್ನ ಈ ಸಂಬಂಧ
ನೀನು ಮೌನದಲೇ ಹೆಚ್ಚು
ನನಗೀಗ ಮಾತಿನಲಿ ಹುಚ್ಚು

ತೋಳ ಮೇಲಿನ ಚಿತ್ತಾರ
ಕಪ್ಪು-ಕೆಂಪು
ಒಳ ಹೊರಗಿನ ಬಣ್ಣ ಬೇರೆ ಬೇರೆ
ನುಡಿಯೊಡೆಯಲು, ದನಿಗೂಡಲು
ಬಣ್ಣಗಳು ಇನ್ನೂ ಸೇರಿಲ್ಲ

ಬೀಸುವ ಗಾಳಿಯಲೂ
ಒಂದು ಮಾತಿಲ್ಲ
ಕಣ್ಣಗಲಿಸಿ, ಕಿವಿಯರಳಿಸಿ ಕಾದೆ
ಉತ್ತರಕ್ಕಾಗಿ-ಧಕ್ಷಿಣದೆಡೆಗೆ
ಕತ್ತಲೆಯಲಿ
ಮತ್ತದೇ ಮೌನ

ನಿನ್ನ ಮೌನ
ಮಾತಾಗುವ ವೇಳೆಗೆ
ಕಾದು, ಅರೆಬೆಂದು ನಿಡುಸುಯ್ಯುವ
ಕಳೇಬರ ನಾನು

ಜೀವನಾದರ್ಶ

ಅವರ ಹೆಸರು ಸಂಕಯ್ಯ. ಅವರ ತಾಯಿ ಅವರನ್ನ ‘ಮೂಕ ಬಸವಣ್ಣ’ ಅಥವಾ ‘ಬೊಳೇ ಶಂಕರ’ ಅಂತ ಕರೀತಿದ್ರು. ಯಾಕೇಂದ್ರೆ ಈ ವ್ಯಕ್ತಿ ತನಗೋಸ್ಕರ ಯಾವುದೇ ಆಸ್ತಿಯನ್ನೂ, ಹಣ ಸಂಗ್ರಹವನ್ನೂ ಮಾಡಿರಲಿಲ್ಲ. ತನ್ನಲ್ಲಿದ್ದ ಅಲ್ಪ ಸ್ವಲ್ಪ ಹಣವನ್ನ, ಆಸ್ತಿಯನ್ನ ಮಕ್ಕಳ ಶಿಕ್ಷಣಕ್ಕೆ ವಿನಿಯೋಗ ಮಾಡಿದ್ರು ಅಥವಾ ಬೇರೆಯವರಿಗೆ ದಾನವಾಗಿ ಕೊಟ್ಟಿದ್ರು. ಇದಕ್ಕೆ ಪ್ರತಿಯಾಗಿ ಯಾವುದೇ ನಿರೀಕ್ಷೆ ಅವರಲ್ಲಿ ಇರಲಿಲ್ಲ. ಹೆಂಡತಿ ಅಥವಾ ತಾಯಿ ಈ ಬಗ್ಗೆ ಮಾತು ಎತ್ತಿದರೆ ಸುಮ್ಮನೆ ನಕ್ಕು ಮಾತಿಗೆ ವಿರಾಮ ಹಾಕುತ್ತಿದ್ದರು.

ಒಂದು ದೊಡ್ಡ ಸ್ಟೀಲ್ ಲೋಟದಲ್ಲಿ ನಾಲ್ಕು ಹೊತ್ತು ಚಹಾ ಕುಡಿಯೋದು, ಬಾಯಿತುಂಬ ಎಲೆ ಅಡಿಕೆ ಜಗಿಯೋದು, ಸಂಜೆ ಒಂದಷ್ಟು ಸಾರಾಯಿ ಕುಡಿಯುವುದು ಮತ್ತು ಗಣೇಶ ಬೀಡಿ ಎಳೆಯೋದು ಬಿಟ್ಟರೆ ಆವರಿಗೆ ಬೇರೆ ಯಾವುದೇ ಹವ್ಯಾಸಗಳಿರಲಿಲ್ಲ.

ಅವರು ಹೆಚ್ಚು ಮಾತಾಡ್ತಾ ಇದ್ದಿದ್ದು ಮಕ್ಕಳ ಜೊತೆ ಮಾತ್ರ, ಅದು ಯಾವತ್ತೂ ಬರಿ ಬಾಯಲ್ಲಿ ಮಾತಾಡ್ತಿರಲಿಲ್ಲ. ತನ್ನ ಹೆಗಲಿಗೆ ಸಿಕ್ಕಿಸಿದ್ದ ಟವೆಲ್‍ನ ಒಂದು ತುದಿಗೆ ಕಟ್ಟಿದ್ದ ಚೌಚೌ ಬಾತ್ ಅಥವಾ ಪೆಪ್ಪರ್‍ಮೆಂಟು ಕೊಟ್ಟಿಯೇ ಮಕ್ಕಳನ್ನು ಮಾತಾಡಿಸುವುದು. ಮಕ್ಕಳು ಎಂದಾಗ ಅವರಿಗೆ ತನ್ನ ಮಕ್ಕಳು ಮತ್ತು ಇತರ ಮನೆಯ ಮಕ್ಕಳಿಗೂ ಬೆಧ ಇರಲಿಲ್ಲ. ಅಕ್ಕ ಪಕ್ಕದ ಮನೆಯ ಮಕ್ಕಳನ್ನು ಒಟ್ಟು ಹಾಕಿ ಆಡಿಸುವುದು, ಊಟ ಮಾಡಿಸುವುದು ಅವರಿಗೆ ಬಹಳ ಸಂತೋಷ ಕೊಡುವ ವಿಷಯ. ಈ ಸಂಪ್ರದಾಯ ಈಗಲೂ ಆ ಮನೆಯಲ್ಲಿ ಮುಂದುವರಿದಿದೆ.

ಶಾಲೆಯ ಮೆಟ್ಟಿಲು ಹತ್ತದ ಇವರಿಗೆ ಶಿಕ್ಷಣ ಎಂದರೆ ಎಲ್ಲಿಲ್ಲದ ಆಸಕ್ತಿ. ಬಡತನದ ಕಾರಣದಿಂದ ತನ್ನ ಏಳನೇ ವಯಸ್ಸಿನಲ್ಲಿ ಹೊಟೆಲ್ ಒಂದರಲ್ಲಿ ಸಪ್ಲಾಯರ್ ಆಗಿ ಕೆಲಸಕ್ಕೆ ಸೇರ್ತಾರೆ. ಆ ಹೊಟೆಲ್ ಮಾಲಿಕನಿಗೆ ಇವರ ಕೆಲಸದ ಮೇಲೆ ಬಹಳ ಪ್ರೀತಿ. ಮಾಲಿಕರು ಪ್ರತಿ ದಿನದ ಕೆಲಸ ಮುಗಿದ ಮೇಲೆ ರಾತ್ರಿ ಸಂಕಯ್ಯನಿಗೆ ಲೆಕ್ಕ ಹೆಳಿಕೊಡುವುದು, ಅಕ್ಷರಗಳ ಪರಿಚಯ ಮಾಡಿಸುವುದು ಮತ್ತು ಕೊಂಕಣಿ ಭಾಷೆಯಲ್ಲಿ ಮಾತನಾಡಿಸುವುದನ್ನು ಮಾಡುತ್ತಿದ್ದರು. ಇದರಿಂದ ಸಂಕಯ್ಯನಿಗೆ ಲೆಕ್ಕ ಬಿಡಿಸುವುದು, ಕನ್ನಡ ಓದು-ಬರಹ, ಹಿಂದಿ ಮತ್ತು ಕೊಂಕಣಿ ಭಾಷೆಯಲ್ಲಿ ಮಾತನಾಡುವುದು ಮತ್ತು ಕೆಲವು ಇಂಗ್ಲೀಷ್ ಅಕ್ಷರಗಳನ್ನು ಓದುವುದು ರೂಢಿಯಾಯಿತು.

ಮುಂದೆ ಅಡಿಕೆ ಮಂಡಿಯಲ್ಲಿ ಹಮಾಲಿಯಾಗಿ ಕೆಲಸಕ್ಕೆ ಸೇರಿದಾಗ ಅವರ ನಿಷ್ಠ ಲೆಕ್ಕಾಚಾರ ಮತ್ತು ಓದು ಬರಹದ ಹಿನ್ನೆಲೆಯಲ್ಲಿ ಅವರಿಗೆ ತೂಕ ಮತ್ತು ಕಾಠ ಮಾಡುವ ಕೆಲಸಕ್ಕೆ ನೇಮಿಸುತ್ತಾರೆ.

ಒಮ್ಮೆ ಅವರ ಮಾವ ತನ್ನ ಕೊನೆಯ ಮಗಳನ್ನ ಮುಂದೆ ಓದುವುದು ಬೇಡ, ನಿನಗೆ ಮದುವೆ ಮಾಡುತ್ತೇನೆ ಅಂದಾಗ, ಅವರ ಜೊತೆ ಜಗಳವಾಡಿ ನಾದಿನಿಯನ್ನ ತನ್ನ ಮನೆಗೆ ಕರೆತಂದು, ಓದಿಸಿ ಅವರು ಮುಂದೆ ಒಬ್ಬ ಶಿಕ್ಷಕಿಯಾಗೋ ಹಾಗೆ ಮಾಡ್ತಾರೆ. ದಿನದ ಅವಧಿಗಿಂತ ಹೆಚ್ಚುವರಿ ಕೆಲಸ ಮಾಡಿ ಅದರಿಂದ ಬಂದ ಹಣದಿಂದ ಮಕ್ಕಳಿಗೆ ಬೇಕಾದ ಸಮವಸ್ತ್ರ, ಪಠ್ಯ ಪುಸ್ತಕ ಹಾಗು ಇತರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಅವರ ಆಸೆ ಇದ್ದದ್ದು ತನ್ನ ಮಕ್ಕಳನ್ನು ಓದಿಸಿ ಒಳ್ಳೆಯ ಹುದ್ದೆಯಲ್ಲಿ ಅವರನ್ನ ನೋಡಬೇಕು ಅನ್ನುವದು. ಮಕ್ಕಳು ಬೇಗ ಎದ್ದು ಓದಬೇಕು, ಸಮಯ ಸರಿಯಾಗಿ ಅರ್ಥ ಅಗಬೇಕು ಅಂತ ಕೂಡಿಟ್ಟ ಹಣದಲ್ಲಿ ಮೊದಲನೇ ಬಾರಿಗೆ ಮನೆಗೆ ಒಂದು ಅಲಾರಾಮ್ ತಂದಿದ್ರು.

ಇವರಲ್ಲಿದ್ದ ಇನ್ನೊಂದು ಗುಣವೇ ಹಿರಿಯರಿಗೆ ಸಹಾಯ ಮಾಡುವುದು. ಹಿರಿಯರು ಅಥವಾ ಭಿಕ್ಷುಕರು ಮನೆಗೆ ಬಂದರೆ ಅವರಿಗೆ ಊಟ ನೀಡುವುದು, ಅವರ ಕಟಿಂಗ್ ಮತ್ತು ದಾಡಿಗೆ ಹಣ ಕೊಡುವುದು, ಚಪ್ಪಲಿ ಮತ್ತು ಚತ್ರಿ ಖರೀದಿಸಲು ಹಣ ಕೊಡುವುದು, ಮೈ ಒತ್ತಿ ಕೊಡುವುದು ಇತ್ಯಾದಿ ಅವರಿಗೆ ಬಹು ಇಷ್ಟದ ಕೆಲಸ. ಇವರು ಈ ಸಹಾಯಕ್ಕೆ ಪ್ರತಿಯಾಗಿ ಯಾವುದೇ ಕ್ರೆಡಿಟ್ ತೆಗೆದುಕೊಂಡವರಲ್ಲ.

ಅಡಿಕೆ ಮಂಡಿಯಲ್ಲಿ ಹಮಾಲಿಗೆ ಸೇರುವುದಕ್ಕೆ ಮುನ್ನ ಹಮಾಲರ ಬಿಡಾರದಲ್ಲಿ ಅಡುಗೆ ಮಾಡೋ ಕೆಲಸಕ್ಕೆ ಸೆರ್ಕೊಂಡಿದ್ರು ಹಾಗಾಗಿ ಅವರಿಗೆ ಎಲ್ಲಾ ತರಹದ ಅಡುಗೆ ಮಾಡೋಕೆ ಬರ್ತಿತ್ತು. ಮುಂದೆ ಮದುವೆ ಆದ ಮೇಲೆಯೂ ಕೂಡ ಹೆಂಡತಿಗೆ ಅಡುಗೆ ಮಾಡಲು ಸಹಾಯ ಮಾಡ್ತಾ ಇದ್ರು. ಮ್ಕಳಿಗೆ ತಲೆ ಬಾಚೋದು, ಊಟ ಮಾಡಿಸೋದು, ಮಸಾಲೆ ರುಬ್ಬುವುದು, ದೂರದ ಕೊಳಾಯಿಯಿಂದ ನೀರು ತರುವುದು ಹೀಗೆ ತನ್ನ ಕೆಲಸದ ಜೊತೆಗೆ ಮನೆಯ ಎಲ್ಲಾ ಕೆಲಸದಲ್ಲೂ ಹೆಂಡತಿಯೊಂದಿಗೆ ಕೈಜೋಡಿಸ್ತಿದ್ರು. ಪ್ರತಿ ಭಾನುವಾರದ ಮೀನು ಪದಾರ್ಥ ಇವರ ಕೈಯಿಂದಲೇ ಆಗಬೇಕು.

ಇವರು ತುಂಬಾ ಸ್ವಾಭಿಮಾನಿ. ಬೇರೆಯವರ ಹಣಕ್ಕೆ ಆಸೆಪಟ್ಟವರಲ್ಲ, ಋಣಕ್ಕೆ ಬಿದ್ದವರಲ್ಲ ಅಥವಾ ಶ್ರಮ ಇಲ್ಲದ ತುತ್ತು ತಿಂದವರಲ್ಲ. ಇವರು ಯಾವತ್ತೂ ಹೆಳ್ತಾ ಇದ್ದದ್ದು ಒಂದೇ ಮಾತು ‘ಶ್ರಮ ಇಲ್ಲದೆ ಪಡೆವ ತುತ್ತು ಭಿಕ್ಷೆಗೆ ಸಮಾನ’ ಎಂದು. ಹಾಗಾಗಿ ಇವರಿಗೆ ತಾನು ಮಾಡುವ ಕೆಲಸದಲ್ಲಿ ಸಾಕಷ್ಟು ಪ್ರೀತಿ ಮತ್ತು ನೀಯತ್ತು.

ಇವರು ತನ್ನ ಯಾವುದೇ ಕಷ್ಟ, ನೋವನ್ನ ಇನ್ನೊಬ್ಬರೊಂದಿಗೆ ಹಂಚಿಕೊಂಡವರಲ್ಲ, ಯಾರ ಸಹಾಯವನ್ನೂ ಬೇಡಿದವರಲ್ಲ. ತನ್ನ ಮಿತಿಯೊಳಗೆ ಬರುವ ಎಲ್ಲ ಕೆಲಸಗಳನ್ನು ನಿಭಾಯಿಸುವ ಜಾಣ್ಮೆ ಅವರಲ್ಲಿತ್ತು. ಸಪ್ಲಾಯರ್ ಅಗಿ, ಅಡುಗೆ ಭಟ್ಟನಾಗಿ, ಮೀನುಗಾರನಾಗಿ, ಹಮಾಲಿಯಾಗಿ, ಲಾರಿ ಕ್ಲೀನರ್ ಆಗಿ, ಲೆಕ್ಕಿಗನಾಗಿ ಗಳಿಸಿದ ಜೀವನಾನುಭವಗಳನ್ನು ತನ್ನ ಸಂಸಾರದೊಂದಿಗೆ ಅಳವಡಿಸಿಕೊಂಡು ಪೂರ್ಣ ಜೀವನ ನಡೆಸಿದ ಒಬ್ಬ ಆದರ್ಶ ವ್ಯಕ್ತಿ ಇವರು.

ಜೀವನ ಪೂರ್ತಿ ಅಡಿಕೆ ಮಂಡಿಯಲ್ಲಿ ತನ್ನ ಕಾಲುಗಳನ್ನು ಜೀತಕ್ಕಿಟ್ಟ ಇವರು ತಮ್ಮ ಜೀವನ ಪಯಣವನ್ನು ಮುಗಿಸಿದ್ದು ಈ ಅಡಿಕೆ ಮಂಡಿಯಲ್ಲಿಯೇ.

ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ರು, ಯಾರಿಗೂ ಕಾಯದೆ.