Saturday, 9 May 2015

ಕಾದಿರುವಳು ಮಾಳವ್ವ

ಮಣ್ಣು ಗೋಡೆಯ, ಸೋಗೆ ಹೊದಿಕೆಯ, ಮನೆಯ ಮಾಡಿನ ಒಳಗೆ ಮಾಳವ್ವ, ಒಲೆಯ ಮೇಲೆ ಎಸರನ್ನಿಟ್ಟು, ಉರಿಯದೇ ಸತಾಯಿಸುತ್ತಿದ್ದ ಹಸಿ ಕಟ್ಟಿಗೆಯನ್ನು ಹೊತ್ತಿಸಲು ಊದುಬತ್ತಿ ಅಂಡೆಯಿಂದ ಊದುತ್ತಿದ್ದಳು. ಸೊಂಯ್...ಸೊಂಯ್ ಎಂಬ ಆಕೆಯ ಉಸಿರಿನ ರಾಗಕ್ಕೆ ಕೆಮ್ಮು ಹಿಮ್ಮೇಳವಾಗಿತ್ತು. ಮೊದಲೇ ಮಂಜಾಗಿದ್ದ ಕಣ್ಣಿಗೆ ಈಗ ಹೊಗೆ ತುಂಬಿಕೊಂಡಿತ್ತು, ಮಾಳವ್ವನಿಗೆ ಸಿಟ್ಟು ನೆತ್ತಿಗೇರಿತ್ತು

“ರಂಡಿ ಮಗನ ಕಟ್ಟಿಗಿ, ಎಷ್ಟ್ ಬಿಸಿಲಿಗೆ ಹಾಕಿದ್ರೂ ಒಣಗೂದಿಲ್ಲ, ಈ ಮಕ್ಕಳಿಗೋ ಒಣ ಕಟ್ಟಿಗಿ ಆರಿಸ್ಕಂಡ್ ಬನ್ನಿ ಅಂದ್ರೆ ತಿಳುದಿಲ್ಲ, ನೆವಕ್ಕೆ ಕೆಲಸ ಮಾಡ್ತವೆ...ಹಾಳಾಬಿದ್ದುಂದು” ಎಂದು ತನ್ನಷ್ಟಕ್ಕೆ ಗೊಣಗಿಕೊಂಡು ಮೊಮ್ಮಗಳನ್ನು ಕೂಗಿದಳು.

“ಮಗಾ, ಆಯ್ತನೆ, ಎಸ್ರು ಕಾದದೆ, ಅಕ್ಕಿ ಹಾಕು ಬಾ”.

“ತಡಿಯೇ ಮಾರಾಯ್ತಿ, ನಿಂಗಂತು ಸಮಾದಾನನೆ ಇಲ್ಲಾ, ಅಕ್ಕಿ ತೊಳುಕೆ ಹತ್ತಿದ್ದೆ, ಬಂದೆ ಇರು” ಎಂದು ಮೊಮ್ಮಗಳು ಮಾಳವ್ವನನ್ನು ಗದರುತ್ತಾಳೆ.

ಅಕ್ಕಿ ತೊಳೆದು ಒಳಗೆ ಬಂದ ಮೊಮ್ಮಗಳು “ಅವ್ವಾ, ಇದೆಂಥದ್ದೆ, ಮನಿ ತುಂಬಾ ಹೊಗಿ ಮಾಡ್ಕಂಡ್ ಕೂತಿದ್ದೆ, ಒಂಚೂರು ಬೆಂಕಿ ಉರಿಸುಕೆ ಆಗುದಿಲ್ಲ ನಿಂಗೆ...ಸಾಯ್ತದೆ ಇದೊಂದು” ಎಂದು ಬರಬರನೆ ಕಟ್ಟಿಗೆಯನ್ನು ಕುಟ್ಟಿ ಜೋರಾಗಿ ಊದತೊಡಗಿದಳು.

ಆಕೆಗೆ ಹೆದರಿಕೊಂಡೋ ಏನೋ ಪಾಪ ಆ ಕಟ್ಟಿಗೆಯೂ ಸುಮ್ಮನೆ ಉರಿಯತೊಡಗಿತು.

“ಮಗಾ, ಸಣ್ಣ ಮಾವ (ಶಂಕರ) ಬಂದವ್ನಂತನೆ ಮನಿಗೆ? ನಿನ್ನೆ ಲಕ್ಷ್ಮತ್ತಿಗಿ ಹೇಳ್ತಾ ಇದ್ದುಂದು ಕೇಳಿಸ್ಕಂಡೆ. ಮತ್ತೆ ಕಾರ್ಖಾನೆಗೆ ಹೋಗ್ತಿನಿ ಅಂತಿದ್ನಂತೆ, ಅದ್ಕೆ ಕೆಲ್ಸ ಕೇಳ್ಕಂಡ್ ಬರುಕೆ ಹೊನ್ನಾವರಕ್ಕೆ ಹೋಗವ್ನಂತೆ”. ಎಂದು ಮೊಮ್ಮಗಳನ್ನು ಕೇಳಿದಳು.

“ಬಂದಿರುಕೆ ಸಾಕು, ಇಷ್ಟ್ ದಿನ ಬೇಕಾಯ್ತದ್ಯ ಹೋಗಿ ಬರುಕೆ”? ಎಂದು ಮೊಮ್ಮಗಳು ಗೊಣಗಿದಳು.

ಮೊಮ್ಮಗಳ ಅವತಾರ ಮಾಳವ್ವನಿಗೆ ಹೊಸತಾಗಿರಲಿಲ್ಲ. ಹಾಗಾಗಿ ಅವಳ ಮಾತಿನ ಕಡೆ ಗಮನ ಕೊಡದೆ ಎದುರಿನ ಬೇಲಿಯ ಗೇಟಿನ ಕಡೆಗೆ ದೃಷ್ಠಿ ಹಾಯಿಸಿದಳು.

***
ಶಂಕರ, ಮಾಳವ್ವನ ಐದು ಜನ ಮಕ್ಕಳಲ್ಲಿ ಮೂರನೆಯವನು. ಏಳನೇ ತರಗತಿಯ ವರೆಗೆ ಓದಿದ ಈತ ಮನೆಯ ಬಡತನದ ಕಾರಣದಿಂದ ಶಾಲೆ ಬಿಟ್ಟು ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಸ್ವಲ್ಪ ದಿನದ ನಂತರ ದೂರದ ಹೊನ್ನಾವರದ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಖಾಲಿ ಇದೆ ಎಂದು ಸುದ್ದಿ ತಿಳಿದು ಹೆಗಲಿಗೆ ಚೀಲ ಏರಿಸಿ ಹೊರಟಾಗ ಅವನಿಗೆ ಹದಿನಾಲ್ಕು ವರ್ಷ. ಹೊನ್ನಾವರದ ದಿವಗಿ ಊರಿನಲ್ಲಿರುವ ಒಬ್ಬ ಸಂಬಂಧಿಕರ ಮನೆಯಲ್ಲಿ ಇವನ ವಾಸಕ್ಕೆ ವ್ಯವಸ್ತೆ ಆಗುತ್ತದೆ. ಅಲ್ಲಿ ಈತನ ಓರಗೆಯನಾದ ಕೃಷ್ಣ ಇವನಿಗೆ ಸಂಗಾತಿಯಾಗುತ್ತಾನೆ.

ಮಾಳವ್ವನ ಮನೆಯಲ್ಲಿ ಪೂಜೆ, ನಂಬಿಕೆಗಳು, ಆಚರಣೆಗಳು ಹೆಚ್ಚು. ವಾರಕ್ಕೊಮ್ಮೆ ದೆಯ್ಯ (ದೆವ್ವ) ಕರೆಯದೇ ಇರುತ್ತಿರಲಿಲ್ಲ. ನೆಗಡಿ, ಕೆಮ್ಮು, ಜ್ವರ ಬಂದರೆ ಆಸ್ಪತ್ರೆಗೆ ಹೋದದ್ದೆ ಕಮ್ಮಿ. ಎಲ್ಲದಕ್ಕೂ ದೆಯ್ಯದ ಆಶ್ವಾಸನೆಯೇ ಆಗಬೇಕು. ಆದರೆ ಶಂಕರ ನಾಸ್ತಿಕ, ದೇವರ ತಲೆ ಮೇಲೆ ಒಂದು ಹೂವು ಮುಡಿಸಿದವನಲ್ಲ, ಹಬ್ಬ ಹರಿದಿನ ಆಚರಿಸಿದವನಲ್ಲ. ಮನೆಯಿಂದ ದಿವಗಿ ಹೆಂಚಿನ ಕಾರ್ಖಾನೆಗೆ ನಾಲ್ಕು ಕಿಲೋ ಮೀಟರು ದೂರ. ಬಸ್ಸಿನ ವ್ಯವಸ್ತೆ ಇದ್ದರೂ ದಿನವೂ ನಡೆದೇ ಹೋಗುತ್ತಿದ್ದ. ಆ ದಾರಿಯ ಮಧ್ಯೆ ಒಂದು ಸ್ಮಶಾನವಿದೆ. ಆದರೆ ಆತನಿಗೆ ಅದರ ಪರಿವೆ ಇರುತ್ತಿರಲಿಲ್ಲ. ಹಗಲು, ರಾತ್ರಿ ಏನಿದ್ದರೂ ಅದೇ ದಾರಿಯಲ್ಲಿ ಪ್ರಯಾಣ. ಆತನಿಗೆ ಕೆಲಸದ ಮೇಲಿನ ನಂಬಿಕೆಗಿಂತ ಹೆಚ್ಚಿನದು ಏನೂ ಇರಲಿಲ್ಲ, ಅದು ನಿಶ್ಚಲವಾಗಿ ನಿಂತ ಬಂಡೆಯಂತೆ.

ಶಂಕರ ಏಳನೇ ತರಗತಿ ಮಾತ್ರ ಓದಿದ್ದರೂ ಆತನಿಗಿದ್ದ ಪ್ರಪಂಚ ಜ್ಞಾನ ಅಗಾಧ. ರಾತ್ರಿ ಕೆಲಸ ಮಗಿಸಿ ಮನೆಗೆ ಬರುವುದು ಎಷ್ಟೇ ತಡವಾದರೂ ಪುಸ್ತಕ ಓದದೆ ಮಲಗುತ್ತಿರಲಿಲ್ಲ. ಕೃಷ್ಣನ ತರಗತಿಯ ಎಲ್ಲಾ ಪುಸ್ತಕಗಳನ್ನೂ ಶಂಕರ ಓದಿ ಮುಗಿಸುತ್ತಿದ್ದ. ಬದಿಯಲ್ಲಿ ಬಿದ್ದ ಚಿಕ್ಕ ಪೇಪರ್ ಚೂರನ್ನೂ ಒಮ್ಮೆ ಕಣ್ಣಾಡಿಸದೆ ಬಿಡುತ್ತಿರಲಿಲ್ಲ. ಯಾವ ವಿಷಯದ ಮೇಲೂ ಆತನಿಗೆ ಪ್ರಭುತ್ವವಿತ್ತು. ಅಷ್ಟೇ ಚತುರ ಮಾತುಗಾರ ಕೂಡ. ಆತನಿಗೆ ಸುಮಾರು 22 ವರ್ಷ ತುಂಬುವಷ್ಟರಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿ ಪ್ರಪಂಚವನ್ನ ಅರ್ಥಮಾಡಿಕೊಂಡಿದ್ದ. ಚದುರಂಗ ಆತನಿಗೆ ಪ್ರಿಯವಾದ ಆಟ. ಆತನನ್ನು ಚದುರಂಗದಲ್ಲಿ ಸೋಲಿಸಿದವರಿಲ್ಲ.

ಹೀಗಿರುವಾಗ ಒಮ್ಮೆ ಶಂಕರನಿಗೆ ಒಂದು ಟೆಲಿಗ್ರಾಮ್ ಬರುತ್ತದೆ.

“ಅಣ್ಣನ ಹೆಂಡತಿ ತೀರ್ವ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಯಾರೋ ಮಾಟ ಮಾಡಿಸಿದ್ದಾರೆ, ವಿಷಯ ತಿಳಿದ ಕೂಡಲೆ ಶೀಘ್ರ ಹೊರಟು ಬಾ” ಎಂದು ಅದರಲ್ಲಿ ಬರೆದಿತ್ತು.

ಈ ಹಿಂದೆ ಇಂತಹ ವಿಷಯಗಳು ಶಂಕರನ ಮನೆಯಲ್ಲಿ ಸಾಕಷ್ಟು ನಡೆದಿತ್ತು. ನಾಸ್ತಿಕ ಶಂಕರನಿಗೆ ಇವುಗಳಲ್ಲಿ ನಂಬಿಕೆ ಇರಲಿಲ್ಲ. ಖರ್ಚಿಗೆ ಒಂದಷ್ಟು ಹಣ ಕಳುಹಿಸಿ ಸುಮ್ಮನಾಗುತ್ತಿದ್ದ. ಆದರೆ ಈ ಬಾರಿ ಸ್ವಲ್ಪ ವಿಚಲಿತನಾದ. ಮನೆಯ ಈ ಸಮಸ್ಯೆಯನ್ನು ಪರಿಹರಿಸಬೇಕು, ಜನರ ಮೂಢ ನಂಬಿಕೆಯನ್ನು ಕಿತ್ತು ಎಸೆಯಬೇಕು ಎಂದು ನಿರ್ಧರಿಸಿ, ಚೀಲ ಹೆಗಲಿಗೇರಿಸಿ ಬಸ್ ನಿಲ್ದಾಣದ ಕಡೆ ನಡೆದ.

***
ಮನೆಯಲ್ಲಿ ಎಲ್ಲರೂ ಶಂಕರನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಗೇಟಿನ ದೊಣಪೆಯನ್ನು ಸರಿಸಿ ಒಳಗೆ ಬಂದ ಶಂಕರ ಯಾರನ್ನೂ ಮಾತನಾಡಿಸದೇ ಸೀದಾ ಮಧ್ಯ ಮನೆಯನ್ನು ಪ್ರವೇಶಿಸಿದ. ಅದು ಕತ್ತಲೆ ಕೋಣೆ, ಒಳಗೆ ಅಣ್ಣನ ಹೆಂಡತಿ ಪ್ರಜ್ಞೆ ತಪ್ಪಿ ಮಲಗಿದ್ದರು. ಆಕೆಯ ಸುತ್ತಲೂ ನಿಂಬೆ ಹಣ್ಣು, ಅರಶಿಣ-ಕುಂಕುಮವನ್ನು ಚೆಲ್ಲಲಾಗಿತ್ತು. ಒಂದು ಕ್ಷಣಕ್ಕೆ ಆತನಿಗದು ಸ್ಮಶಾನದ ತರ ಕಂಡಿತ್ತು. ಆದರೆ ಯಾರಿಗೂ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ಮನೆಯಲ್ಲಿ ಒಂದು ಕ್ಷಣ ನಿಲ್ಲಲೂ ಆತನಿಗೆ ಆಗಲಿಲ್ಲ. ಸ್ವಲ್ಪ ಯೋಚಿಸಿ, ಪಕ್ಕದ ಸಂಬಂಧಿಕರ ಮನೆಯಾದ ಲಕ್ಷ್ಮತ್ತಿಗೆಯ ಮನೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ.

ಮಹಾದೇವ ಎಂಬುವವನು ಶಂಕರನ ದೂರದ ಸಂಬಂಧಿ, ಆತನ ಮೇಲೆ ದೆವ್ವ ಬರುತ್ತದೆ. ಅಣ್ಣನ ಹೆಂಡತಿಗೆ ಆರೋಗ್ಯ ಸರಿ ಇಲ್ಲದಾಗ ಇವನನ್ನೆ ಕರೆದು ದೆಯ್ಯ ನೋಡಿಸಿತ್ತು. ಆತನ ಸಲಹೆಯ ಮೇರೆಗೆ ಮನೆಯಲ್ಲಿ ಮಾಟ ಕೀಳಿಸುವ ವ್ಯವಸ್ತೆ ಮಾಡಲಾಗಿತ್ತು. ಶಂಕರನಿಗೆ ಇದಾವುದು ಸರಿ ಕಾಣದಿದ್ದರೂ ಆ ಪ್ರಕ್ರಿಯೆಯಲ್ಲಿದ್ದುಕೊಂಡೇ ಅದರ ರಹಸ್ಯವನ್ನು ಬೇಧಿಸಬೇಕಿತ್ತು. ಇಲ್ಲಿಯವರೆಗೂ ಬರಿ ಕೇಳಿ ತಿಳಿದಿದ್ದ ಮಾಟ ಮಂತ್ರಗಳ ವಿಷಯ ಈಗ ಆತನ ಕಣ್ಣೆದುರಿಗೇ ನಡೆಯುತ್ತಿತ್ತು. ಪ್ರತಿ ದಿನ ಪೂಜೆ, ಅಣ್ಣನ ಹೆಂಡತಿಯ ದೇಹದಲ್ಲಿ ಹೊಕ್ಕ ದೆವ್ವದ ಬಾಯಿ ಬಿಡಿಸುವ ಹೋರಾಟ, ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದ ನಿಂಬೆ ಹಣ್ಣು ಇನ್ನೆಲ್ಲಿಯೋ ಮಣ್ಣು ಅಗೆದಾಗ ಸಿಗುತ್ತಿತ್ತು. ದೆಯ್ಯ ಹೇಳಿದ ಮಾತುಗಳೆಲ್ಲವೂ ಸತ್ಯದಂತೆ ಕಾಣತೊಡಗಿತ್ತು. ನಾಲ್ಕು ದಿನದ ರಜೆಹಾಕಿ ಬಂದಿದ್ದ ಶಂಕರನಿಗೆ ದೆವ್ವದ ಹುಡುಕಾಟದಲ್ಲಿ ದಿನಗಳು ಕಳೆದದ್ದು ತಿಳಿಯಲೇ ಇಲ್ಲ. ದೆಯ್ಯ-ಮಾಟಗಳ ಆಟಕ್ಕೆ ಅಂತ್ಯ ಸಿಗಲಿಲ್ಲ ಆದರೆ ಶಂಕರ ಕಾರ್ಖಾನೆಯ ಕೆಲಸ ಕಳೆದುಕೊಂಡಿದ್ದ.

***
ಶಂಕರ ನಿದಾನವಾಗಿ ಬದಲಾಗುತ್ತಿದ್ದ. ಮಾಟ-ಮಂತ್ರ-ದೆವ್ವಗಳ ಸತ್ಯ ತಿಳಿಯದಿದ್ದರೂ ಯಾವುದೋ ಕಾಣದ ಶಕ್ತಿಯ ಕಡೆಗೆ ಅವನ ಮನ ವಾಲುತ್ತಿತ್ತು. ಮನೆಯವರೊಂದಿಗಿನ ಒಡನಾಟ ಕಡಿದುಕೊಂಡಿದ್ದ. ಕೂಡಿಟ್ಟ ಹಣವೆಲ್ಲ ಬರಿದಾಗಿತ್ತು. ಲಕ್ಷ್ಮತ್ತಿಗೆಯ ಋಣದಲ್ಲಿ ಎರಡು ಹೊತ್ತಿನ ಹಸಿವು ನೀಗುತ್ತಿತ್ತು. ಇಡೀ ಮೂವತ್ತು ವರ್ಷದಲ್ಲಿ ದೇವರ ತಲೆಯ ಮೇಲೆ ಒಂದು ಹೂವೂ ಏರಿಸದ ಈತ ಈಗ ದಿನವಿಡಿ ಹೂವಿಗಾಗಿ ಅಲೆಯುತ್ತಿದ್ದ. ದೀಪದ ಎದುರು ಗಂಟೆಗಟ್ಟಲೆ ಕುಳಿತು ಧ್ಯಾನಿಸುತ್ತಿದ್ದ. ಆತನ ಮನಸ್ಸು ಆತನ ಹಿಡಿತದಲ್ಲಿ ಇರಲಿಲ್ಲ. ಬದುಕಿಗೆ ಅರ್ಥವಿಲ್ಲ ಎಂದು ಚೀರಾಡುತ್ತಿದ್ದ. ಕೆಲವೊಮ್ಮೆ ಆತ್ಮ ಹತ್ಯೆಗೂ ಯತ್ನಿಸಿದ್ದ. ಹೀಗೆ ನಾಸ್ತಿಕನಾದ ಶಂಕರ ಆಸ್ತಿಕನಾಗಿ ಬದಲಾಗಿದ್ದ.

ಊರಿನವರೆಲ್ಲ ಆತನನ್ನ ಒಬ್ಬ ಹುಚ್ಚನಂತೆ ನೋಡತೊಡಗಿದ್ದರು. ಮನೆ, ಸಂಬಂಧ, ಕೆಲಸ ಎಲ್ಲವೂ ತೊರೆದಿದ್ದ ಶಂಕರನಿಗೆ ಇದ್ದಕ್ಕಿದ್ದಂತೆ ಪಂಡರಾಪುರಕ್ಕೆ ಹೋಗುವ ಯೋಚನೆ ಹೊಳೆದಿತ್ತು. ಇದಾದ ಹಲವು ತಿಂಗಳುಗಳ ನಂತರ ಶಂಕರ ಇದ್ದಕ್ಕಿದ್ದಂತೆ ಕಾಣೆಯಾದ. ಮನೆಯವರೆಲ್ಲರೂ ಆತನ ಹುಡುಕಾಟಕ್ಕೆ ಪ್ರಾರಂಭಿಸಿದರು. ಆದರೆ ಇಲ್ಲಿಯವರೆಗೂ ಆತನ ಸುಳಿವು ಯಾರಿಗೂ ತಿಳಿದಿಲ್ಲ. ಕೆಲವರು ಪಂಡರಾಪುರದ ಮಠದಲ್ಲಿ ಕೂದಲು ಬಿಟ್ಟುಕೊಂಡು ಸನ್ಯಾಸಿಯೊಂತೆ ಅಲೆದಾಡುತ್ತಿದ್ದಾನೆ ಎಂದು ಹೇಳಿದರೆ ಕೆಲವರು ಇತ್ತೀಚೆಗೆ ಊರಿನ ಆಚೆಗಿರುವ ಕೊಳದಲ್ಲಿ ಒಂದು ಹೆಣ ತೇಲುತ್ತಿತ್ತು ಅದರ ಮೇಲೆ ಆತ ಹಾಕಿಕೊಂಡ ಬಟ್ಟೆ ಇತ್ತು ಎಂದು ಹೇಳುತ್ತಾರೆ.

ಆದರೆ ಮಾಳವ್ವನಿಗೆ ಆತ ಮತ್ತೆ ಕೆಲಸ ಕೇಳಿಕೊಂಡು ಕಾರ್ಖಾನೆಗೆ ಹೋದ ವಿಷಯ ಮಾತ್ರ ತಿಳಿದಿದೆ.

***
ಮಾಳವ್ವ ಮೊಮ್ಮಗಳನ್ನು ಕರೆದು “ಯವ್ವಾ, ಸೆಂಜಿ ಆಯ್ತು, ಲಕ್ಷ್ಮತ್ತಿಗಿ ಕೆಲಸದಿಂದ ಬಂದಿರುಕೆ ಸಾಕು, ಸಣ್ಣ ಮಾವ ಬಂದವನ್ಯಾ ಅಂತ ಒಂದ್ ಸಲ ಕೇಳ್ಕಂಡ್ ಬಾರೆ” ಎಂದು ಕೇಳುತ್ತಾಳೆ.

“ನಿಂದೊಂದು ದಿನಾ ಇದೇ ರಾಗ ಆಯ್ತು, ಬಂದ್ರೆ ಮನಿಗೆ ಬರ್ದೆ ಹೋಯ್ತಾರಾ?” ಎಂದು ಮೊಮ್ಮಗಳು ಗೊಣಗಿದಳು.

ಮತ್ತೆ ಮಾಳವ್ವ ಎದುರು ಬೇಲಿಯ ಗೇಟಿನ ಕಡೆಗೆ ದೃಷ್ಠಿ ಹಾಯಿಸುತ್ತಾಳೆ.

ಮೌನ!

ಇದ್ದಂತಿಹುದು,
ಇಲ್ಲದಂತಿಹುದು
ನನ್ನ ನಿನ್ನ ಈ ಸಂಬಂಧ
ನೀನು ಮೌನದಲೇ ಹೆಚ್ಚು
ನನಗೀಗ ಮಾತಿನಲಿ ಹುಚ್ಚು

ತೋಳ ಮೇಲಿನ ಚಿತ್ತಾರ
ಕಪ್ಪು-ಕೆಂಪು
ಒಳ ಹೊರಗಿನ ಬಣ್ಣ ಬೇರೆ ಬೇರೆ
ನುಡಿಯೊಡೆಯಲು, ದನಿಗೂಡಲು
ಬಣ್ಣಗಳು ಇನ್ನೂ ಸೇರಿಲ್ಲ

ಬೀಸುವ ಗಾಳಿಯಲೂ
ಒಂದು ಮಾತಿಲ್ಲ
ಕಣ್ಣಗಲಿಸಿ, ಕಿವಿಯರಳಿಸಿ ಕಾದೆ
ಉತ್ತರಕ್ಕಾಗಿ-ಧಕ್ಷಿಣದೆಡೆಗೆ
ಕತ್ತಲೆಯಲಿ
ಮತ್ತದೇ ಮೌನ

ನಿನ್ನ ಮೌನ
ಮಾತಾಗುವ ವೇಳೆಗೆ
ಕಾದು, ಅರೆಬೆಂದು ನಿಡುಸುಯ್ಯುವ
ಕಳೇಬರ ನಾನು

ಜೀವನಾದರ್ಶ

ಅವರ ಹೆಸರು ಸಂಕಯ್ಯ. ಅವರ ತಾಯಿ ಅವರನ್ನ ‘ಮೂಕ ಬಸವಣ್ಣ’ ಅಥವಾ ‘ಬೊಳೇ ಶಂಕರ’ ಅಂತ ಕರೀತಿದ್ರು. ಯಾಕೇಂದ್ರೆ ಈ ವ್ಯಕ್ತಿ ತನಗೋಸ್ಕರ ಯಾವುದೇ ಆಸ್ತಿಯನ್ನೂ, ಹಣ ಸಂಗ್ರಹವನ್ನೂ ಮಾಡಿರಲಿಲ್ಲ. ತನ್ನಲ್ಲಿದ್ದ ಅಲ್ಪ ಸ್ವಲ್ಪ ಹಣವನ್ನ, ಆಸ್ತಿಯನ್ನ ಮಕ್ಕಳ ಶಿಕ್ಷಣಕ್ಕೆ ವಿನಿಯೋಗ ಮಾಡಿದ್ರು ಅಥವಾ ಬೇರೆಯವರಿಗೆ ದಾನವಾಗಿ ಕೊಟ್ಟಿದ್ರು. ಇದಕ್ಕೆ ಪ್ರತಿಯಾಗಿ ಯಾವುದೇ ನಿರೀಕ್ಷೆ ಅವರಲ್ಲಿ ಇರಲಿಲ್ಲ. ಹೆಂಡತಿ ಅಥವಾ ತಾಯಿ ಈ ಬಗ್ಗೆ ಮಾತು ಎತ್ತಿದರೆ ಸುಮ್ಮನೆ ನಕ್ಕು ಮಾತಿಗೆ ವಿರಾಮ ಹಾಕುತ್ತಿದ್ದರು.

ಒಂದು ದೊಡ್ಡ ಸ್ಟೀಲ್ ಲೋಟದಲ್ಲಿ ನಾಲ್ಕು ಹೊತ್ತು ಚಹಾ ಕುಡಿಯೋದು, ಬಾಯಿತುಂಬ ಎಲೆ ಅಡಿಕೆ ಜಗಿಯೋದು, ಸಂಜೆ ಒಂದಷ್ಟು ಸಾರಾಯಿ ಕುಡಿಯುವುದು ಮತ್ತು ಗಣೇಶ ಬೀಡಿ ಎಳೆಯೋದು ಬಿಟ್ಟರೆ ಆವರಿಗೆ ಬೇರೆ ಯಾವುದೇ ಹವ್ಯಾಸಗಳಿರಲಿಲ್ಲ.

ಅವರು ಹೆಚ್ಚು ಮಾತಾಡ್ತಾ ಇದ್ದಿದ್ದು ಮಕ್ಕಳ ಜೊತೆ ಮಾತ್ರ, ಅದು ಯಾವತ್ತೂ ಬರಿ ಬಾಯಲ್ಲಿ ಮಾತಾಡ್ತಿರಲಿಲ್ಲ. ತನ್ನ ಹೆಗಲಿಗೆ ಸಿಕ್ಕಿಸಿದ್ದ ಟವೆಲ್‍ನ ಒಂದು ತುದಿಗೆ ಕಟ್ಟಿದ್ದ ಚೌಚೌ ಬಾತ್ ಅಥವಾ ಪೆಪ್ಪರ್‍ಮೆಂಟು ಕೊಟ್ಟಿಯೇ ಮಕ್ಕಳನ್ನು ಮಾತಾಡಿಸುವುದು. ಮಕ್ಕಳು ಎಂದಾಗ ಅವರಿಗೆ ತನ್ನ ಮಕ್ಕಳು ಮತ್ತು ಇತರ ಮನೆಯ ಮಕ್ಕಳಿಗೂ ಬೆಧ ಇರಲಿಲ್ಲ. ಅಕ್ಕ ಪಕ್ಕದ ಮನೆಯ ಮಕ್ಕಳನ್ನು ಒಟ್ಟು ಹಾಕಿ ಆಡಿಸುವುದು, ಊಟ ಮಾಡಿಸುವುದು ಅವರಿಗೆ ಬಹಳ ಸಂತೋಷ ಕೊಡುವ ವಿಷಯ. ಈ ಸಂಪ್ರದಾಯ ಈಗಲೂ ಆ ಮನೆಯಲ್ಲಿ ಮುಂದುವರಿದಿದೆ.

ಶಾಲೆಯ ಮೆಟ್ಟಿಲು ಹತ್ತದ ಇವರಿಗೆ ಶಿಕ್ಷಣ ಎಂದರೆ ಎಲ್ಲಿಲ್ಲದ ಆಸಕ್ತಿ. ಬಡತನದ ಕಾರಣದಿಂದ ತನ್ನ ಏಳನೇ ವಯಸ್ಸಿನಲ್ಲಿ ಹೊಟೆಲ್ ಒಂದರಲ್ಲಿ ಸಪ್ಲಾಯರ್ ಆಗಿ ಕೆಲಸಕ್ಕೆ ಸೇರ್ತಾರೆ. ಆ ಹೊಟೆಲ್ ಮಾಲಿಕನಿಗೆ ಇವರ ಕೆಲಸದ ಮೇಲೆ ಬಹಳ ಪ್ರೀತಿ. ಮಾಲಿಕರು ಪ್ರತಿ ದಿನದ ಕೆಲಸ ಮುಗಿದ ಮೇಲೆ ರಾತ್ರಿ ಸಂಕಯ್ಯನಿಗೆ ಲೆಕ್ಕ ಹೆಳಿಕೊಡುವುದು, ಅಕ್ಷರಗಳ ಪರಿಚಯ ಮಾಡಿಸುವುದು ಮತ್ತು ಕೊಂಕಣಿ ಭಾಷೆಯಲ್ಲಿ ಮಾತನಾಡಿಸುವುದನ್ನು ಮಾಡುತ್ತಿದ್ದರು. ಇದರಿಂದ ಸಂಕಯ್ಯನಿಗೆ ಲೆಕ್ಕ ಬಿಡಿಸುವುದು, ಕನ್ನಡ ಓದು-ಬರಹ, ಹಿಂದಿ ಮತ್ತು ಕೊಂಕಣಿ ಭಾಷೆಯಲ್ಲಿ ಮಾತನಾಡುವುದು ಮತ್ತು ಕೆಲವು ಇಂಗ್ಲೀಷ್ ಅಕ್ಷರಗಳನ್ನು ಓದುವುದು ರೂಢಿಯಾಯಿತು.

ಮುಂದೆ ಅಡಿಕೆ ಮಂಡಿಯಲ್ಲಿ ಹಮಾಲಿಯಾಗಿ ಕೆಲಸಕ್ಕೆ ಸೇರಿದಾಗ ಅವರ ನಿಷ್ಠ ಲೆಕ್ಕಾಚಾರ ಮತ್ತು ಓದು ಬರಹದ ಹಿನ್ನೆಲೆಯಲ್ಲಿ ಅವರಿಗೆ ತೂಕ ಮತ್ತು ಕಾಠ ಮಾಡುವ ಕೆಲಸಕ್ಕೆ ನೇಮಿಸುತ್ತಾರೆ.

ಒಮ್ಮೆ ಅವರ ಮಾವ ತನ್ನ ಕೊನೆಯ ಮಗಳನ್ನ ಮುಂದೆ ಓದುವುದು ಬೇಡ, ನಿನಗೆ ಮದುವೆ ಮಾಡುತ್ತೇನೆ ಅಂದಾಗ, ಅವರ ಜೊತೆ ಜಗಳವಾಡಿ ನಾದಿನಿಯನ್ನ ತನ್ನ ಮನೆಗೆ ಕರೆತಂದು, ಓದಿಸಿ ಅವರು ಮುಂದೆ ಒಬ್ಬ ಶಿಕ್ಷಕಿಯಾಗೋ ಹಾಗೆ ಮಾಡ್ತಾರೆ. ದಿನದ ಅವಧಿಗಿಂತ ಹೆಚ್ಚುವರಿ ಕೆಲಸ ಮಾಡಿ ಅದರಿಂದ ಬಂದ ಹಣದಿಂದ ಮಕ್ಕಳಿಗೆ ಬೇಕಾದ ಸಮವಸ್ತ್ರ, ಪಠ್ಯ ಪುಸ್ತಕ ಹಾಗು ಇತರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಅವರ ಆಸೆ ಇದ್ದದ್ದು ತನ್ನ ಮಕ್ಕಳನ್ನು ಓದಿಸಿ ಒಳ್ಳೆಯ ಹುದ್ದೆಯಲ್ಲಿ ಅವರನ್ನ ನೋಡಬೇಕು ಅನ್ನುವದು. ಮಕ್ಕಳು ಬೇಗ ಎದ್ದು ಓದಬೇಕು, ಸಮಯ ಸರಿಯಾಗಿ ಅರ್ಥ ಅಗಬೇಕು ಅಂತ ಕೂಡಿಟ್ಟ ಹಣದಲ್ಲಿ ಮೊದಲನೇ ಬಾರಿಗೆ ಮನೆಗೆ ಒಂದು ಅಲಾರಾಮ್ ತಂದಿದ್ರು.

ಇವರಲ್ಲಿದ್ದ ಇನ್ನೊಂದು ಗುಣವೇ ಹಿರಿಯರಿಗೆ ಸಹಾಯ ಮಾಡುವುದು. ಹಿರಿಯರು ಅಥವಾ ಭಿಕ್ಷುಕರು ಮನೆಗೆ ಬಂದರೆ ಅವರಿಗೆ ಊಟ ನೀಡುವುದು, ಅವರ ಕಟಿಂಗ್ ಮತ್ತು ದಾಡಿಗೆ ಹಣ ಕೊಡುವುದು, ಚಪ್ಪಲಿ ಮತ್ತು ಚತ್ರಿ ಖರೀದಿಸಲು ಹಣ ಕೊಡುವುದು, ಮೈ ಒತ್ತಿ ಕೊಡುವುದು ಇತ್ಯಾದಿ ಅವರಿಗೆ ಬಹು ಇಷ್ಟದ ಕೆಲಸ. ಇವರು ಈ ಸಹಾಯಕ್ಕೆ ಪ್ರತಿಯಾಗಿ ಯಾವುದೇ ಕ್ರೆಡಿಟ್ ತೆಗೆದುಕೊಂಡವರಲ್ಲ.

ಅಡಿಕೆ ಮಂಡಿಯಲ್ಲಿ ಹಮಾಲಿಗೆ ಸೇರುವುದಕ್ಕೆ ಮುನ್ನ ಹಮಾಲರ ಬಿಡಾರದಲ್ಲಿ ಅಡುಗೆ ಮಾಡೋ ಕೆಲಸಕ್ಕೆ ಸೆರ್ಕೊಂಡಿದ್ರು ಹಾಗಾಗಿ ಅವರಿಗೆ ಎಲ್ಲಾ ತರಹದ ಅಡುಗೆ ಮಾಡೋಕೆ ಬರ್ತಿತ್ತು. ಮುಂದೆ ಮದುವೆ ಆದ ಮೇಲೆಯೂ ಕೂಡ ಹೆಂಡತಿಗೆ ಅಡುಗೆ ಮಾಡಲು ಸಹಾಯ ಮಾಡ್ತಾ ಇದ್ರು. ಮ್ಕಳಿಗೆ ತಲೆ ಬಾಚೋದು, ಊಟ ಮಾಡಿಸೋದು, ಮಸಾಲೆ ರುಬ್ಬುವುದು, ದೂರದ ಕೊಳಾಯಿಯಿಂದ ನೀರು ತರುವುದು ಹೀಗೆ ತನ್ನ ಕೆಲಸದ ಜೊತೆಗೆ ಮನೆಯ ಎಲ್ಲಾ ಕೆಲಸದಲ್ಲೂ ಹೆಂಡತಿಯೊಂದಿಗೆ ಕೈಜೋಡಿಸ್ತಿದ್ರು. ಪ್ರತಿ ಭಾನುವಾರದ ಮೀನು ಪದಾರ್ಥ ಇವರ ಕೈಯಿಂದಲೇ ಆಗಬೇಕು.

ಇವರು ತುಂಬಾ ಸ್ವಾಭಿಮಾನಿ. ಬೇರೆಯವರ ಹಣಕ್ಕೆ ಆಸೆಪಟ್ಟವರಲ್ಲ, ಋಣಕ್ಕೆ ಬಿದ್ದವರಲ್ಲ ಅಥವಾ ಶ್ರಮ ಇಲ್ಲದ ತುತ್ತು ತಿಂದವರಲ್ಲ. ಇವರು ಯಾವತ್ತೂ ಹೆಳ್ತಾ ಇದ್ದದ್ದು ಒಂದೇ ಮಾತು ‘ಶ್ರಮ ಇಲ್ಲದೆ ಪಡೆವ ತುತ್ತು ಭಿಕ್ಷೆಗೆ ಸಮಾನ’ ಎಂದು. ಹಾಗಾಗಿ ಇವರಿಗೆ ತಾನು ಮಾಡುವ ಕೆಲಸದಲ್ಲಿ ಸಾಕಷ್ಟು ಪ್ರೀತಿ ಮತ್ತು ನೀಯತ್ತು.

ಇವರು ತನ್ನ ಯಾವುದೇ ಕಷ್ಟ, ನೋವನ್ನ ಇನ್ನೊಬ್ಬರೊಂದಿಗೆ ಹಂಚಿಕೊಂಡವರಲ್ಲ, ಯಾರ ಸಹಾಯವನ್ನೂ ಬೇಡಿದವರಲ್ಲ. ತನ್ನ ಮಿತಿಯೊಳಗೆ ಬರುವ ಎಲ್ಲ ಕೆಲಸಗಳನ್ನು ನಿಭಾಯಿಸುವ ಜಾಣ್ಮೆ ಅವರಲ್ಲಿತ್ತು. ಸಪ್ಲಾಯರ್ ಅಗಿ, ಅಡುಗೆ ಭಟ್ಟನಾಗಿ, ಮೀನುಗಾರನಾಗಿ, ಹಮಾಲಿಯಾಗಿ, ಲಾರಿ ಕ್ಲೀನರ್ ಆಗಿ, ಲೆಕ್ಕಿಗನಾಗಿ ಗಳಿಸಿದ ಜೀವನಾನುಭವಗಳನ್ನು ತನ್ನ ಸಂಸಾರದೊಂದಿಗೆ ಅಳವಡಿಸಿಕೊಂಡು ಪೂರ್ಣ ಜೀವನ ನಡೆಸಿದ ಒಬ್ಬ ಆದರ್ಶ ವ್ಯಕ್ತಿ ಇವರು.

ಜೀವನ ಪೂರ್ತಿ ಅಡಿಕೆ ಮಂಡಿಯಲ್ಲಿ ತನ್ನ ಕಾಲುಗಳನ್ನು ಜೀತಕ್ಕಿಟ್ಟ ಇವರು ತಮ್ಮ ಜೀವನ ಪಯಣವನ್ನು ಮುಗಿಸಿದ್ದು ಈ ಅಡಿಕೆ ಮಂಡಿಯಲ್ಲಿಯೇ.

ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ರು, ಯಾರಿಗೂ ಕಾಯದೆ.

Tuesday, 8 October 2013

ನನ್ನ ಅಡಿಕೆ ಲೆಕ್ಕಾಚಾರ

ಶಾಲೆಯ ನಾಲ್ಕು ಗೋಡೆಯ ಸೀಮಿತ, ರಚನಾತ್ಮಕ ವಿಷಯ ಬೋಧನೆಗಿಂತ ಮಿಗಿಲಾಗಿ ಶಾಲೆಯ ಹೊರಗಿನ ವಾತಾವರಣದಲ್ಲಿ ಕಲಿಕೆ ಹೆಚ್ಚಾಗುತ್ತದೆ. ಇದಕ್ಕೆ ಪುಷ್ಠಿ ಕೊಡುವ ಹಲವು ನಿದರ್ಶನಗಳು ಪ್ರತಿಯೊಬ್ಬರ ಜೀವನದಲ್ಲೂ ಇರಬಹುದು. 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಕೂಡ ಸತ್ವ ಪಡೆದುಕೊಳ್ಳುವುದು ಈ ವಿಚಾರ ಸಾರದಿಂದಲೆ. ಈ ಹಿನ್ನೆಲೆಯಿಂದ ಗಣಿತ ವಿಷಯಕ್ಕೆ ಸಂಬಂಧಿಸಿದ ನನ್ನ ಶಾಲಾ ಜೀವನವನ್ನು ಅವಲೋಕಿಸಿದರೆ, ಶಾಲೆಯ ನಾಲ್ಕು ಗೋಡೆಯ ಒಳಗೆ ಕಲಿಸಿದ ಗಣಿತ ನನ್ನ ತಲೆಯೊಳಗೆ ಹೊಗದಿದ್ದುದಕ್ಕೆ ನನ್ನಲ್ಲಿ ಕಾರಣಗಳಿಲ್ಲ. ಆದರೆ ಶಾಲೆಯ ಹೊರಗಿನ ವಾತಾವರಣದಲ್ಲಿ ಕಲಿತ ಲೆಕ್ಕಾಚಾರ ಅಥವಾ ಗಣಿತ ನನ್ನ ಜೀವನವನ್ನು ರೂಪಿಸುವಲ್ಲಿ ನನ್ನನ್ನು ಔದ್ಯೋಗಿಕವಾಗಿ ಬಲಗೊಳಿಸುವಲ್ಲಿ ಸಹಾಯಕವಾಯಿತು.

ಅಪ್ರಸ್ತುತವಾದರೂ ಸಾಂದರ್ಭಿಕ ನೆಲೆಗಟ್ಟಿನಿಂದ ಹೇಳುವುದಾದರೆ, ನನ್ನ ತಂದೆ ಒಂದು ಅಡಿಕೆ ಮಂಡಿಯಲ್ಲಿ (ವಕಾರಿ) ದಿನಗೂಲಿ ನೌಕರ. ಮಂಡಿಗೆ ಅಡಿಕೆ ವಿಲೇವಾರಿಗೆ ಬರುವ ರೈತರು, ವ್ಯಾಪಾರಸ್ತರು ಅಪ್ಪನ ಕವಳದ ಚಂಚಿಗೆ (ಎಲೆ ಅಡಿಕೆ ಚೀಲ) ಕೈಹಾಕುತ್ತಿದ್ದುದು ಸಾಮಾನ್ಯ. ತಾಂಬೂಲದ ರಸಸ್ವಾದದ ಜೊತೆ ನಡೆದ ಮಾತುಕತೆಯ ನಂತರ ತಾವು ತಂದ ಅಡಿಕೆ ಚೀಲದಿಂದ ಒಂದಷ್ಟು ಅಡಿಕೆಗಳನ್ನು ತಂದೆಯವರ ಕೈಗೆ ಕೊಟ್ಟು ಋಣಮುಕ್ತರಾಗುವುದು ಅವರ ವಾಡಿಕೆ. ಬರುವ ತಿಂಗಳ ಸಂಬಳದಲ್ಲಿ ನಾಲ್ಕು ಜನ ಮಕ್ಕಳ ಜೊತೆ ಇಡೀ ಸಂಸಾರ ನಿಭಾಯಿಸಲು ಸಾದ್ಯವಾಗದ, ಬಲು ಕಷ್ಟದ ಸಂದರ್ಭವದು. ಹೀಗೆ ಪ್ರತಿದಿನ ಮಂಡಿಗೆ ಬರುವ ವ್ಯಾಪಾರಸ್ತರು ನೀಡಿದ ಅಡಿಕೆಯ ಮೊತ್ತವನ್ನು ವಾರದ ಕೊನೆ, ಅಂದರೆ ಭಾನುವಾರದಂದು ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರÀ ತೂಗಿಸುವುದು ತಂದೆಯ ಉಪವೃತ್ತಿಯಾಗಿತ್ತು.

ಈ ಮೇಲಿನ ಪೀಠಿಕೆಯ ಉದ್ದೇಶ ಅಡಿಕೆ ಮಂಡಿಗೂ ಹಾಗೂ ನನ್ನ ಲೆಕ್ಕಾಚಾರಕ್ಕೂ ಇರುವ ಸಂಬಂಧವನ್ನು ನಿರೂಪಿಸುವುದು. ಪ್ರತಿ ಶನಿವಾರ ಶಾಲೆಗೆ ಒಪ್ಪತ್ತು (ಅರ್ಧದಿನ), ಇನ್ನುಳಿದ ಅರ್ಧದಿನ ನಾನಿರುತ್ತಿದ್ದುದು ಅಪ್ಪ ಕೆಲಸ ಮಾಡುವ ಅಡಿಕೆ ಮಂಡಿಯಲ್ಲಿ. ಮಂಡಿಯಲ್ಲಿ ಅಪ್ಪನ ಕೆಲಸ ವ್ಯಾಪಾರಸ್ತರು ತಂದ ಅಡಿಕೆ ಚೀಲಗಳನ್ನು ಕಾಟದ (ತಕ್ಕಡಿ) ಮೇಲಿಟ್ಟು ಅದರ ತೂಕವನ್ನು ಬರೆದುಕೊಳ್ಳುವುದು ಮತ್ತು ಬೆಲೆಯನ್ನು ನಿಗದಿಪಡಿಸುವುದು. ಅಪ್ಪನ ಜೊತೆಯಲ್ಲಿ ನಾನೂ ಕೂಡ ತೂಕ ಸರಿಪಡಿಸುವುದಕ್ಕಾಗಿ ಚೀಲಕ್ಕೆ ಅಡಿಕೆಯನ್ನು ಸೇರಿಸುವ ಹಾಗೂ ತೆಗೆಯುವ (ಸಂಕಲನ ಮತ್ತು ವ್ಯವಕಲನ) ಕೆಲಸವನ್ನು ನಿಭಾಯಿಸುತ್ತಿದ್ದೆ. ಮಂಡಿಯಲ್ಲಿ ಅಡಿಕೆಗಳೊಂದಿಗೆ ಆಡುವುದೆಂದರೆ ನನಗೆ ಬಲು ಮೋಜು. ಅಡಿಕೆಗಳನ್ನು ಎಣಿಸುವುದು, ಎಷ್ಟು ಅಡಿಕೆಗಳನ್ನು ಸೇರಿಸಿದರೆ 10 ಗ್ರಾಂ ಅಗುತ್ತದೆ, ಎಷ್ಟು ಅಡಿಕೆಗಳನ್ನು ಸೇರಿಸಿದರೆ 1 ಕಿಲೋ ಆಗುತ್ತದೆ ಎಂದು ಬರೆದುಕೊಳ್ಳುವುದು, ಇವೆಲ್ಲವೂ ಆ ಅಟಗಳಲ್ಲಿ ನನಗೆ ಗೊತ್ತಿಲ್ಲದೆ ಸೇರಿಕೊಂಡಿದ್ದ ಗಣಿತ ಕ್ರಿಯೆಗಳಾಗಿದ್ದವು. ನನಗೆ ಗ್ರಾಂ, ಕಿಲೊ ಗ್ರಾಂ, ಕ್ವಿಂಟಾಲು ಹಾಗೂ ಟನ್‍ಗಳ ಪರಿಚಯವಾದದ್ದು ಆ ಅಡಿಕೆ ಮಂಡಿಯಲ್ಲಿ.

ಅಲ್ಲದೆ ಅಪ್ಪನ ಜೊತೆಯಲ್ಲಿ ಭಾನುವಾರ ಅಡಿಕೆ ಮಾರಲು ಹೋಗುವಾಗ ನಾನೂ ಹೋಗುತ್ತಿದ್ದೆ. ಅಪ್ಪನಿಗೆ ಮಂಡಿಯಲ್ಲಿ ತೂಕ ಹಾಗೂ ಬೆಲೆಯ ಜ್ಞಾನ ಇದ್ದುದರಿಂದ ಪೇಟೆಯ ಅಡಿಕೆ ಮಂಡಿಗಳಲ್ಲಿ ಸರಿಯಾದ ಚೌಕಾಶಿ ಮಾಡಿ ಸಮ ಪ್ರಮಾಣದ ಲಾಭ ಪಡೆಯುತ್ತಿದ್ದರು. ಇದು ನನಗೆ ವ್ಯವಹಾರ ಜ್ಞಾನ ಅರ್ಥ ಮಾಡಿಕೊಳ್ಳಲು ಸಾದ್ಯವಾಯಿತು. ಶಾಲೆಯನ್ನೇ ಕಲಿಯದೆ ಬರಿ ವ್ಯವಹಾರ ಜ್ಞಾನ ಹಾಗೂ ಅನುಭವದಿಂದ ವ್ಯಾಪಾರದಲ್ಲಿ ಪರಿಣಿತಿ ಪಡೆದ ತಂದೆಯ ಪ್ರವೃತ್ತಿ ನನ್ನಲ್ಲಿ ಬೆಳೆದದ್ದು ಆಶ್ಚರ್ಯವಲ್ಲ. ಬಹುಶಹ ಈ ಕಾರಣದಿಂದಲೆ ಶಾಲೆಯಲ್ಲಿ ಕಲಿಸುವ ಯಾವುದೇ ಗಣಿತದ ನಿಯಮಗಳು ನನಗೆ ಆಸಕ್ತಿ ಮೂಡಿಸುತ್ತಿರಲಿಲ್ಲ. ಹಾಗಾಗಿ ನಾನು ಶಾಲೆಯ ಗಣಿತ ಪರೀಕ್ಷೆಯಲ್ಲಿ 15ಕ್ಕಿಂತ (ಒಟ್ಟು ಅಂಕ 25) ಹೆಚ್ಚು ಅಂಕ ಗಳಿಸಿದ ದಾಖಲೆಯೂ ಇಲ್ಲ. ಗಣಿತ ಶಿಕ್ಷಕರ ಹೊಡೆತಕ್ಕೆ ಮೈಮೇಲೆ ಬರೆಗಳೆದ್ದರೂ ಈ ಚರ್ಮಕ್ಕೆ ಆ ವಿಷಯಕ್ಕೆ ಮರ್ಯಾದೆ ಕೊಡುವ ಸಂವೇದನೆ ಇರಲಿಲ್ಲ. ಆದರೆ ಅಪ್ಪ ಪ್ರತಿ ದಿನ ತರುವ ಚಿಲ್ಲರೆಗಳನ್ನು ಎಣಿಸುವ, ಅಮ್ಮ ಕೊಡಿಸಿದ್ದ ಮಡಿಕೆ ಹುಂಡಿಯಲ್ಲಿ ನಾಕಾಣೆ, ಎಂಟಾಣೆ ನಾಣ್ಯ ಕೂಡಿಡುವ ವ್ಯವಹಾರ ಅಚ್ಚುಕಟ್ಟಾಗಿತ್ತು. ಹಾಗೂ ಹೀಗೂ ಅಂಬೆಗಾಲಿಡುತ್ತ ಎಸ್.ಎಸ್.ಎಲ್.ಸಿ ಪಾಸಾದಾಗ ಬಹಳ ಸಂತೋಷ ಪಟ್ಟಿದ್ದೆ. ಇನ್ನು ಮುಂದೆ ಗಣಿತ ವಿಷಯ ನನ್ನ ಜೀವನದಲ್ಲೇ ಬರಲಿಕ್ಕಿಲ್ಲ ಎಂದು ಕಲಾ ವಿಭಾಗವನ್ನು ಆಯ್ದುಕೊಂಡೆ.

ಅಲ್ಲೊಂದು ಆಶ್ಚರ್ಯ!! ಇತರ ವಿಷಯಗಳೊಂದಿಗೆ ಕಲಾ ವಿಭಾಗದಲ್ಲಿ ನಾನು ಆಯ್ದುಕೊಂಡ ಮತ್ತೊಂದು ವಿಷಯ ಅರ್ಥಶಾಸ್ತ್ರ. ಈ ವಿಷಯ ತನ್ನನ್ನು ಅನಾವರಣಗೊಳಿಸಕೊಳ್ಳುತ್ತಾ ಹೋಗುವಾಗ ನನಗೆ ಅರ್ಥವಾದದ್ದು, ಅರ್ಥಶಾಸ್ತ್ರಕ್ಕೆ ಕೊಡುಗೆಯನ್ನು ನೀಡಿದ ಎಲ್ಲಾ ಅರ್ಥಶಾಸ್ತ್ರಜ್ಞರೂ ಪ್ರಸಿದ್ಧ ಗಣಿತ ಶಾಸ್ತ್ರಜ್ಞರು ಎಂದು. ಇಲ್ಲಿ ಸಿದ್ಧಾಂತಗಳ ಜೊತೆಯಲ್ಲಿ ಸಂಖ್ಯಾಶಾಸ್ತ್ರದ ಕೆಲವು ಲೆಕ್ಕಾಚಾರ ಮಾಡಬೇಕಿತ್ತು. ಆದರೆ ಇಲ್ಲಿ ನನ್ನ ಜೀವನವನ್ನು ಸುಲಭಗೊಳಿಸಿದ್ದು ನಾನು ಈ ಹಿಂದೆ ತಂದೆಯೊಂದಿಗೆ ಕಳೆದ ಅಡಿಕೆ ಮಂಡಿಯ ಹಾಗೂ ಮಾರುಕಟ್ಟೆ ಸುತ್ತಿ ಪಡೆದ ವ್ಯವಹಾರ ಅನುಭವಗಳು. ಬೇಡಿಕೆ-ಪೂರೈಕೆ, ಏಕಸ್ವಾಮ್ಯ-ದ್ವೀಸ್ವಾಮ್ಯ ಮಾರುಕಟ್ಟೆ, ಮುಕ್ತ ಮಾರುಕಟ್ಟೆ, ಬೆಲೆ ನಿರ್ಧಾರ, ಅಂತರರಾಷ್ಟ್ರೀಯ ವ್ಯಾಪಾರ ಹೀಗೆ ಅರ್ಥಶಾಸ್ತ್ರದ ಈ ಎಲ್ಲಾ ಸಿದ್ಧಾಂತಗಳ ಹಿಂದಿನ ಸಾಮಾನ್ಯ ಜ್ಞಾನ ನಾನು ಶಾಲೆಯ ಹೊರಗೆ ಮಂಡಿಯಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಕಲಿತ ಅನುಭವಗಳೆ ಆಗಿದ್ದವು.

ಒಂದು ಅರ್ಥದಲ್ಲಿ ನನಗೆ ಗಣಿತದಲ್ಲಿ ಸ್ವಲ್ಪ ಆಸಕ್ತಿ ಮೂಡಿಸಿದ್ದು ಅರ್ಥಶಾಸ್ತ್ರ. ಅಭಿವೃದ್ಧಿ ಅರ್ಥಶಾಸ್ತ್ರದ ಅಭಿವೃದ್ಧಿ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ ಹಾಗು ಬಡತನ ಸೂಚ್ಯಂಕಗಳನ್ನು ಮಾಪನ ಮಾಡುವಾಗ ಸಮೀಕರಣಗಳನ್ನು ಬಳಸಿ ತುಲನಾತ್ಮಕವಾಗಿ ವಿಶ್ಲೇಷಿಸುವ ವಿಧಾನ ನನ್ನನ್ನು ಹೆಚ್ಚು ಆಕರ್ಷಿಸಿತು. ಇಲ್ಲಿ ಜೀವನಕ್ಕೆ ಹತ್ತಿರವಾದ ಬಡತನದ ಸತ್ಯತೆ ಮತ್ತು ಕಾರಣ, ವ್ಯವಹಾರದ ರೂಪ ರೇಶೆಗಳು, ಆಸೆ, ಸಂಪನ್ಮೂಲ ಇವೆಲ್ಲವುಗಳನ್ನೂ ಸಂಖ್ಯೆಗಳ ಮೂಲಕ ನಿರೂಪಿಸುವ ವಿಧಾನ ಮುಂದಿನ ದಿಕ್ಕನ್ನು ಬದಲಾಯಿಸಿತು. ಇವೆಲ್ಲವೂ ನಾನು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಅತ್ಯಂತ ಕ್ಷಿಷ್ಟ ವಿಷಯಗಳಾದ ಇಕನಾಮಿಟ್ರಿಕ್ಸ್ ಹಾಗೂ ಟೈಮ್ ಸೀರಿಸ್ ಅನ್ನು ಪಾಸುಮಾಡಲು ಸಹಾಯಕವಾದವು.

ಹೀಗೆ ನನ್ನ ಲೆಕ್ಕಾಚಾರ ತಲೆಕೆಳಗಾಗಿ ಕೊನೆಯಲ್ಲಿ ಕೆಲಸಮಾಡಬೇಕಾಗಿ ಬಂದದ್ದು ಒಂದು ಸಂಶೋಧನಾ ಸಂಸ್ಥೆಯಲ್ಲಿ. ಇಲ್ಲಿಯೂ ಕೂಡ ನನಗೆ ಸಿಕ್ಕಿದ್ದು ಅಂಕಿಗಳನ್ನು ಸಂಗ್ರಹಿಸುವ ಮತ್ತು ಅದನ್ನು ವಿಶ್ಲೇಷಿಸುವ ಕೆಲವೇ. ದಾರಿಯುದ್ದಕ್ಕೂ ಬೇಡ ಎಂದು ಬಂದ ಈ ಲೆಕ್ಕಾಚಾರವೇ ಕೊನೆಗೆ ನನ್ನ ಕೈ ಹಿಡಿದದ್ದು, ಬದುಕನ್ನು ರೂಪಿಸಿದ್ದು. ಶಾಲೆಯಲ್ಲಿ ಗಣಿತ ಕಲಿಯದಿದ್ದರೂ ನನ್ನ ಜೀವನಾನುಭವ ಹಾಗೂ ಅರ್ಥಶಾಸ್ತ್ರ ನನಗೆ ಮುಂದೆ ಅದರ ಮೇಲೆ ಪ್ರೀತಿ ಬರಲು ಮತ್ತು ಕಲಿಯಲು ಪ್ರೇರೇಪಿಸಿದ್ದು.

ಈ ನನ್ನ ಅನುಭವದಂತೆಯೇ ಇಂದಿನ ನಮ್ಮ ಶಾಲೆಗಳಲ್ಲಿನ ಮಕ್ಕಳಿಗೂ ಆಗಿರಬಹುದು. ಅವರ ಇಂದಿನ ಶಾಲೆಯಾಚೆಗಿನ ಅನುಭವಗಳು ಮುಂದೊಂದು ದಿನ ಬದುಕಿಗೆ ದಾರಿತೋರಿಸಬಹುದಲ್ಲವೆ???

ಪಾತಿ-ಸಂಕು

ಸಾಯಂಕಾಲ 8ರ ಸಮಯ, ಸಣ್ಣ ಪುಶ್ಯ ಮಳೆ ಜೋರಾಗಿ ಸುರಿತಾ ಇದೆ. ಮನೆಯ ಸೋಗೆ ಹೊದಿಸಲು ಪುಶ್ಯನ ರಭಸಕ್ಕೆ ಈಡಾಗಿ ಜಿನಿ ಜಿನಿ ಸೋರುತ್ತಿದೆ. ಬೀಸೊ ಗಾಳಿ ಸುತ್ತಲೂ ಕಟ್ಟಿದ ಗೋಣಿ ತಾಟನ್ನು ಸೀಳಿಕೊಂಡು ಒಳಗೆ ನುಗ್ಗುತ್ತಿದೆ, ಗೋಣಿ ತಾಟು ಪಟ ಪಟನೆ ಬಡಿದುಕೊಳ್ಳತ್ತಿದೆ. ಮನೆಯ ಒಂದು ಮೂಲೆಯಲ್ಲಿ, ಗೊಬ್ಬರದ ಚೀಲದೊಳಗಿನ, ಗೋಣಿ ತಾಟಿನ ಬೆಚ್ಚನೆ ಹೊದಿಕೆಯೊಳಗಿಂದ ಆರು ಕಣ್ಣುಗಳು ಪಿಳಿ ಪಿಳಿ ನೋಡುತ್ತಿವೆ. ಮಿಂಚು ಬಂದು ಹೊಳೆದಾಗೆಲ್ಲಾ ಆ ಕಣ್ಣುಗಳು ದಾರಿಯತ್ತ ತಿರುಗುತ್ತವೆ....ಯಾರೋ ಬರಬಹುದು....ಅಮ್ಮ ಅಥವಾ ಅಪ್ಪ....ಗುಡುಗಿನ ಸದ್ದಿಗೆ ಆಗಾಗ ಎದೆಯಲ್ಲಿ ಸಣ್ಣ ಕಂಪನ...ಕಣ್ಣುಗಳು ಕಾಯುತ್ತಿವೆ....ಮೂಗು ಅರಳಿದೆ, ಎರಡು ತಟ್ಟೆ ಚೌ ಚೌ ಬಾತಿನ ವಾಸನೆಗಾಗಿ.

ಈ ಜೋರು ಮಳೆಯಲ್ಲಿ ಸಂಕು, ತನ್ನ ಕಾಲಿನ ನೋವನ್ನ ಮರೆಯೋದಿಕ್ಕಾಗಿ ಸಾರಾಯಿ ಅಂಗಡಿಯ ಬೆಂಚಿನ ಮೇಲೆ ಕೂತು ಎರಡು ಪೆಗ್ಗು ಸಾರಾಯಿ ಸುರಿದುಕೊಂಡು ಹಲಬುತ್ತಿದ್ದಾನೆ. ಆಗಾಗ ತನ್ನ ಟಾವೆಲಿನಲ್ಲಿ ಕಟ್ಟಿಕೊಂಡ ಚೌ ಚೌ ಬಾತಿನ ಪ್ಯಾಕೇಟನ್ನು ಮುಟ್ಟಿ ನೋಡುತ್ತಾನೆ ಮತ್ತು ತನ್ನ ಕೈಯನ್ನು ತನ್ನೆರಡು ಮೋಣಕಾಲಿನ ಮೇಲಿಟ್ಟು ಸವÀರುತ್ತಾನೆ. ಆ ಎರಡೂ ಕಾಲುಗಳೂ ಅಡಿಕೆ ಮಂಡಿಯ ಜೀತದಾಳುಗಳು, ಸುಮಾರು 20 ವರ್ಷಗಳ ಕಾಲ ಈ ಎರಡೂ ಕಾಲುಗಳು ಕ್ವಿಂಟಲ್‍ಗಳಷ್ಟು ಭಾರವನ್ನು ಹೊತ್ತು ನಡೆದಾಡಿವೆ. ಆ ಭಾರಕ್ಕೆ ಮಂಡಿಯ ನಡುವಿನ ದ್ರವ ಬತ್ತಿ ಹೋಗಿ ಈಗ ಯಮ ಯಾತನೆ ಕೊಡುತ್ತಿದೆ. ಎದ್ದು ನಿಂತು ನಡೆಯುವುದೇ ಭಾರವಾಗಿರುವಾಗ ಇನ್ನು ಈ ದೇಹದ ಮೇಲೆ ಭಾರ ಹೊತ್ತು ನಡೆಯುವುದನ್ನು ನೆನೆದಾಗ ಅವನ ಕಣ್ಣು ನೀರಾಗುತ್ತದೆ. ಪುಶ್ಯನಿಗೆ ಸುರಿಯುವುದೊಂದೇ ಗೊತ್ತು, ಸಂಕುವಿನ ಕಣ್ಣಿರು ಪುಶ್ಯನೆದೆಯ ಅಳವನ್ನು ತಲುಪುವುದೇ ಇಲ್ಲ. ಸರ್ವ ರೋಗಕ್ಕೆ ಸಾರಾಯಿ ಮದ್ದು ಎಂದು ನಂಬಿದ್ದ ಸಂಕು ಪ್ರತಿ ದಿನ ಸಾರಾಯಿ ಕುಡಿದು ತನ್ನ ನೋವನ್ನ ಮರೆಯುತ್ತಿದ್ದ. ಎನೋ ನೆನೆಸಿಕೊಂಡವನಂತೆ ಮೆಲ್ಲಗೆ ಎದ್ದ ಸಂಕು, ಟಾವೆಲನ್ನು ಹೆಗಲಿಗೇರಿಸಿ, ತನ್ನ ಉದ್ದನೇ ಚತ್ರಿಯನ್ನು ಬಿಡಿಸಿ, ಮೆಲ್ಲಗೆ ಕುಂಟು ಹಜ್ಜೆ ಇಡುತ್ತ, ಸುರಿವ ಮಳೆಯಲ್ಲಿ ಸಾರಾಯಿ ಅಂಗಡಿಯಿಂದ ಹೊರ ಬಿದ್ದ.

ಪಾತಿ, ಗಂಡನ ದುಡಿಮೆ ಮನೆಯ ಕರ್ಚಿಗೆ ಸಾಕಾಗದಿದ್ದುದರಿಂದ, ಮೂರು ಮಕ್ಕಳ ಪಾಲನೆ ಕಷ್ಟವಾದುದರಿಂದ, ದೂರದ ವಕಾರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಬೆಳಿಗ್ಗೆ 8ಕ್ಕೆ ಮನೆಯಿಂದ ಹೊರಬಿದ್ದರೆ ಆಕೆ ಮನೆ ಸೇರುತ್ತಿದ್ದುದು ಸಂಜೆ 8ಕ್ಕೆ. ಅಡಿಕೆಯ ಮೇಲಿನ ಚರ್ಮವನ್ನು ಸುಲಿವ ಆಕೆಯ ಕೈಗಳು ಮಳೆಯ ರಭಸಕ್ಕೆ ಮತ್ತು ಚಳಿಗೆ ಬಿಳುಚಿಕೊಂಡಿದ್ದವು. ಸ್ವಲ್ಪ ಶಾಖ ಸಿಕ್ಕರೆ ಸಾಕು ಈ ಕೈಗಳಿಗೆ ಮತ್ತೆ ನಾಳಿನ ಕೆಲಸಕ್ಕೆ ಬಿಡುವೆಲ್ಲಿ! ಬೆಳಿಗ್ಗೆ ಮನೆ ಬಿಟ್ಟ ಆಕೆ ಇನ್ನೂ ಮಕ್ಕಳ ಮುಖ ನೋಡಿಲ್ಲ, ಬೇಗ ಮನೆ ಸೇರೋಣ ಅಂದರೆ ಮಳೆ ಜೋರಾಗಿ ಸುರಿತಾ ಇದೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟರೆ ಮತ್ತಾರು ಇಲ್ಲ, ಸುರಿವ ಮಳೆಗೆ ಎಲ್ಲಿ ಮನೆ ಉದುರಿ ಬಿದ್ದೀತೋ ಎಂಬ ಭಯ, ಚಡಪಡಿಸುತ್ತಿದೆ ಆಕೆಯ ಮನಸ್ಸು.

ಅಮಲು ಸ್ವಲ್ಪ ಜಾಸ್ತಿಯಾದ ಕಾರಣ ಸಂಕು ಎಲ್ಲೋ ಎಡವಿ ಬಿದ್ದು ಮೊಣಕಾಲಿನಿಂದ ರಕ್ತ ಸುರಿಯುತ್ತಿತ್ತು. ಗಾಯದ ಮೇಲೆ ಬರೆ ಎಳೆದಂತಾಗಿತ್ತು ಆತನ ಸ್ಥಿತಿ. ಅಂತೂ ತೂರಾಡುತ್ತ ಮನೆಯ ಬಾಗಿಲನ್ನ ತಲುಪಿದ್ದ ಸಂಕು. ಇತ್ತ ದಾರಿ ಕಾಯುತ್ತ ಕುಳಿತಿದ್ದ ಮಕ್ಕಳಿಗೆ ಗೇಟಿನ ದೊಣಪೆ ಸರಿದಾಡಿದ ಸದ್ದು ಕೇಳಿ ಸ್ವಲ್ಪ ಧೈರ್ಯ ಬಂತು. ಮಕ್ಕಳಿಗೆ ತಂದೆ ಅಂದರೆ ತುಂಬಾ ಪ್ರೀತಿ ಆದರೆ ಆತನ ಕುಡಿತ ಮಕ್ಕಳ ಧೈರ್ಯವನ್ನು ಸೋಲಿಸುತ್ತಿತ್ತು. ಸಂಕುವಿಗೂ ಮಕ್ಕಳೆಂದರೆ ಪ್ರೀತಿ ಆದರೆ ದಿನವಿಡೀ ದುಡಿದು ದಣಿದ ದೇಹ, ಕಾಲಿನ ನೋವು ಮತ್ತು ಕುಡಿತದ ಅಮಲು ಮಕ್ಕಳ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡಿತ್ತು. ಕತ್ತಲೆಯಲ್ಲೇ ತಡವಿಕೊಂಡು, ಬಾಗಿಲಿಗೆ ಇಳಿಬಿಟ್ಟಿದ್ದ ಗೋಣಿ ತಾಟಿನ ತುದಿಯನ್ನ ಎತ್ತಿ ಒಳಗೆ ಅಡಿಯಿಟ್ಟ....ಒಳಗೂ ಕತ್ತಲು, ಬಹುಷಹ ಅವನಿಗೂ ಬೆಳಕು ಬೇಕಿರಲಿಲ್ಲ. ಕೈ ಊರಿ, ಪಕ್ಕದಲ್ಲಿ ಅರ್ಧಕ್ಕೆ ಕಟ್ಟಿದ್ದ ಮಣ್ಣಿನ ಗೋಡೆಯ ಮೇಲೆ ಕೂತು ಬೀಡಿಗಾಗಿ ತಡಕಾಡಿದ. ಅರ್ಧ ಸೇದಿ ಉಳಿದ ಮುರುಕು ಬೀಡಿಯನ್ನು ಬಾಯಿಗಿಟ್ಟು ಕಡ್ಡಿ ಕೀರಿದ; ಮೂಲೆಯಲಿದ್ದ್ಲ ಆರು ಕಣ್ಣುಗಳು ಒಮ್ಮಿಗೆ ಹೊಳೆದವು. ಬೀಡಿಗಂಟಿಸಿದ ಬೇಳಕಲ್ಲಿ ಕಂಡ ಟಾವೆಲಿನ ತುದಿಯಲ್ಲಿ ಕಟ್ಟಿರುವ ಪೊಟ್ಟಣ ಚೌ ಚೌ ಬಾತಿನದೇ ಎಂದು ಮಕ್ಕಳಿಗೆ ಖಾತ್ರಿಯಾಯಿತು. ಮಧ್ಯಾನ್ನ ಗಂಜಿ ಕುಡಿದ ನಂತರ ಹೊಟ್ಟೆಗೆ ಏನೂ ಸಿಕ್ಕಿರಲಿಲ್ಲ, ಆದರೆ ಅಪ್ಪನ ಎದುರು ಹೋಗಿ ಕೇಳಿ ಪಡೆಯುವ ಧ್ಯರ್ಯ ಅವರಿಗಿರಲಿಲ್ಲ. ಸಂಕುವಿನ ಬೀಡಿಯ ಹೊಗೆ ಸುರುಳಿ ಸುರುಳಿಯಾಗಿ ಸೋಗೆ ಮಾಡನ್ನು ಸೇರುತ್ತಿತ್ತು.

ಇತ್ತ ಪಾತಿ ಬಿಡದೇ ಸುರಿಯುತ್ತಿದ್ದ ಮಳೆಗೆ ಹಿಡಿ ಶಾಪ ಹಾಕುತ್ತ, ಇನ್ನೂ ಕಾಯುತ್ತ ಕೂತರೆ ಮನೆಯ ಒಲೆಯಲ್ಲಿ ಬೆಂಕಿ ಉರಿಯಲಿಕ್ಕಿಲ್ಲ ಅಂದುಕೊಂಡವಳೇ ಕೈಯಲ್ಲಿದ್ದ ನಾಲ್ಕು ಅಡಿಕೆ ಮತ್ತು ಚಾಕುವನ್ನು ಸೀರೆಯ ಗಂಟಿಗೆ ಸೇರಿಸಿ ಮಳೆಯಲ್ಲಿ ಮನೆಯ ಕಡೆ ಓಡತೊಡಗಿದಳು. ಸುಮಾರು ಅರ್ಧ ಗಂಟೆಯ ದಾರಿ, ಅಲ್ಲಲ್ಲಿ ಮರದಡಿಯಲ್ಲಿ ನಿಲ್ಲುತ್ತಾ ಅಂತೂ ಮನೆ ಸೇರಿದಾಗ 9 ಗಂಟೆ. ಒಳಗೆ ಬಂದು ಒಲೆಯ ಒಳಗೆ ಹುದುಗಿಸಿಟ್ಟಿದ್ದ ಚಿಮುಣಿ ಬುಡ್ಡಿಯನ್ನು ಹೊತ್ತಿಸಿದವಳೆ ಮೊದಲು ನೋಡಿದ್ದು ಮಕ್ಕಳನ್ನು...ಹಿರಿಯ ಮಗಳು ಗೀತ ಅಮ್ಮ ಬಂದ ಧೈರ್ಯಕ್ಕೆ ಗೋಣಿ ತಾಟಿನ ಹೊದಿಕೆಯಿಂದ ಹೊರ ಬಂದು ಮನೆಯ ವಸ್ತುಗಳನೆಲ್ಲ ಜೋಡಿಸಿಟ್ಟು ಅಮ್ಮನಿಗೆ ನೆರವಾದಳು....ಸಂಕು ಮಾತ್ರ ಬಳಿಯಲ್ಲಿದ್ದ ಕಂಬಳಿಯನ್ನು ಮೈಮೇಲೆ ಎಳೆದುಕೊಂಡು  ಗೊರಕೆ ಹೊಡೆಯಲು ಆರಂಭಿಸಿದ. ಪಾತಿ ಗಂಡನ ಟಾವೆಲಿನೊಳಗಿದ್ದ ಪೊಟ್ಟಣವನ್ನು ಬಿಡಿಸಿ ಅದರಲ್ಲಿದ್ದ ಚೌ ಚೌ ಬಾತನ್ನು ಮಕ್ಕಳಿಗೆ ಹಂಚುತ್ತಿದ್ದಳು, ಇದ್ದಕ್ಕಿದ್ದಂತೆ ಅವಳಿಗೆ ದುಖಃ ಉಮ್ಮಳಿಸಿ ಬಂತು. 

ಇದು ಪಾತಿ ಮತ್ತು ಸಂಕುವಿನ ನಿತ್ಯದ ಕಥೆ. ಅವರ ಎದೆಯಲ್ಲಿ ನೂರು ಕನಸಿತ್ತು, ಚಿಕ್ಕ ಜೋಪಡಿ ಒಂದು ಸುಂದರ ವಾಸಯೋಗ್ಯ ಮನೆಯಾಗಬೇಕು, ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕು, ಮುಂದೊಂದು ದಿನ ಮಕ್ಕಳ ದುಡಿಮೆಯಲ್ಲಿ ಆರಾಮಾಗಿ ಕೂತು ಜೀವನ ಕಳೆಯಬೇಕು, ಯಾರ ಹಂಗು ಇಲ್ಲದೆ ಸ್ವಾಭಿಮಾನದಿಂದ ಬದುಕಬೇಕು...ಹೀಗೆ ಅವರ ಕನಸುಗಳ ಸಾಲು. ಅವರಲ್ಲಿ ಆತ್ಮ ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಅವರು ಬೀಸುವ ಗಾಳಿ, ಮಳೆಗೆ ಹೆದರಲಿಲ್ಲ, ಜನರ ನಿಂದನೆಗೆ ಜಗ್ಗಲಿಲ್ಲ. ಎಷ್ಟೋ ಅವಮಾನಗಳನ್ನ ಸಹಿಸಿಕೊಂಡು ಬದುಕಿನ ಒಂದೊಂದೇ ಮೆಟ್ಟಿಲನ್ನ ಹತ್ತಿದವರು. ಹಗಲಿರುಳು ದುಡಿದು, ಕೂಡಿಟ್ಟು ತಮ್ಮೆಲ್ಲ ಕನಸುಗಳನ್ನು ಸಾಕಾರಗೊಳಿಸಿಕೊಂಡವರು.

ಆದರೆ ಎಲ್ಲವೂ ಅಂದಕೊಂಡಂತೆಯೇ ಆಗಬೇಕಲ್ಲ! ಒಂದು ದಿನ, ಇಡೀ ಸಂಸಾರದ ಬೆನ್ನೆಲುಬಾದ ಸಂಕು ಅಡಿಕೆ ಮಂಡಿಯಲ್ಲಿ ಹೆಣವಾಗಿ ಬಿದ್ದಿದ್ದ. ದಣಿದಿದ್ದ ಆತನ ಕಾಲುಗಳು ಅವನ ನಂಬಿಕೆಗೆ ಮೋಸ ಮಾಡಿದವು; ಭಾರವಾದ ಅಡಿಕೆ ಚೀಲದಡಿಯಲ್ಲಿ ಸಿಕ್ಕು ಸಂಕು ಕೊನೆಯುಸಿರೆಳೆದಿದ್ದ. ಇಡೀ ಸಂಸಾರಕ್ಕೆ ಈ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ತನ್ನ ಪಾಲಿನ ಕರ್ತವ್ಯವನ್ನು ಮುಗಿಸಿದ್ದ ಸಂಕು ಸಂಸಾರದ ಪೂರ್ಣ ಜವಾಬ್ಧಾರಿಯನ್ನು ಪಾತಿಗೆ ಬಿಟ್ಟುಹೋಗಿದ್ದ.

ಪಾತಿ ಧೈರ್ಯವಂತೆ, ಗಂಡ ಸತ್ತ ನಂತರ ಇಡೀ ಸಂಸಾರವನ್ನು ಮತ್ತೆ ತೆಕ್ಕೆಗೆಳೆದುಕೊಂಡು ಸಲಹಲು ಸಿಧ್ಧಳಾದಳು. ಆಕೆ ಗಂಡನಿಂದ ಕಲಿತ ಆದರ್ಶವನ್ನು ಬಿಡಲಿಲ್ಲ, ಆಕೆ ಯಾವತ್ತೂ ನಂಬಿದ್ದು ‘ದುಡಿಯುವವರು ದಣಿವಿಗೆ ಹೆದರುವುದಿಲ್ಲ, ಅವರು ಹೆದರುವುದು ಸುಮ್ಮನೆ ಕೂತಿರುವುದಕ್ಕೆ’ ಎಂಬ ನೀತಿಯನ್ನು.

ಈಗ ಪಾತಿ ಮತ್ತು ಸಂಕುವಿನ ಶ್ರಮ ಫಲಿಸಿದೆ. ಅವರ ನಾಲ್ಕು ಮಕ್ಕಳು ವಿದ್ಯಾವಂತರಾಗಿದ್ದಾರೆ, ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಪಾತಿಯ ಎಲ್ಲಾ ಕನಸುಗಳೂ ಈಡೇರಿವೆ. ಆದರೆ ದುಡಿಮೆಯನ್ನು ನಂಬಿದ್ದ ಪಾತಿ ಈಗಲೂ ಮನೆಯ ಎಲ್ಲಾ ಕೆಲಸಗಳನ್ನೂ ನಿರ್ವಹಿಸುತ್ತಾಳೆ. ಅವಳ ಈ ದುಡಿಮೆಯೇ ಮನೆಯ ಮಕ್ಕಳಿಗೆಲ್ಲ ಆದರ್ಶ ಹಾಗೂ ಸಂಸ್ಕಾರ ಭಲ.

ಜೋರಾಗಿ ಸುರಿದ ಪುಶ್ಯ ಮಳೆ ಈಗ ಹನಿ ಹನಿ ತೊಟ್ಟಿಕುತ್ತಿದೆ. ತಂಪು ಗಾಳಿ ಸುಯ್ಯನೆ ಬೀಸಿ ಮೈ ಮನಗಳನ್ನು ಮುಟ್ಟುತ್ತಿದೆ. ಪಾತಿಯ ಮನಸ್ಸು ಹಗುರಾಗಿದೆ!